ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಿರುಪತಿಯಿಂದ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು (Vande Bharat Train) ಸೇವೆ ಆರಂಭವಾಗಲಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯವಾದುದಲ್ಲ ಎಂದು (Shivamogga) ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಈವರೆಗೆ ತಿರುಪತಿ-ಶಿವಮೊಗ್ಗ ವಂದೇ ಭಾರತ್ ರೈಲು ಸೇವೆ ಅಥವಾ ಅದರ ವೇಳಾಪಟ್ಟಿ ಅಂತಿಮಗೊಂಡಿಲ್ಲ. ಈ ಕುರಿತು ಕೆಲವರು ಚರ್ಚೆ ನಡೆಸಿರುವುದು ಮಾತ್ರ ನಡೆದಿದೆ ಎಂದು ಅವರು ಹೇಳಿದರು.
ಅಧಿಕೃತವಾಗಿ ಸೇವೆ ಅಂತಿಮಗೊಂಡ ಬಳಿಕವೇ ಅದರ ಕುರಿತು ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
Shivamogga : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್’ಗೆ ಸಿದ್ಧತೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ ಎಂದು ಸಂಸದರು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಭೌತಿಕ ಪರಿಶೀಲನೆ ನಡೆದಿದ್ದು, ಆಂಟೆನಾ ಮತ್ತು ಟವರ್ಗಳ ಅಳವಡಿಕೆ ಸೇರಿದಂತೆ ಕೆಲವು ಕಾಮಗಾರಿಗಳು ಬಾಕಿ ಉಳಿದಿವೆ. ನೈಟ್ ಲ್ಯಾಂಡಿಂಗ್’ಗೆ ಅನುಮತಿ ದೊರೆತ ಬಳಿಕ ಸಂಜೆ ವೇಳೆಯಲ್ಲಿಯೂ ವಿಮಾನಗಳ ಕಾರ್ಯಾಚರಣೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದರು.
ಈ ಪ್ರಕ್ರಿಯೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು 77ನೇ ಕ್ರಮಾಂಕದಲ್ಲಿ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ತಿಂಗಳ 25ರಿಂದ SpiceJet ಸೇವೆ ಆರಂಭಿಸುವ ಕುರಿತು ಪ್ರಕ್ರಿಯೆ ನಡೆಯುತ್ತಿದೆ ಎಂದರು.
Also read>> ದಸರಾ, ದೀಪಾವಳಿ, ಛತ್ ಹಬ್ಬ: ಬೆಂಗಳೂರು, ಹುಬ್ಬಳ್ಳಿ ಸೇರಿ 8 ವಿಶೇಷ ರೈಲುಗಳ ಅವಧಿ ವಿಸ್ತರಣೆ
ರೈಲ್ವೆ ಕಾಮಗಾರಿಗೆ ಜಮೀನು: ರೈತರೊಂದಿಗೆ ಮಾತುಕತೆಗೆ ಆದ್ಯತೆ
ರೈಲ್ವೆ ಕಾಮಗಾರಿಗಳಿಗೆ ಬಹುತೇಕ ರೈತರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಕೆಲವು ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಸಂಸದರು ತಿಳಿಸಿದರು.
ಮಾರಾವಳ್ಳಿ ಸಮೀಪ ಪರಿಹಾರ ಸಿಗದಿರುವುದನ್ನು ವಿರೋಧಿಸಿ ಸುಮಾರು 25ರಿಂದ 30 ರೈತರು ಪ್ರತಿಭಟನೆ ನಡೆಸಿದ್ದರು. ಅವರ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನೊಂದು ಹತ್ತು ದಿನಗಳಲ್ಲಿ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಇನ್ನೂ ಒಬ್ಬಿಬ್ಬರು ರೈತರು ಜಮೀನು ನೀಡಲು ಒಪ್ಪದಿರುವ ಪರಿಸ್ಥಿತಿ ಇದೆ. ಆದರೆ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವ ಬದಲು ಮಾತುಕತೆ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಲಾಗುವುದು ಎಂದು ರಾಘವೇಂದ್ರ ಹೇಳಿದರು.
ಸೆ.17ರಿಂದ ಸೇವಾ ಸಂಕಲ್ಪ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸದರು ತಿಳಿಸಿದರು.
ಒಂದು ತಿಂಗಳ ಅವಧಿಯಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸೆಪ್ಟೆಂಬರ್ 17ರಂದು ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಮನೆಗಳ ಮುಂದೆ ಆಶೀರ್ವಾದದ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸೆಪ್ಟೆಂಬರ್ 18ರಿಂದ 24ರವರೆಗೆ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸೈಕಲ್ ಜಾಥಾ ಹಾಗೂ ಬೀದಿ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸೆ.25ರಂದು ದೀನ್ ದಯಾಳ್ ಉಪಾಧ್ಯಾಯ ಜಯಂತಿ ಹಾಗೂ ಅ.2ರಂದು ಗಾಂಧಿ ಜಯಂತಿ ಅಂಗವಾಗಿ ಖಾದಿ-ಸ್ವದೇಶಿ ಸಂತೆ ಆಯೋಜಿಸಲಾಗುವುದು. ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆಗಳನ್ನೂ ನಡೆಸಲಾಗುವುದು ಎಂದು ತಿಳಿಸಿದರು.
ಅ.17ರಂದು ಬೃಹತ್ ಮಾನವ ರಂಗೋಲಿ ಹಾಗೂ ಸೇವಾ ಜ್ಯೋತಿ ಬೆಳಗಿಸುವ ಮೂಲಕ ಒಂದು ತಿಂಗಳ ಸೇವಾ ಸಂಕಲ್ಪ ಅಭಿಯಾನಕ್ಕೆ ಸಮಾರೋಪ ನಡೆಯಲಿದೆ ಎಂದರು.
ಕ್ಷೇತ್ರದ ನಾಗರಿಕರು, ಯುವಜನತೆ ಹಾಗೂ ತಾಯಂದಿರು ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಂಸದರು ಮನವಿ ಮಾಡಿದರು.
2,000ಕ್ಕೂ ಅಧಿಕ ಯುಪಿಐ ವಹಿವಾಟು ಶುಲ್ಕದ ಬಗ್ಗೆ ಸ್ಪಷ್ಟನೆ
2,000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ ಎಂಬ ವಿಷಯದಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಮೂಡಬಾರದು ಎಂದು ಹೇಳಿದರು.
2,000ಕ್ಕಿಂತ ಹೆಚ್ಚಿನ ಕೆಲವು ವಹಿವಾಟುಗಳಲ್ಲಿ ಸೇವಾ ಶುಲ್ಕದ ವಿಚಾರ ಪ್ರಸ್ತಾಪವಾಗುತ್ತಿದೆ. ಆದರೆ ಇದನ್ನು ಆಧರಿಸಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಬಳಕೆ ವ್ಯಾಪಕವಾಗಿದ್ದು, ಜನರು ಅದಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






