ಕಲ್ಪ ಮೀಡಿಯಾ ಹೌಸ್ | ಲಂಡನ್ |
ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಬ್ರೈಡನ್ ಕಾರ್ಸ್ (Brydon Carse) ವಿವಾದಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಡರ್ಬಿಯ ನೈಟ್‌ಕ್ಲಬ್‌ವೊಂದರ ಹೊರಗೆ ಪೊಲೀಸರು ಅವರನ್ನು ಕೈಕೋಳ ಹಾಕಿ ಕರೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ಆರಂಭಿಸಿದೆ.
ಆಗಸ್ಟ್ 27ರಂದು ಲಾರ್ಡ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಸ್ತುತ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಕಾರ್ಸ್ ಅವರನ್ನು ಇಂಗ್ಲೆಂಡ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಮೊದಲ ಟೆಸ್ಟ್‌ನ ಆಡುವ ಹನ್ನೊಂದರಲ್ಲಿ ಅವರಿಗೆ ಅವಕಾಶ ನೀಡಲಾಗಿರಲಿಲ್ಲ.
ಮೊದಲ ಟೆಸ್ಟ್ ಬಳಿಕ ಕಾರ್ಸ್ ಅವರಿಗೆ ಡರ್ಹಾಮ್ ಪರ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡುವ ಅವಕಾಶ ನೀಡಲಾಗಿತ್ತು. ಡರ್ಹಾಮ್ ತಂಡವು ಡರ್ಬಿಶೈರ್ ವಿರುದ್ಧದ ಪಂದ್ಯವನ್ನು ಕೇವಲ ಮೂರು ದಿನಗಳಲ್ಲಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಕಾರ್ಸ್ 26 ರನ್ ಗಳಿಸುವುದರ ಜೊತೆಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದರು.
ಪಂದ್ಯದ ಬಳಿಕ ನೈಟ್‌ಕ್ಲಬ್‌ಗೆ ತೆರಳಿದ್ದ ಕಾರ್ಸ್
ಡರ್ಬಿಶೈರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಬ್ರೈಡನ್ ಕಾರ್ಸ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಡರ್ಬಿಯ ನೈಟ್‌ಕ್ಲಬ್‌ಗೆ ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ನೈಟ್‌ಕ್ಲಬ್‌ನ ಹೊರಗೆ ಅವರನ್ನು ಪೊಲೀಸರು ಕೈಕೋಳ ಹಾಕಿ ಕರೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Also read>> ಶಿವಮೊಗ್ಗ ಜೈಲಿನಲ್ಲಿ 1.64 ಲಕ್ಷ ಮೌಲ್ಯದ ಫೋನ್ ಉಪಕರಣ ಧ್ವಂಸ, ಆಗಿದ್ದೇನು
ವಿಡಿಯೋ ವೈರಲ್ ಆದ ಬಳಿಕ ಪ್ರಕರಣದ ಕುರಿತು ಕ್ರಿಕೆಟ್ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಘಟನೆಗೆ ಸಂಬಂಧಿಸಿದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಕಾರ್ಸ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.
ECB ತನಿಖೆ ಆರಂಭ
ವಿವಾದದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಕರಣದ ಕುರಿತು ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆ ಇಂಗ್ಲೆಂಡ್ ತಂಡಕ್ಕೆ ಮುಜುಗರ ತಂದಿದೆ.
ಕಾರ್ಸ್ ಅವರು ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆಯೇ ಅಥವಾ ಘಟನೆಯ ತನಿಖೆಯ ಹಿನ್ನೆಲೆಯಲ್ಲಿ ಅವರ ಆಯ್ಕೆಯ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಈ ಕುರಿತು ECBಯ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









