ಕಲ್ಪ ಮೀಡಿಯಾ ಹೌಸ್ | ಸೊರಬ (ಶಿವಮೊಗ್ಗ) |
ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೊರಬ (Soraba) ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೊರಬ ಪೊಲೀಸ್ ಠಾಣೆಯಲ್ಲಿ (Police Station) ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳಪ್ಪ (32) ಎಂಬಾತನನ್ನು ಪೊಲೀಸರು ಆತನ ಸ್ವಗ್ರಾಮದಲ್ಲಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.
Soraba: 2022ರಲ್ಲಿ ಪ್ರಕರಣ ದಾಖಲು
2022ರಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮಡಿವಾಳಪ್ಪ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಆರೋಪಿ ನಿರಂತರವಾಗಿ ಗೈರುಹಾಜರಾಗಿದ್ದು, ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದನು.
ಆರೋಪಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸೊರಬದ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಸಿಸಿ ನಂ. 2342/2022ರ ಪ್ರಕರಣದಲ್ಲಿ ಆತನ ವಿರುದ್ಧ ಜಾಮೀನು ರಹಿತ ದಸ್ತಗಿರಿ ವಾರೆಂಟ್ (NBW) ಹೊರಡಿಸಿತ್ತು.
ವಿಶೇಷ ಕಾರ್ಯಾಚರಣೆ
ನ್ಯಾಯಾಲಯದ ವಾರೆಂಟ್ ಜಾರಿಗೊಳಿಸುವ ನಿಟ್ಟಿನಲ್ಲಿ ಸೊರಬ ವೃತ್ತದ ಸಿಪಿಐ ಮಹಾಂತೇಶ್ ಕೆ. ಲಂಬಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸೊರಬ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು.
Also Read>> ಕೆಲಸವಿಲ್ಲದೆ, ಸಾಲದ ಒತ್ತಡ: ಸಾಗರದಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಈ ಕಾರ್ಯಾಚರಣೆಯಲ್ಲಿ ಪ್ರೋಸೆಸ್ ವಿಭಾಗದ ಸಿಬ್ಬಂದಿ ಹೆಚ್‌ಸಿ ಸೋಮಾನಾಯ್ಕ್ ಕೆ. ಅವರು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಆತ ತನ್ನ ಸ್ವಗ್ರಾಮದಲ್ಲಿಯೇ ಇರುವುದನ್ನು ಪತ್ತೆಹಚ್ಚಿದರು. ಬಳಿಕ ಕಾರ್ಯಾಚರಣೆ ನಡೆಸಿ ಮಡಿವಾಳಪ್ಪನನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












