ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ (Sagara) ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ಯುವತಿಯೊಬ್ಬರು ಸ್ಥಳದಲ್ಲೇ ಸಾವುಕಂಡಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತ ಯುವತಿಯನ್ನು ಮಳೂರು ಗ್ರಾಮದ ಅರ್ಚನಾ (28) ಎಂಬ ಗುರುತಿಸಲಾಗಿದ್ದು, ತಂದೆ ನೀಲಕುಮಾರ್ (೫೦) ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಮಳೂರು ಗ್ರಾಮದ ನಿವಾಸಿ ನೀಲಕುಮಾರ್ ಜೈನ್ ಹಾಗೂ ಅವರ ಪುತ್ರಿ ಅರ್ಚನಾ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತಂದೆ-ಮಗಳು ನೆಲ್ಲಿಬೀಡು ವೃತ್ತದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ, ಅದೇ ಮಾರ್ಗದಲ್ಲಿ ಬಂದ ಮರಳು ತುಂಬಿದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಅರ್ಚನಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್‌ನ ಚಕ್ರ ಅವರ ತಲೆ ಭಾಗದ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಈ ಮಾರ್ಗದಲ್ಲಿ ಮರಳು ಲಾರಿಗಳ ಅತಿವೇಗದ ಸಂಚಾರಕ್ಕೆ ತಕ್ಷಣ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಾಹಿತಿ ತಿಳಿದು ಕಾರ್ಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








