ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ಐದನೇ ವರ್ಷದ ಗಣೇಶೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳನ್ನು ಉತ್ಸಾಹದಿಂದ ಆಯೋಜಿಸಲಾಯಿತು.
ಮಹಿಳೆಯರಿಗೆ ಚುಕ್ಕಿ ರಂಗೋಲಿ ಸ್ಪರ್ಧೆ, 1ರಿಂದ 5 ವರ್ಷದ ಮಕ್ಕಳಿಗೆ ಚೆಂಡಿನೊಂದಿಗೆ ಆಟ ಹಾಗೂ ಹಿಟ್ಟು ಕಲೆಸುವ ಆಟ, 5ರಿಂದ 10 ವರ್ಷದ ಮಕ್ಕಳಿಗೆ ಬಟ್ಟೆ ಪಿನ್ ಜೋಡಿಸುವ ಆಟ ಮತ್ತು ಮೆಮೊರಿ ಟೆಸ್ಟ್, 10ರಿಂದ 15 ವರ್ಷದ ಮಕ್ಕಳಿಗೆ ಪಿರಮಿಡ್ ಜೋಡಿಸುವುದು ಹಾಗೂ ವರ್ಡ್ ಬಿಲ್ಡಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಡಾವಣೆಯ ನಿವಾಸಿಗಳು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷತ್‌ನ ಸಹ ಕಾರ್ಯದರ್ಶಿ ಜಯಶ್ರೀ ಶಿವರಾಂ ಹಾಗೂ ಸಾಹಿತಿ ಗಾಯತ್ರಿ ಸುಂದರೇಶ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಸಹ ಕಾರ್ಯದರ್ಶಿ ಜಯಶ್ರೀ ಶಿವರಾಂ, “ರಂಗೋಲಿ ನಮ್ಮ ಹಿಂದೂ ಸಂಸ್ಕೃತಿಯ ಭಾಗವಾಗಿದೆ. ಪ್ರತಿಯೊಬ್ಬ ಮಹಿಳೆಯೂ ರಂಗೋಲಿಯನ್ನು ಸಂಭ್ರಮದಿಂದ ಹಾಕುತ್ತೇವೆ. ಆದರೆ ಇಂದಿನ ಯುವತಿಯರಲ್ಲಿ ಕೆಲವರು ರಂಗೋಲಿ ಹಾಕಲು ಕಷ್ಟಪಡುತ್ತಿದ್ದಾರೆ. ಮನೆ ಬಾಗಿಲಿಗೆ ಪೇಂಟ್ ಬಳಸಿ ವಿನ್ಯಾಸಗಳನ್ನು ಹಾಕುವ ಪ್ರವೃತ್ತಿಯಿಂದ ಸಾಂಪ್ರದಾಯಿಕ ರಂಗೋಲಿ ಕಲೆ ಮರೆಯಾಗುವ ಸಾಧ್ಯತೆಯಿದೆ. ಮನೆಯಲ್ಲಿ ಮಕ್ಕಳಿಗೆ ರಂಗೋಲಿ ಹಾಕುವುದು, ಹೂ ಕಟ್ಟುವುದು ಹಾಗೂ ಹಬ್ಬಗಳಿಗೆ ಪ್ರಸಾದದ ತಿಂಡಿಗಳನ್ನು ತಯಾರಿಸುವುದನ್ನು ಕಲಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ಧಾರ್ಮಿಕ ಆಚರಣೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು,” ಎಂದು ಎಚ್ಚರಿಸಿದರು.
