ಕಲ್ಪ ಮೀಡಿಯಾ ಹೌಸ್ | ಸಾಗರ |
ಪಟ್ಟಣದ ಜಂಬಗಾರು ಬಡಾವಣೆಯ ಸರ್ವೇ ನಂ. 63ರಲ್ಲಿ 4 ಎಕರೆ ಭೂಮಿ ಅನಧಿಕೃತವಾಗಿ ಖಾತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಸೋಮವಾರ ಸಾಗರ (Sagara) ನಗರಸಭೆಗೆ ದಿಢೀರ್ ಭೇಟಿ ನೀಡಿ, ಸಂಬಂಧಪಟ್ಟ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವದ ತಂಡ ನಗರಸಭೆಗೆ ಭೇಟಿ ನೀಡಿ, ವಿವಾದಿತ ಭೂಮಿಗೆ ಸಂಬಂಧಿಸಿದ ದಾಖಲೆಗಳು, ಖಾತೆ ಬದಲಾವಣೆ ಹಾಗೂ ನಿವೇಶನಗಳ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿತು.
4 ಎಕರೆ ಭೂಮಿ ಖಾತೆ ಬದಲಾವಣೆ ಆರೋಪ
ಈ ಕುರಿತು ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್, ನಗರಸಭೆ ವ್ಯಾಪ್ತಿಯ ಜಂಬಗಾರು ಬಡಾವಣೆಯ ಸರ್ವೇ ನಂ. 63ರಲ್ಲಿ ಮೂಲತಃ ಅಶ್ವತ್ಥನಾರಾಯಣ ಎಂಬುವವರ ಹೆಸರಿನಲ್ಲಿದ್ದ ಸುಮಾರು 4 ಎಕರೆ ಜಮೀನು ಶರಾವತಿ ಜನಾಭಿವೃದ್ಧಿ ಸಂಸ್ಥೆಯ ಹೆಸರಿಗೆ ನೋಂದಣಿಯಾಗಿತ್ತು ಎಂದು ತಿಳಿಸಿದರು.
ಭೂಮಿ ಖಾಲಿ ಇರುವುದನ್ನು ಗಮನಿಸಿದ ಅನಿಲ್‌ಕುಮಾರ್ ಎಂಬಾತ, ಅಶ್ವತ್ಥನಾರಾಯಣ ಅವರು ತಮ್ಮ ಪರವಾಗಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿಕೊಟ್ಟಿದ್ದಾರೆ ಎಂದು ಹೇಳಿಕೊಂಡು, ನಗರಸಭೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ನಿವೇಶನಗಳನ್ನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ ಎಂದು ಹೇಳಿದರು.
ಈ ಮೂಲಕ ಸರ್ಕಾರಿ ಅಥವಾ ಸಂಬಂಧಪಟ್ಟ ಸಂಸ್ಥೆಗೆ ಸೇರಬೇಕಾದ ಭೂಮಿಯ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ನಿವೇಶನಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.
Also Read>> ಸಾಗರ ಬಳಿ ಟೆಂಪೋ ಪಲ್ಟಿ | ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾದ ಟೊಮೆಟೊ
Lokayukta Raid : ಲೋಕಾಯುಕ್ತರಿಂದ ಸುಮೋಟೋ ಪ್ರಕರಣ ದಾಖಲು
ಜಂಬಗಾರು ಬಡಾವಣೆಯಲ್ಲಿನ ಭೂಮಿ ಮತ್ತು ನಿವೇಶನಗಳಿಗೆ ಸಂಬಂಧಿಸಿದ ಅಕ್ರಮದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಪ್ರಕರಣದ ತನಿಖೆಯ ಭಾಗವಾಗಿ ನಗರಸಭೆಯ ದಾಖಲೆಗಳು ಹಾಗೂ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಭೂಮಿಯ ಮೂಲ ದಾಖಲೆಗಳು, ಖಾತೆ ಬದಲಾವಣೆ ಪ್ರಕ್ರಿಯೆ, ನಿವೇಶನಗಳ ನೋಂದಣಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ವಿವರಗಳನ್ನು ಅಧಿಕಾರಿಗಳಿಂದ ಪಡೆದುಕೊಳ್ಳಲಾಗುತ್ತಿದೆ ಎಂದು ಡಿವೈಎಸ್‌ಪಿ ಚಂದ್ರಶೇಖರ್ ತಿಳಿಸಿದರು.
ದಾಖಲೆಗಳ ಪರಿಶೀಲನೆ
ಸೋಮವಾರ ನಗರಸಭೆಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಖಾತೆ ಯಾವ ಆಧಾರದ ಮೇಲೆ ಬದಲಾಗಿದೆ, ನಗರಸಭೆಗೆ ಯಾವ ದಾಖಲೆಗಳನ್ನು ಸಲ್ಲಿಸಲಾಗಿತ್ತು, ಅವುಗಳ ಸತ್ಯಾಸತ್ಯತೆ ಪರಿಶೀಲಿಸಲಾಗಿದೆಯೇ ಹಾಗೂ ನಿವೇಶನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತು ಮಾಹಿತಿ ಸಂಗ್ರಹಿಸಿದರು.
ಅಕ್ರಮಕ್ಕೆ ಸಂಬಂಧಿಸಿದಂತೆ ಯಾರಾದರೂ ಅಧಿಕಾರಿಗಳು ಅಥವಾ ಸಿಬ್ಬಂದಿ ಕರ್ತವ್ಯಲೋಪ ಎಸಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ. ದಾಖಲೆಗಳ ಪರಿಶೀಲನೆ ಹಾಗೂ ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ನೈಜ ಚಿತ್ರಣ ಹೊರಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತರ ದಿಢೀರ್ ಭೇಟಿ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕದ ವಾತಾವರಣ ಕಂಡುಬಂದಿತು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ರುದ್ರೇಶ್, ವೀರಬಸಪ್ಪ ಹಾಗೂ ಸಿಬ್ಬಂದಿಗಳಾದ ಟೀಕಪ್ಪ, ಮಂಜುನಾಥ್, ಸುರೇಂದ್ರ, ಆದರ್ಶ, ಚಂದ್ರಿಬಾಯಿ, ಅಂಜಲಿ, ಚೇತನ್ ಮತ್ತು ಆನಂದ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










