ಕಲ್ಪ ಮೀಡಿಯಾ ಹೌಸ್ | ಬೀದರ್ |
(Bidar) ಕಲ್ಯಾಣ ಕರ್ನಾಟಕ ಭಾಗದಲ್ಲಿ 371(ಜೆ) ಮೀಸಲಾತಿ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಗೊಂಡು ಕಳೆದ ಸುಮಾರು ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 800ಕ್ಕೂ ಅಧಿಕ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಸೇವೆಯನ್ನು ರಕ್ಷಿಸುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ (Shylendra Beldale) ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D K Shivakumar) ಅವರಿಗೆ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ 2023ರ ಫೆಬ್ರವರಿ 1ರಂದು ಸುತ್ತೋಲೆ ಹೊರಡಿಸಿತ್ತು. ಇದರ ಆಧಾರದ ಮೇಲೆ 371(ಜೆ) ಮೀಸಲಾತಿ ಹಾಗೂ ಮೆರಿಟ್ ಆಧಾರದಲ್ಲಿ ನೇಮಕಗೊಂಡಿರುವ ನೌಕರರು ಕಳೆದ ಮೂರು ವರ್ಷಗಳಿಂದ ವಿವಿಧ ಇಲಾಖೆಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವರು ಈಗಾಗಲೇ ತಮ್ಮ ಪರಿವೀಕ್ಷಣಾ ಅವಧಿಯನ್ನೂ ಪೂರ್ಣಗೊಳಿಸಿದ್ದಾರೆ.
Bidar : ಶಿಕ್ಷಕರಲ್ಲಿ ಉದ್ಯೋಗದ ಭವಿಷ್ಯದ ಕುರಿತು ಆತಂಕ
ಸೆಪ್ಟೆಂಬರ್ 17ರಂದು ಮಾನ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಶಿಕ್ಷಕರಲ್ಲಿ ಉದ್ಯೋಗದ ಭವಿಷ್ಯದ ಕುರಿತು ಆತಂಕ ಮೂಡಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
Also read>> ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿ ಅರಿಯಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ
ಸರ್ಕಾರದ ಅಧಿಕೃತ ಸುತ್ತೋಲೆ ಹಾಗೂ ನೇಮಕಾತಿ ಪ್ರಕ್ರಿಯೆಯ ಮೂಲಕ ಅರ್ಹತೆಯ ಆಧಾರದ ಮೇಲೆ ಆಯ್ಕೆಯಾಗಿ, ಯಾವುದೇ ತಪ್ಪಿಲ್ಲದೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಮೇಲೆ ಈಗ ಉಂಟಾಗಿರುವ ಪರಿಸ್ಥಿತಿ ಅನ್ಯಾಯವಾಗದಂತೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.
ಈ ನೌಕರರು ಮತ್ತು ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ಅವರ ಸೇವೆ ಮತ್ತು ಕುಟುಂಬಗಳ ಭವಿಷ್ಯವನ್ನು ಪರಿಗಣಿಸಿ ಸೇವಾ ಭದ್ರತೆ ಕಲ್ಪಿಸುವುದು, ಈಗಾಗಲೇ ಸಲ್ಲಿಸಿರುವ ಸೇವೆಯನ್ನು ರಕ್ಷಿಸುವುದು ಹಾಗೂ ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಅವರಿಗೆ ಶಾಸಕರು ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದ ಯುವಜನರಿಗೆ 371(ಜೆ) ಅಡಿಯಲ್ಲಿ ದೊರೆಯಬೇಕಾದ ಉದ್ಯೋಗಾವಕಾಶಗಳು ಹಾಗೂ ಈಗಾಗಲೇ ನೇಮಕಗೊಂಡಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಡಾ. ಶೈಲೇಂದ್ರ ಬೆಲ್ದಾಳೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







