ಕಲ್ಪ ಮೀಡಿಯಾ ಹೌಸ್ | ಉಡುಪಿ |
ಉತ್ತರ ಭಾರತದಲ್ಲೂ (North India) ಮಾಧ್ವ ತತ್ವ, ಜ್ಞಾನವನ್ನು ಪ್ರಸಾರ ಮಾಡಲು ಭಂಡಾರಕೇರಿ ಶ್ರೀಗಳಿಗೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ (Udupi) ಉಡುಪಿಯ ಬಾರ್ಕೂರಿನಲ್ಲಿ ಭರವಸೆ ನೀಡಿದರು.
ಉಡುಪಿಯ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಮತ್ತು ವಿದ್ಯೇಶ ತೀರ್ಥರ ಚಾತುರ್ಮಾಸ್ಯ ಸಂದರ್ಭ ಹಮ್ಮಿಕೊಂಡಿದ್ದ ‘ ಭಾಗವತ ಪಾರಾಯಣ ಸಮರ್ಪಣೆ, ವಿದ್ವಾಂಸರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಭಾಗವಹಿಸಿ ಮಾತನಾಡಿದರು.
ಭಂಡಾರಕೇರಿ ಶ್ರೀಗಳು ಕುಗ್ರಾಮದ ಮಠದಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡಿದ್ದು ಒಂದು ದೊಡ್ಡ ಸವಾಲು. ಇಂಥ ಪ್ರದೇಶದಲ್ಲಿ ದೇಶದ ಹಲವು ಭಾಗದ ಪಂಡಿತರನ್ನು ಆಹ್ವಾನಿಸಿ, ತಲಾ 9 ದಿನ ವೇದ, ತಾತ್ಪರ್ಯ ನಿರ್ಣಯ, ಭಾಗವತ ಗ್ರಂಥಗಳ ಪಾರಾಯಣ ನಡೆಸಿರುವುದು ಚಾತುರ್ಮಾಸ್ಯ ಪರಂಪರೆಗೆ ಮಾದರಿ ಆಗಿದೆ.
ಚಿಕ್ಕ ಊರಿನಲ್ಲಿ ದೊಡ್ಡ ದೊಡ್ಡ ವಿದ್ವಾಂಸರ ಸಮ್ಮಿಲನ, ಸಂಗೀತ ಕಛೇರಿಗಳು, ಯಕ್ಷಗಾನ ಪ್ರದರ್ಶನಗಳು ನಡೆದಿವೆ. ನಗರ ಜೀವನದಿಂದ ಹೊರಬಂದು ಅನೇಕರು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಆಸ್ವಾದಿಸುವ ಒಂದು ಭಾಗ್ಯವನ್ನು ಶ್ರೀಪಾದರು ಕಲ್ಪಿಸಿರುವುದು ಬಹು ವಿಶೇಷ ಎಂದು ವರಖೇಡಿ ಹೇಳಿದರು. ಚಾತುರ್ಮಾಸ್ಯ ಎಂಬುದು ಒಂದು ಶುದ್ಧ ವ್ರತ. ಅದರಲ್ಲಿ ತಪಸ್ಸು, ಗುರು ಸ್ಮರಣೆ, ಪರಂಪರೆ ರಕ್ಷಣೆಗಳನ್ನೂ ಶ್ರೀ ವಿದ್ಯೇಶ ತೀರ್ಥರು ಪ್ರಧಾನವಾಗಿರಿಸಿಕೊಂಡಿದ್ದಾರೆ. ಇದರಿಂದ ಮೂಲ ಮಠದ ಪರಿಸರಕ್ಕೆ ಹೊಸ ದೈವಿಕ ಶಕ್ತಿ ದೊರಕಿದೆ ಎಂದವರು ನುಡಿದರು.
ಕಳಕಳಿ ದೊಡ್ಡದು
ಮಂಗಳೂರಿನ ಶ್ರೀನಿವಾಸ ವಿವಿ ಕುಲಪತಿ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ, ಭಂಡಾರಕೇರಿ ಶ್ರೀಗಳು ಪಾರಂಪರಿಕ ಪದ್ಧತಿಗೆ ಆಧುನಿಕತೆಯ ಸ್ಪರ್ಶವನ್ನು ನೀಡಿದ್ದಾರೆ. ವೇದ, ಶಾಸ್ತ್ರ ಮತ್ತು ಪಾರಾಯಣಗಳನ್ನು ಉಳಿಸುವ, ಪಂಡಿತರ ಸಮೂಹವನ್ನೇ ಸಂರಕ್ಷಣೆ ಮಾಡುವ ಅವರ ಕಳಕಳಿ ಶ್ರೇಷ್ಠತಮವಾಗಿದೆ ಎಂದರು.
