ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರಕನ್ನಡ) |
ಪೂರ್ಣಾರೋಗ್ಯ ಹಾಗೂ ಆತ್ಮಜ್ಞಾನ ಎರಡೂ ಬೇರೆಬೇರೆಯಲ್ಲ. ಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ (Health) ಒಂದು ಹಾಗೂ ಆತ್ಮಜ್ಞಾನಕ್ಕೆ ಮತ್ತೊಂದು ಎಂದು ಪ್ರತ್ಯೇಕವಾಗಿ ನೋಡಿಲ್ಲ. ಆರೋಗ್ಯಕ್ಕೆ ಹಿತವಾದುದು ಆತ್ಮಜ್ಞಾನಕ್ಕೂ ಪೂರಕವಾಗಿರುತ್ತದೆ. ತುಪ್ಪ ಆರೋಗ್ಯಕಾರಕವಾಗಿರುವುದರ ಜೊತೆಗೆ ಆತ್ಮಜ್ಞಾನಕ್ಕೂ ಪೂರಕವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 24ರಂದು ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯಲ್ಲಿ ಅನುಗ್ರಹಿಸಿದ ಅವರು, ತುಪ್ಪದ ಮಹತ್ವ ಹಾಗೂ ಆರೋಗ್ಯ–ಆತ್ಮಸಾಧನೆಯ ನಡುವಿನ ಸಂಬಂಧವನ್ನು ವಿವರಿಸಿದರು.
ಯೋಗಸಾಧನೆಗೆ ಹಾಲು, ತುಪ್ಪದ ಮಹತ್ವ
ಹಠಯೋಗಪ್ರದೀಪಿಕೆಯಲ್ಲಿ ಆತ್ಮಸಾಧನೆಯನ್ನು ಆರಂಭಿಸುವ ಸಂದರ್ಭದಲ್ಲಿ ಹಾಲು ಮತ್ತು ತುಪ್ಪವನ್ನು ಸೇವಿಸುವಂತೆ ಸೂಚಿಸಲಾಗಿದೆ. ಯೋಗಸಾಧನೆಯ ಅಭ್ಯಾಸದ ವೇಳೆ ದೇಹ ಹಾಗೂ ಮನಸ್ಸಿಗೆ ಅಗತ್ಯವಾದ ವಾತಾವರಣವನ್ನು ಕಲ್ಪಿಸಿಕೊಡುವಲ್ಲಿ ಇವು ಸಹಕಾರಿಯಾಗುತ್ತವೆ ಎಂದು ಶ್ರೀಗಳು ತಿಳಿಸಿದರು.
ಸತ್ವ, ರಜಸ್ಸು ಹಾಗೂ ತಮೋಗುಣಗಳು ಸಮತೋಲನಗೊಳ್ಳುವುದೇ ಆರೋಗ್ಯದ ಸ್ಥಿತಿಯಾಗಿದೆ. ಇದೇ ಸಮತೋಲನ ಆತ್ಮಜ್ಞಾನ ಸಾಧನೆಗೂ ಪೂರಕವಾಗುತ್ತದೆ. ತುಪ್ಪದ ಸೇವನೆಯಿಂದ ಸತ್ವಗುಣ ವೃದ್ಧಿಯಾಗುತ್ತದೆ. ಸತ್ವಗುಣ ಹೆಚ್ಚಿದಾಗ ಏಕಾಗ್ರತೆ, ಏಕಾಗ್ರತೆಯಿಂದ ಧ್ಯಾನ ಹಾಗೂ ಧ್ಯಾನದ ಮೂಲಕ ಮೋಕ್ಷದ ಮಾರ್ಗ ತೆರೆದುಕೊಳ್ಳುತ್ತದೆ ಎಂದು ಅವರು ವಿವರಿಸಿದರು.
