ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಅವರಿಗೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿ (Approver)ಯನ್ನಾಗಿ ಪರಿಗಣಿಸಿರುವ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಸೆಷನ್ಸ್ ಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಕ್ರಮ ಕಾನೂನುಬಾಹಿರ ಎಂಬುದಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ತಿಳಿಸಿದೆ.
ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ. ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯನ್ನು ಸಹ ಆರೋಪಿಗಳು ನೇರವಾಗಿ ಪ್ರಶ್ನಿಸಲು ಯಾವುದೇ ಕಾನೂನುಬದ್ಧ ಹಕ್ಕು ಹೊಂದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Renukaswamy Murder Case : ಮಾಫಿ ಸಾಕ್ಷಿ ಪ್ರಕ್ರಿಯೆಯಲ್ಲಿ ಪ್ರಾಸಿಕ್ಯೂಷನ್‌ಗೆ ಪ್ರಮುಖ ಪಾತ್ರ
ಮಾಫಿ ಸಾಕ್ಷಿಗೆ ಸಂಬಂಧಿಸಿದ ಪ್ರಕ್ರಿಯೆಯು ಆರೋಪಿ ಮತ್ತು ನ್ಯಾಯಾಲಯದ ನಡುವಿನ ಪ್ರಕ್ರಿಯೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಪ್ರಾಸಿಕ್ಯೂಷನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. ವಿಚಾರಣಾ ನ್ಯಾಯಾಲಯವು ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಅಗತ್ಯವಾದ ಕಾರಣಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಆದರೆ, ಪ್ರದೋಷ್ ಅವರನ್ನು ವಿಚಾರಣೆಯ ಸಂದರ್ಭದಲ್ಲಿ ಪಾಟೀ ಸವಾಲು (Cross Examination) ನಡೆಸುವ ಸಂಪೂರ್ಣ ಹಕ್ಕು ದರ್ಶನ್ ಪರ ವಕೀಲರಿಗೆ ಇದೆ ಎಂದು ಹೈಕೋರ್ಟ್ ತಿಳಿಸಿತು.
“ವಿಚಾರಣೆಯ ಸಂದರ್ಭದಲ್ಲಿ ಪ್ರದೋಷ್ ಅವರನ್ನು ನಿಮಗೆ ಬೇಕಾದ ರೀತಿಯಲ್ಲಿ ಪ್ರಶ್ನಿಸಬಹುದು. ನಿಮ್ಮ ಕಕ್ಷಿದಾರರು ದರ್ಶನ್ ಕೂಡ ವಿಚಾರಣೆಗೆ ಹಾಜರಾಗಲು ಈಗಾಗಲೇ ಅನುಮತಿ ನೀಡಲಾಗಿದೆ. ನಿಮಗೆ ಕೇಳಬೇಕಾದ ಪ್ರಶ್ನೆಗಳನ್ನು ಟ್ರಯಲ್ ಕೋರ್ಟ್ ಮುಂದೆ ಪ್ರಸ್ತುತಪಡಿಸಿ” ಎಂದು ನ್ಯಾಯಪೀಠ ದರ್ಶನ್ ಪರ ವಕೀಲರಿಗೆ ಸೂಚಿಸಿದೆ.
ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪವನ್ನು ಕೋರ್ಟ್ ಒಪ್ಪಲಿಲ್ಲ
ಪ್ರದೋಷ್ ಜೈಲಿನಲ್ಲಿದ್ದಾಗ ಅಕ್ರಮವಾಗಿ ಮೊಬೈಲ್ ಬಳಸಿಕೊಂಡು ಇತರರೊಂದಿಗೆ ಸಂಪರ್ಕ ಸಾಧಿಸಿದ್ದರು. ಬಳಿಕ ಒತ್ತಡಕ್ಕೆ ಒಳಗಾಗಿ ಮಾಫಿ ಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಅವರ ಹೇಳಿಕೆ ದಾಖಲಿಸಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು.
ಆದರೆ, ಈ ವಾದವನ್ನು ಹೈಕೋರ್ಟ್ ಒಪ್ಪಲಿಲ್ಲ. ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರದೋಷ್ ತಮ್ಮ ಪತ್ನಿಯೊಂದಿಗೆ ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ರಹಸ್ಯ ಅಥವಾ ಅಪರಾಧದ ಅಂಶ ಕಂಡುಬರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರದೋಷ್ ಅಕ್ರಮವಾಗಿ ಮೊಬೈಲ್ ಬಳಸಿದ್ದಾರೆ ಎಂಬ ಆರೋಪಕ್ಕೂ ಸೂಕ್ತ ಆಧಾರ ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಪ್ರಾಸಿಕ್ಯೂಷನ್ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಮರುದಿನವೇ ಒಪ್ಪಿಗೆ ನೀಡಿರುವುದರಲ್ಲಿ ಯಾವುದೇ ಕಾನೂನುಬಾಹಿರತೆ ಕಾಣುವುದಿಲ್ಲ ಎಂದು ತಿಳಿಸಿದೆ.
