ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರಕನ್ನಡ) |
ದೀರ್ಘಾಯಸ್ಸು ಹಾಗೂ ಆರೋಗ್ಯಕರ, ಸದೃಢ ಶರೀರವು ಆಧ್ಯಾತ್ಮಿಕ ಸಾಧನೆಗೆ ಪ್ರಮುಖ ಆಧಾರವಾಗಿದ್ದು, ಸಾಧನೆಯನ್ನು ಕೈಗೊಳ್ಳಲು ದೇಹ ಗಟ್ಟಿಯಾಗಿರುವಾಗಲೇ ಪ್ರಯತ್ನಿಸಬೇಕು. ತುಪ್ಪವು (Ghee) ದೇಹಕ್ಕೆ ಬಲ, ಮನಸ್ಸಿಗೆ ಏಕಾಗ್ರತೆ ಹಾಗೂ ಆಯುಸ್ಸಿಗೆ ಪೂರಕವಾದ ಶಕ್ತಿಯನ್ನು ನೀಡುವ ಜೊತೆಗೆ ಸಾಧಕನಿಗೆ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಆಧ್ಯಾತ್ಮಿಕ ಸಾಧನೆಯಲ್ಲಿ ತುಪ್ಪದ ಮಹತ್ವವನ್ನು ವಿವರಿಸಿದರು.
ವೇದವು ತುಪ್ಪವನ್ನು ‘ದೇವರ ನಾಲಿಗೆ’ ಎಂದು ಹೇಳುತ್ತದೆ. ಹೋಮ-ಹವನಗಳಲ್ಲಿ ದೇವರಿಗೆ ಯಾವುದೇ ದ್ರವ್ಯವನ್ನು ಸಮರ್ಪಿಸಿದರೂ ಅದನ್ನು ತುಪ್ಪದ ಮೂಲಕ ಶುದ್ಧೀಕರಿಸಿ ಅರ್ಪಿಸಲಾಗುತ್ತದೆ. ದೇವರು ಹೋಮದ ಮೂಲಕ ಸ್ವೀಕರಿಸುವ ದ್ರವ್ಯಗಳನ್ನು ತುಪ್ಪದ ಮೂಲಕವೇ ಸ್ವೀಕರಿಸುವುದರಿಂದ ತುಪ್ಪಕ್ಕೆ ಈ ವಿಶೇಷ ಸ್ಥಾನಮಾನ ದೊರೆತಿದೆ ಎಂದು ಶ್ರೀಗಳು ವಿವರಿಸಿದರು.
Ghee: ಪಾಪವನ್ನು ಕರಗಿಸುವ ಶಕ್ತಿ ತುಪ್ಪಕ್ಕಿದೆ
ಸಾಧನೆ ಎಂದರೆ ಭಗವಂತನ ಪ್ರೀತಿಯನ್ನು ಸಂಪಾದಿಸುವುದು. ಜೀವ ಮತ್ತು ದೇವರ ನಡುವೆ ಗೋಡೆಯಾಗಿ ನಿಲ್ಲುವ ಕರ್ಮಫಲವೇ ಪಾಪ. ಈ ಪಾಪವನ್ನು ಕರಗಿಸಿ, ಆಧ್ಯಾತ್ಮಿಕ ಸಾಧಕನಿಗೆ ಭಗವಂತನೊಂದಿಗೆ ಬೆಸೆಯುವಲ್ಲಿ ತುಪ್ಪದ ಪಾತ್ರವಿದೆ ಎಂದು ಶ್ರೀಗಳು ಹೇಳಿದರು.
ತುಪ್ಪವು ಮಂಗಳಕರ ದ್ರವ್ಯವಾಗಿದ್ದು, ಅದರ ದರ್ಶನ, ಸ್ಪರ್ಶನ ಹಾಗೂ ಸೇವನೆ ಪಾಪಕ್ಷಯಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ರಾಕ್ಷಸ ಬಾಧೆ ಹಾಗೂ ದುಷ್ಟ ಶಕ್ತಿಗಳಿಂದ ಸಾಧಕನನ್ನು ರಕ್ಷಿಸುವ ರಕ್ಷಾಕವಚದಂತೆ ತುಪ್ಪ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ಉತ್ತಮ ರಸಾಯನವಾಗಿ ತುಪ್ಪ
ಮೃತ್ಯು, ಮುಪ್ಪು ಹಾಗೂ ರೋಗಗಳ ವಿರುದ್ಧ ಕಾರ್ಯನಿರ್ವಹಿಸುವ ಮತ್ತು ಮನಸ್ಸಿಗೆ ಶಕ್ತಿಯನ್ನು ನೀಡುವ ದ್ರವ್ಯವನ್ನು ಆಯುರ್ವೇದದಲ್ಲಿ ‘ರಸಾಯನ’ ಎಂದು ಕರೆಯಲಾಗುತ್ತದೆ. ತುಪ್ಪವು ಉತ್ತಮ ರಸಾಯನವಾಗಿದ್ದು, ದೇಹ ಹಾಗೂ ಮನಸ್ಸಿಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಇಂದು ಅರವತ್ತು ವರ್ಷಗಳ ನಂತರ ಭಗವದ್ಗೀತೆಯ ಪುಸ್ತಕ ಹಿಡಿದು ಆಧ್ಯಾತ್ಮಿಕ ಸಾಧನೆ ಆರಂಭಿಸುವವರನ್ನು ಕಾಣುತ್ತೇವೆ. ಆದರೆ ಶರೀರ ದುರ್ಬಲವಾದ ನಂತರ ಸಾಧನೆ ಆರಂಭಿಸುವುದಕ್ಕಿಂತ, ಭಾರತೀಯ ಪರಂಪರೆಯಲ್ಲಿ ಬ್ರಹ್ಮಚರ್ಯದಲ್ಲಿಯೇ ಸಾಧನೆ ಆರಂಭಿಸುವ ಪರಂಪರೆ ಇದೆ ಎಂದು ಅವರು ತಿಳಿಸಿದರು.