Also read>> ಶಿವಮೊಗ್ಗದ ವಂದೇ ಭಾರತ್ ರೈಲು ಕುರಿತಾಗಿ ಸಂಸದ ರಾಘವೇಂದ್ರ ಮಹತ್ವದ ಸ್ಪಷ್ಟನೆ
ಸಾಹಿತಿ ಗಾಯತ್ರಿ ಸುಂದರೇಶ್ ಮಾತನಾಡಿ, “ರಂಗೋಲಿ ಮತ್ತು ಕ್ರೀಡೆಗಳು ನಮ್ಮನ್ನು ಒಂದುಗೂಡಿಸುವ ಚಟುವಟಿಕೆಗಳಾಗಿವೆ. ರಂಗೋಲಿ ಒಂದು ವಿಜ್ಞಾನವೂ ಹೌದು. ಅದನ್ನು ಹಾಕುವುದರಿಂದ ಮಾನಸಿಕ ಶಾಂತಿ ಹಾಗೂ ಏಕಾಗ್ರತೆ ದೊರೆಯುತ್ತದೆ. ಮಹಿಳೆಯರು ಇಂದು ಕೇವಲ ಮನೆಯೊಳಗಿನ ಕೆಲಸಗಳಿಗೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ಸಬಲೀಕರಣ ಪ್ರತಿಯೊಂದು ಮನೆಯಲ್ಲಿ ಆಗಬೇಕು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಪುನೀತ್, ವಿಶ್ವ ಹಿಂದೂ ಪರಿಷತ್ ವತಿಯಿಂದ ಬಡಾವಣೆಯ ನಿವಾಸಿಗಳಿಗೆ ಗಣಪತಿ ವಿತರಿಸಿ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್, ಗಣೇಶೋತ್ಸವ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣಾಚಾರಿ, ಮಂಜುನಾಥ್, ಮೋಹನ್, ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ ಕೂಡ್ಲೂರು ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಸ್ಪರ್ಧೆಗಳ ವಿಜೇತರು
- ರಂಗೋಲಿ ಸ್ಪರ್ಧೆ: ಪ್ರಥಮ – ಚೈತ್ರ; ದ್ವಿತೀಯ – ಕವನ; ತೃತೀಯ – ಶೈಲಾ ರಮೇಶ್.
- ಚೆಂಡಿನೊಂದಿಗೆ ಆಟ (1–5 ವರ್ಷ): ಪ್ರಥಮ – ಕರಣ್ ಕೀರ್ತಿ; ದ್ವಿತೀಯ – ಅಪ್ರಮೇಯ; ತೃತೀಯ – ಪರಮ್ ಪಿ. ಜೈನ್.
- ಹಿಟ್ಟು ಕಲೆಸುವ ಆಟ (1–5 ವರ್ಷ): ಪ್ರಥಮ – ಮಹಿಶ್ರೀ; ದ್ವಿತೀಯ – ಕರಣ್ ಕೀರ್ತಿ; ತೃತೀಯ – ಪರಮ್ ಪಿ. ಜೈನ್.
- ಬಟ್ಟೆ ಪಿನ್ ಜೋಡಿಸುವ ಆಟ (5–10 ವರ್ಷ): ಪ್ರಥಮ – ಪೃಥು ಪಿ. ಅದ್ವೈತ್; ದ್ವಿತೀಯ – ಮನ್ವಿಕ್; ತೃತೀಯ – ಹರಿಕೃಷ್ಣ.
- ಮೆಮೊರಿ ಟೆಸ್ಟ್ (5–10 ವರ್ಷ): ಪ್ರಥಮ – ಉಪಮನ್ಯು; ದ್ವಿತೀಯ – ಅನ್ವಿತ್; ತೃತೀಯ – ಪೃಥು ಪಿ. ಅದ್ವೈತ್.
- ಪಿರಮಿಡ್ ಜೋಡಿಸುವುದು (10–15 ವರ್ಷ): ಪ್ರಥಮ – ವಿಷ್ಣು ಕಶ್ಯಪ್; ದ್ವಿತೀಯ – ಹರಣ್ ಪಿ. ಜೈನ್; ತೃತೀಯ – ಬ್ರಿಜೇಶ್
- ವರ್ಡ್ ಬಿಲ್ಡಿಂಗ್: ಪ್ರಥಮ – ವಿಷ್ಣು ಕಶ್ಯಪ್; ದ್ವಿತೀಯ – ಹಂಸಿಕ; ತೃತೀಯ – ಸಮೃದ್ಧ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