Also read>> 800ಕ್ಕೂ ಅಧಿಕ ಸರ್ಕಾರಿ ನೌಕರರ ಸೇವಾ ರಕ್ಷಣೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ
ಅಧಿಕೃತ ಲ್ಯಾಂಡ್‌ಲೈನ್‌ನಿಂದ ಪತ್ನಿಯೊಂದಿಗೆ ಮಾತನಾಡಿದ್ದರು: ಎಸ್‌ಪಿಪಿ
ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಅವರು, ಪ್ರದೋಷ್ ಯಾವುದೇ ಅಕ್ರಮ ಮೊಬೈಲ್ ಬಳಕೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅವರು ಜೈಲಿನ ಅಧಿಕೃತ ಲ್ಯಾಂಡ್‌ಲೈನ್ ಮೂಲಕ ತಮ್ಮ ಪತ್ನಿಯೊಂದಿಗೆ ಮಾತ್ರ ಮಾತನಾಡಿದ್ದರು. ಈ ಸಂಭಾಷಣೆಯಲ್ಲಿ ಯಾವುದೇ ದುರುದ್ದೇಶ ಅಥವಾ ಅಪರಾಧದ ಅಂಶವಿಲ್ಲ ಎಂದು ಎಸ್‌ಪಿಪಿ ವಾದಿಸಿದರು.
ಇದೇ ವೇಳೆ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸುವ ಮೂಲಕ ವಿಚಾರಣಾ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದರು.
ವಿಜಯಲಕ್ಷ್ಮಿ ಪರ ನ್ಯಾಯಮೂರ್ತಿ ಮಾನವೀಯ ಅಭಿಪ್ರಾಯ
ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿರುವುದಕ್ಕೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಮಧ್ಯಪ್ರವೇಶಿಸಿ ಮಾನವೀಯ ನೆಲೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
“ನ್ಯಾಯದ ಘಂಟೆಯನ್ನು ಯಾರಾದರೂ ಬಾರಿಸಲಿ ಬಿಡಿ. ಬೇರೆ ಯಾರೋ ಅರ್ಜಿ ಹಾಕಿಲ್ಲ, ಅವರ ಪತ್ನಿಯೇ ಅರ್ಜಿ ಸಲ್ಲಿಸಿದ್ದಾರೆ. ಪತಿ ವಾಪಸ್ ಬರಲಿ ಎಂದು ಪತ್ನಿ ಒದ್ದಾಡುತ್ತಿದ್ದಾರೆ, ದೇವಸ್ಥಾನಗಳಲ್ಲಿ ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗ ಅವರ ಹಕ್ಕಿನ ಬಗ್ಗೆ ಆಕ್ಷೇಪಿಸುವುದು ಬೇಡ” ಎಂಬರ್ಥದಲ್ಲಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಪದೇ ಪದೇ ಅರ್ಜಿಗಳಿಂದ ವಿಚಾರಣೆ ವಿಳಂಬ: ಪ್ರದೋಷ್ ಪರ ವಕೀಲ
ಪ್ರದೋಷ್ ಪರ ವಕೀಲ ದಿವಾಕರ್ ಅವರು, ದರ್ಶನ್ ಪರವಾಗಿ ಪದೇ ಪದೇ ಅರ್ಜಿಗಳನ್ನು ಸಲ್ಲಿಸುವ ಮೂಲಕ ವಿಚಾರಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ವಾದಿಸಿದರು.
ಪ್ರದೋಷ್ ಕೇವಲ ತಮ್ಮ ಪತ್ನಿಯೊಂದಿಗೆ ಮಾತನಾಡಿದ್ದು, ಯಾವುದೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ ಸೆಷನ್ಸ್ ಕೋರ್ಟ್ ಆದೇಶದಲ್ಲಿ ಕಾನೂನುಬಾಹಿರತೆ ಕಂಡುಬರುವುದಿಲ್ಲ ಎಂದು ತೀರ್ಮಾನಿಸಿತು.
ಹೀಗಾಗಿ, ಸೆಷನ್ಸ್ ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.
ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಸೆಷನ್ಸ್ ಕೋರ್ಟ್ ನಿರ್ಧಾರ ಮುಂದುವರಿದಿದ್ದು, ವಿಚಾರಣೆಯ ಸಂದರ್ಭದಲ್ಲಿ ಪ್ರದೋಷ್ ಅವರ ಹೇಳಿಕೆ ಮತ್ತು ಸಾಕ್ಷ್ಯವನ್ನು ದರ್ಶನ್ ಪರ ವಕೀಲರು ಪಾಟೀ ಸವಾಲಿನ ಮೂಲಕ ಪ್ರಶ್ನಿಸಲು ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







