ಕಲ್ಪ ಮೀಡಿಯಾ ಹೌಸ್ | ಸಾಗರ (ಶಿವಮೊಗ್ಗ) |
ಕೆಲಸವಿಲ್ಲದೆ ಆದಾಯದ ಕೊರತೆ ಹಾಗೂ ಕೈಸಾಲ ತೀರಿಸಲಾಗದ ಒತ್ತಡದಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ (Sagara) ತಾಲೂಕಿನ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದ ಚಾಂದ್ಪಾಷಾ (46) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಚಾಲಕರಾಗಿದ್ದ ಚಾಂದ್ಪಾಷಾ ಅವರು ಜೀವನ ನಿರ್ವಹಣೆಗಾಗಿ ಹಲವೆಡೆ ಕೈಸಾಲ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಕೆಲಸ ದೊರೆಯದೆ ಆದಾಯದ ಕೊರತೆ ಎದುರಾಗಿತ್ತು. ಇದರಿಂದ ಸಾಲದ ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
Sagara: ಸೆ.30ರಂದು ಮನೆಯಿಂದ ಹೊರಟಿದ್ದರು
ಸೆಪ್ಟೆಂಬರ್ 30ರ ಸಂಜೆ ಸುಮಾರು 6.30ರ ವೇಳೆಗೆ ಚಾಂದ್ಪಾಷಾ ಅವರು ಮನೆಯಿಂದ ಹೊರಗೆ ತೆರಳಿದ್ದರು. ಆದರೆ ರಾತ್ರಿ 10 ಗಂಟೆಯಾದರೂ ಅವರು ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ಅವರಿಗಾಗಿ ವಿವಿಧೆಡೆ ಹುಡುಕಾಟ ನಡೆಸಿದ್ದರು.
ರಾತ್ರಿ ಹಲವು ಕಡೆ ಹುಡುಕಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಅಕ್ಟೋಬರ್ 1ರ ಮುಂಜಾನೆ ಕೂಡ ಹುಡುಕಾಟ ಮುಂದುವರಿಸಿದ್ದರು.
Also Read>> ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ಶೌರ್ಯ ಸಕ್ರೆಬೈಲಿನಲ್ಲಿ ಸಾವು
ಚಂಪಕಸರ ಕೆರೆಯಲ್ಲಿ ಮೃತದೇಹ ಪತ್ತೆ
ಅಕ್ಟೋಬರ್ 1ರಂದು ಬೆಳಗ್ಗೆ ಸುಮಾರು 7.30ರ ವೇಳೆಗೆ ಚಂಪಕಸರ ಕೆರೆ ಬಳಿ ಹುಡುಕಾಟ ನಡೆಸಿದಾಗ ಚಾಂದ್ಪಾಷಾ ಅವರ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದು ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಕೆಲಸವಿಲ್ಲದ ಕಾರಣ ಉಂಟಾಗಿದ್ದ ಆರ್ಥಿಕ ಸಂಕಷ್ಟ ಹಾಗೂ ಕೈಸಾಲ ತೀರಿಸಲಾಗದ ಒತ್ತಡದಿಂದ ಮನನೊಂದು ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಆನಂದಪುರ ಠಾಣೆಯಲ್ಲಿ ಯುಡಿಆರ್ ಪ್ರಕರಣ
ಮೃತರ ತಮ್ಮ ಶಹೀದ್ ಪಾಷಾ ಅವರು ನೀಡಿದ ದೂರಿನ ಆಧಾರದ ಮೇಲೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