Also read>> ಬರ ಸಂಕಷ್ಟದಲ್ಲಿರುವ ರೈತರಿಗೆ ₹2,500 ನೆರವು? | ಸರ್ಕಾರದತ್ತ ಎಲ್ಲರ ಕಣ್ಣು
ತುಪ್ಪ ಅಗ್ನಿಯ ಮತ್ತೊಂದು ರೂಪ
ತುಪ್ಪವು ಅಗ್ನಿಯ ಮತ್ತೊಂದು ರೂಪದಂತಿದ್ದು, ವೇದಗಳಲ್ಲಿಯೂ ಇದರ ಉಲ್ಲೇಖವಿದೆ. ಅಗ್ನಿಯ ಗುಣಗಳು ಹಾಗೂ ತುಪ್ಪದ ಗುಣಗಳಲ್ಲಿ ಸಾಮ್ಯತೆ ಕಂಡುಬರುತ್ತದೆ. ಅಗ್ನಿಯು ಊರ್ಧ್ವಗತಿಯನ್ನು ಹೊಂದಿರುವಂತೆ ತುಪ್ಪವೂ ಸಾಧಕನನ್ನು ಊರ್ಧ್ವಮುಖವಾಗಿ ಕೊಂಡೊಯ್ಯುವ ಗುಣವನ್ನು ಹೊಂದಿದೆ ಎಂದು ಶ್ರೀಗಳು ಹೇಳಿದರು.
ಮೋಕ್ಷವನ್ನು ತಲುಪಲು ಹಲವು ಮಾರ್ಗಗಳಿದ್ದರೂ ಅವೆಲ್ಲವೂ ಅಂತಿಮವಾಗಿ ರಾಜಯೋಗದತ್ತ ಸಾಗುತ್ತವೆ. ಧ್ಯಾನವೇ ರಾಜಯೋಗವಾಗಿದ್ದು, ಧ್ಯಾನವನ್ನು ಸಾಧಿಸಿದಾಗ ಸಮಾಧಿ ಸ್ಥಿತಿಯನ್ನು ಹೊಂದಲು ಸಾಧ್ಯ. ಈ ಸಾಧನಾ ಮಾರ್ಗದಲ್ಲಿ ತುಪ್ಪ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ತುಪ್ಪದಲ್ಲಿದೆ ಅಗ್ನಿವರ್ಧಕ ಹಾಗೂ ತಂಪಿನ ಗುಣ
ಸಾಧಕನಿಗೆ ದೇಹದ ತಂಪು ಕೂಡ ಅತ್ಯಂತ ಮುಖ್ಯ. ಹೀಗಾಗಿಯೇ ಹಿಮಾಲಯದ ಚಳಿಗಾಲ ಸಾಧನೆಗೆ ಶ್ರೇಷ್ಠ ಎಂಬ ಅಭಿಪ್ರಾಯವಿದೆ. ಸಾಧನೆಯ ಸಂದರ್ಭದಲ್ಲಿ ದೇಹದಲ್ಲಿ ಅಗ್ನಿ ಜಾಗೃತಿಯಾಗುವುದರಿಂದ ದೇಹವನ್ನು ತಂಪಾಗಿಸುವ ಅಗತ್ಯವೂ ಉಂಟಾಗುತ್ತದೆ.
“‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯು ಯಾರನ್ನೋ ಮೆಚ್ಚಿಸಲು ಮಾಡುತ್ತಿರುವುದಲ್ಲ. ಇಲ್ಲಿನ ವಿಚಾರಗಳು ಸಾಧನೆಗೆ ಇರುವಂತಹವು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಸಾಧನೆ ಮಾಡಬೇಕು”
-ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ತುಪ್ಪ ಅಗ್ನಿವರ್ಧಕವಾಗಿರುವುದರ ಜೊತೆಗೆ ದೇಹಕ್ಕೆ ತಂಪನ್ನು ನೀಡುವ ಸಾಮರ್ಥ್ಯವನ್ನೂ ಹೊಂದಿದೆ. ಪರಮಾತ್ಮನಲ್ಲಿ ಕೋಟಿಸೂರ್ಯನ ಬೆಳಕು ಹಾಗೂ ಕೋಟಿಚಂದ್ರರ ತಂಪು ಇರುವಂತೆ ತುಪ್ಪದಲ್ಲಿಯೂ ಈ ಎರಡೂ ಗುಣಗಳನ್ನು ಕಾಣಬಹುದು ಎಂದು ರಾಘವೇಶ್ವರ ಶ್ರೀ ವಿವರಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಖ್ಯಾತ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ, ಮಾಜಿ ಶಾಸಕ ಸುನಿಲ್ ಬಿ. ನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್ ಸೋನಿ ಹಾಗೂ ಉದ್ಯಮಿ ಪ್ರಭಾಕರ ಕಾರಣಗಿರಿ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.
ರಮಣ ಭಟ್, ಮುಂಬೈ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಕೇವಶ ಭಟ್ ದಂಪತಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