Also Read>> ಭದ್ರಾವತಿ ನರಸಿಂಹ ಸ್ವಾಮಿ ದೇಗುಲ ಫಲಕ ಧ್ವಂಸ ಕಿಡಿಗೇಡಿಗಳ ಕೃತ್ಯ ಅಲ್ಲ: ಸಮಿತಿ ಮಹತ್ವದ ಸ್ಪಷ್ಟನೆ
ಕೃಷ್ಣ ಭಕ್ತಿಯನ್ನು ಇನ್ನಷ್ಟು ಪಸರಿಸಬೇಕು
ಸಾನ್ನಿಧ್ಯ ವಹಿಸಿದ್ದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಸಂದೇಶ ನೀಡಿ, ಆಚಾರ್ಯ ಮಧ್ವರ ಸಿದ್ಧಾಂತದ ಬಗ್ಗೆ ಹೆಚ್ಚು ಪ್ರಚಾರವಿಲ್ಲದ ಕಾಲದಲ್ಲಿ ನಮ್ಮ ಇಬ್ಬರು ಗುರುಗಳಾದ ಶ್ರೀ ವಿದ್ಯಾಮಾನ್ಯರು ಮತ್ತು ಪೇಜಾವರ ಶ್ರೀ ವಿಶ್ವೇಶತೀರ್ಥರು ಉತ್ತರ ಭಾರತದಲ್ಲೂ ಮಧ್ವರ ತತ್ವಜ್ಞಾನ ಪ್ರಸಾರ, ಪ್ರಚಾರ ಮಾಡಿ, ಗ್ರಂಥಗಳ ಅಮೂಲ್ಯತೆಯನ್ನು ತೋರಿಸಿಕೊಟ್ಟರು. ಅವರಿಬ್ಬರ ಆಶಯದಂತೆ ಉತ್ತರ ಭಾರತದಲ್ಲಿ ಕೃಷ್ಣ ಭಕ್ತಿಯನ್ನು ಇನ್ನಷ್ಟು ಪಸರಿಸಲು ತಾವೂ ಸಂಕಲ್ಪ ಮಾಡಿರುವುದಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಭಾಗವತ ಗ್ರಂಥವನ್ನು 9 ದಿನ ಪಾರಾಯಣ ಮಾಡಿದ 16 ವಿದ್ವಾಂಸರನ್ನು ಸಮ್ಮಾನಿಸಲಾಯಿತು.
Udupi : ಪಾರಾಯಣ ಸಮರ್ಪಣೆ
ಪಂಡಿತರಾದ ರಘುಪತಿ ಉಪಾಧ್ಯಾಯ, ನಾಗರಾಜಾಚಾರ್ಯ, ಕೃಷ್ಣಾಚಾರ್ಯ ಉಪಾಧ್ಯಾಯ, ಪ್ರಹ್ಲಾದಾಚಾರ್ಯ ಜೋಷಿ, ಶ್ರೀಕಾಂತ ಬಾಯರಿ, ಸುಧೀಂದ್ರ ಆಚಾರ್ಯ, ಶ್ರೀನಿವಾಸಾಚಾರ್ಯ ಹೊನ್ನೀದಿಬ್ಬ , ಶ್ರೀನಿಧಿ ಗಣಾಚಾರಿ, ಶ್ರೀನಿಧಿ ಆಚಾರ್ಯ ಪ್ಯಾಟಿ, ಕೃಷ್ಣಾಚಾರ್ಯ ನಾಗಸಂಪಿಗೆ, ಲಕ್ಷ್ಮಿಕಾಂತಾಚಾರ್ಯ, ಆದ್ಯ ಸುದರ್ಶನಾಚಾರ್ಯ, ವಸುಧೇಂದ್ರಾಚಾರ್ಯ, ರಘೂತ್ತಮಾಚಾರ್ಯ, ಶ್ರೀಕಾಂತಾಚಾರ್ಯ ಬಾಳ್ತಿಲ್ಲಯ ಮತ್ತು ಶ್ರೀನಿವಾಸ ಭಟ್ಟರು 9 ದಿನಗಳ ಭಾಗವತ ಪಾರಾಯಣವನ್ನು ಶ್ರೀಗಳ ಸಮ್ಮುಖ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಸಾಮೂಹಿಕ ಗಾಯನ
ಬೆಂಗಳೂರಿನ ಪ್ರಖ್ಯಾತ ವಿದುಷಿ ಶುಭಾ ಸಂತೋಷ್ ನೇತೃತ್ವದಲ್ಲಿ 100 ಕಲಾವಿದರಿಂದ ಶ್ರೀ ವಿದ್ಯಾಮಾನ್ಯತೀರ್ಥರುಮತ್ತುಶ್ರೀವಿದ್ಯೇಶ ತೀರ್ಥ ಸ್ವಾಮೀಜಿವಿರಚಿತ ಕೃತಿಗಳ ಸಾಮೂಹಿಕ ಗಾಯನವು ವಿಜೃಂಭಣೆಯಿಂದ ನೆರವೇರಿತು. ಉಡುಪಿ ಕಲಾವಿದೆ ಉಷಾ ಹೆಬ್ಬಾರ್ ಮತ್ತು ತಂಡದವರು ಗಾಯನ ಸೇವೆಯಲ್ಲಿ ಸಹಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