ಸಾಧನೆಗೆ ಸ್ವಸ್ಥ ಹಾಗೂ ಸದೃಢ ಶರೀರ ಅಗತ್ಯ. ದೇಹ ಗಟ್ಟಿಯಾಗಿರುವಾಗಲೇ ಸಾಧನೆಯನ್ನು ಕೈಗೊಳ್ಳಬೇಕು. ಸಾಧನೆಗೆ ಅಗತ್ಯವಾದ ಬಲ ಹಾಗೂ ವಯಸ್ಥಾಪನ ಶಕ್ತಿಯನ್ನು ನೀಡುವಲ್ಲಿ ತುಪ್ಪ ಸಹಕಾರಿಯಾಗುತ್ತದೆ ಎಂದು ಶ್ರೀಗಳು ಹೇಳಿದರು.
ಸಾಧನೆಗೆ ತುಪ್ಪದ ಬಲ ಅನಿವಾರ್ಯ
ಆಧ್ಯಾತ್ಮಿಕ ಸಾಧನೆ ಕೇವಲ ವೃದ್ಧಾಪ್ಯದಲ್ಲಿ ಕೈಗೊಳ್ಳುವ ಕಾರ್ಯವಲ್ಲ. ಜೀವನದ ಆರಂಭಿಕ ಹಂತದಿಂದಲೇ ದೇಹ ಮತ್ತು ಮನಸ್ಸನ್ನು ಸಾಧನೆಗೆ ಸಿದ್ಧಪಡಿಸಿಕೊಳ್ಳಬೇಕು. ಆರೋಗ್ಯಕರ ದೇಹ, ಸ್ಥಿರ ಮನಸ್ಸು ಹಾಗೂ ದೀರ್ಘಾಯಸ್ಸು ಸಾಧಕನಿಗೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ತುಪ್ಪದ ಮಹತ್ವವನ್ನು ಭಾರತೀಯ ಪರಂಪರೆ ಗುರುತಿಸಿದೆ ಎಂದು ಅವರು ವಿವರಿಸಿದರು.
ಗುರುಭಿಕ್ಷಾ ಸೇವೆ
ಭಾರತ ಮಂಡಲದ ಮುಂಬಯಿ, ಡೊಂಬಿವಿಲಿ ಹಾಗೂ ಹೈದರಾಬಾದ್ ಹವ್ಯಕ ವಲಯಗಳ ಪರವಾಗಿ ಮುಂಬೈನ ಯು.ಟಿ. ಕೃಷ್ಣಮೂರ್ತಿ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು.
ಉದ್ಯಮಿಗಳಾದ ಗೋಪಾಲಕೃಷ್ಣ ಭಟ್, ಪ್ರಭಾಕರ ಎಂ.ಎನ್., ಡಾ. ರವಿರಾಜ್ ಕಡ್ಲೆ ಉಪಸ್ಥಿತರಿದ್ದರು. ದಿನಪ್ರಧಾನರಾಗಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ದಂಪತಿಗಳು ಭಾಗವಹಿಸಿದ್ದರು.
ದೀರ್ಘಾಯಸ್ಸು ಏಕೆ ಬೇಕು?
ತುಪ್ಪವು ವಯಸ್ಥಾಪಕವಾಗಿದ್ದು, ದೀರ್ಘಾಯಸ್ಸನ್ನು ನೀಡುತ್ತದೆ ಎನ್ನಲಾಗಿದೆ. ಶಕ್ತಿಯುತ ಶರೀರ ಹಾಗೂ ದೀರ್ಘಾಯಸ್ಸು ಆಧ್ಯಾತ್ಮಿಕ ಸಾಧನೆಗೆ ಅಗತ್ಯ. ನಾವೆಲ್ಲ ಸಾಧನೆಗೆ ಯೋಗ್ಯವಾದ ಶರೀರವನ್ನು ಪಡೆದಿದ್ದು, ಇದೇ ಜನ್ಮದಲ್ಲಿ ಸಾಧನೆಯ ಮೂಲಕ ಮೋಕ್ಷವನ್ನು ಸಾಧಿಸಿಕೊಳ್ಳಬೇಕು.
ಆ ಸಾಧನೆಯನ್ನು ಕೈಗೊಳ್ಳಲು ಮಾತ್ರವಲ್ಲದೆ, ಸಾಧನೆಯ ನಂತರ ಒಳಿತನ್ನು ಜಗತ್ತಿಗೆ ಹಂಚಲು ಕೂಡ ದೀರ್ಘಾಯಸ್ಸು ಅಗತ್ಯ ಎಂದು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











