ಕಲ್ಪ ಮೀಡಿಯಾ ಹೌಸ್ | ಐಚಿ–ನಗೋಯಾ |
ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ (Asian Games 2026) ಭಾರತದ ಶೂಟರ್‌ಗಳು (Shooter) ಶುಕ್ರವಾರ ಭರ್ಜರಿ ಪ್ರದರ್ಶನ ನೀಡಿದ್ದು, ಒಂದೇ ದಿನ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸುರುಚಿ ಸಿಂಗ್ ಮತ್ತು ಕಮಲ್‌ಜೀತ್ ಜೋಡಿ ಚಿನ್ನದ ಪದಕ ಗೆದ್ದರೆ, ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ ತಂಡ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ನೀರಜ್ ಕುಮಾರ್ ಮತ್ತು ರುದ್ರಾಂಕ್ಷ್ ಪಾಟೀಲ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಎರಡು ಪದಕಗಳೊಂದಿಗೆ ಭಾರತ ಒಟ್ಟು ಪದಕಗಳ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಿಕೊಂಡಿದೆ.
ಏರ್ ಪಿಸ್ತೂಲ್‌ನಲ್ಲಿ ಸುರುಚಿ–ಕಮಲ್‌ಜೀತ್ ಜೋಡಿಗೆ ಚಿನ್ನ
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಫೈನಲ್‌ನಲ್ಲಿ ಸುರುಚಿ ಸಿಂಗ್ ಹಾಗೂ ಕಮಲ್‌ಜೀತ್ ಜೋಡಿ ಆರಂಭದಿಂದಲೇ ಪ್ರಾಬಲ್ಯ ಮೆರೆದಿತು. ಹಂತ ಹಂತವಾಗಿ ಮುನ್ನಡೆ ಕಾಯ್ದುಕೊಂಡ ಭಾರತೀಯ ಜೋಡಿ ಅಂತಿಮವಾಗಿ 484.6 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದಿತು. ದಕ್ಷಿಣ ಕೊರಿಯಾ ಬೆಳ್ಳಿ ಹಾಗೂ ಇರಾನ್ ಕಂಚಿನ ಪದಕ ಪಡೆದವು.

ಭಾರತೀಯ ಜೋಡಿ ಫೈನಲ್‌ಗೂ ಮುನ್ನ ಅರ್ಹತಾ ಸುತ್ತಿನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನದಲ್ಲಿ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ಮುಂದುವರಿಸಿದ ಸುರುಚಿ ಮತ್ತು ಕಮಲ್‌ಜೀತ್, ನಿರ್ಣಾಯಕ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡು ಭಾರತದ ಪಾಲಿಗೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟರು. ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ತನ್ನ ಎರಡನೇ ಚಿನ್ನದ ಪದಕವನ್ನು ಗೆದ್ದಂತಾಗಿದೆ.
Also read>> ಸೌಜನ್ಯ ಹತ್ಯೆ ಪ್ರಕರಣ | ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ | ರಾಜ್ಯ ಸರ್ಕಾರ ಆದೇಶ
Asian Games 2026 : 50 ಮೀಟರ್ ರೈಫಲ್ 3-ಪೊಸಿಷನ್‌ನಲ್ಲಿ ಬೆಳ್ಳಿ
ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ ತಂಡ ಸ್ಪರ್ಧೆಯಲ್ಲೂ ಭಾರತದ ಶೂಟರ್‌ಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ನೀರಜ್ ಕುಮಾರ್ ಮತ್ತು ರುದ್ರಾಂಕ್ಷ್ ಪಾಟೀಲ್ ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ.
ಭಾರತೀಯ ತಂಡ 1762-94x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಚೀನಾ 1766-95x ಅಂಕಗಳೊಂದಿಗೆ ಚಿನ್ನ ಗೆದ್ದಿತು. ದಕ್ಷಿಣ ಕೊರಿಯಾ ಕಂಚಿನ ಪದಕ ಪಡೆದುಕೊಂಡಿತು.
ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರೂ, ವೈಯಕ್ತಿಕ 50 ಮೀಟರ್ ರೈಫಲ್ 3-ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಿಗೆ ಪದಕ ಕೈತಪ್ಪಿದೆ. ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಐದನೇ ಹಾಗೂ ನೀರಜ್ ಕುಮಾರ್ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಟೇಬಲ್ ಟೆನಿಸ್‌ನಲ್ಲೂ ಪದಕ ಖಚಿತ
ಭಾರತದ ಪದಕ ಬೇಟೆ ಶೂಟಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ದಿಯಾ ಚಿಟಲೆ ಮತ್ತು ಮನುಷ್ ಶಾ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.
ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಜೋಡಿ ಹಾಂಕಾಂಗ್‌ನ ವಿಶ್ವದ ನಾಲ್ಕನೇ ಶ್ರೇಯಾಂಕದ ವಾಂಗ್ ಚುನ್ ಟಿಂಗ್–ಡೂ ಹೋಯಿ ಕೆಮ್ ಜೋಡಿಯನ್ನು 3–1 ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಹೀಗಾಗಿ ಈ ವಿಭಾಗದಲ್ಲಿ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಚಿತವಾಗಿದೆ.
ಸ್ಕ್ವಾಷ್‌ನಲ್ಲೂ ಪದಕ ಖಚಿತ
ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲೂ ಭಾರತದ ಜೋಶನಾ ಚಿನ್ನಪ್ಪ ಮತ್ತು ವೇಲವನ್ ಸೆಂಥಿಲ್‌ಕುಮಾರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಫಿಲಿಪ್ಪೀನ್ಸ್‌ನ ಜೆಮಿಕಾ ಅರಿಬಾಡೊ–ಡೇವಿಡ್ ಪೆಲಿನೊ ಜೋಡಿಯನ್ನು ಮಣಿಸಿದ ಭಾರತೀಯ ಜೋಡಿ ಅಂತಿಮ ನಾಲ್ಕರ ಹಂತಕ್ಕೇರಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದೆ.
ಹೀಗಾಗಿ ಐಚಿ–ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಶೂಟಿಂಗ್ ಜೊತೆಗೆ ಟೇಬಲ್ ಟೆನಿಸ್ ಹಾಗೂ ಸ್ಕ್ವಾಷ್‌ನಲ್ಲೂ ಭಾರತೀಯ ಆಟಗಾರರು ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








