ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ (ಶಿವಮೊಗ್ಗ) |
ಮಹಾತ್ಮ ಗಾಂಧೀಜಿ (Mahatma Gandhiji) ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಶಿಕಾರಿಪುರದ (Shikaripura) ಮೈತ್ರಿ ಪ್ರಾಥಮಿಕ ಶಾಲೆ ಹಾಗೂ ಕುಮದ್ವತಿ ಪ್ರೌಢಶಾಲೆಯಲ್ಲಿ ಭಕ್ತಿಭಾವ ಹಾಗೂ ಗೌರವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ, ಆದರ್ಶಗಳು ಹಾಗೂ ದೇಶಸೇವೆಯ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇಬ್ಬರು ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಲಾಯಿತು.
ಗಾಂಧೀಜಿ-ಶಾಸ್ತ್ರಿಯವರ ಜೀವನಾದರ್ಶಗಳು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ವಿಶ್ವನಾಥ ಪಿ. ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ತತ್ವಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸತ್ಯ, ಸರಳತೆ, ಪ್ರಾಮಾಣಿಕತೆ, ತ್ಯಾಗ ಹಾಗೂ ದೇಶಸೇವೆಯನ್ನು ತಮ್ಮ ಬದುಕಿನ ಮೂಲಕ ಪ್ರತಿಪಾದಿಸಿದ ಈ ಇಬ್ಬರು ಮಹನೀಯರು ಇಂದಿನ ಪೀಳಿಗೆಗೆ ಆದರ್ಶರಾಗಿದ್ದಾರೆ ಎಂದು ತಿಳಿಸಿದರು.
ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿದ ಗಾಂಧೀಜಿ
ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ಆದರ್ಶಗಳ ಕುರಿತು ಸಹ ಶಿಕ್ಷಕ ನಿಂಗಪ್ಪ ಡಿ. ಮಾತನಾಡಿ, ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಸರಳ ಜೀವನ, ಸ್ವದೇಶಿ ಚಿಂತನೆ, ಸತ್ಯನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾದರು ಎಂದು ಹೇಳಿದರು.
Also Read>> ಗಾಂಧಿ ಜಯಂತಿ | ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಸ್ವಚ್ಛತಾ ಅಭಿಯಾನ ಸಮಾರೋಪ
‘ಜೈ ಜವಾನ್, ಜೈ ಕಿಸಾನ್’ ಸಂದೇಶ
ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮತ್ತು ದೇಶಸೇವೆಯ ಕುರಿತು ಸಹ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಕೆ.ಜಿ. ಮಾತನಾಡಿ, ಶಾಸ್ತ್ರಿಯವರು ಸರಳತೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಗೆ ಹೆಸರಾದವರು. ದೇಶದ ಪ್ರಧಾನಮಂತ್ರಿಯಾಗಿ ರೈತರು ಹಾಗೂ ಸೈನಿಕರ ಮಹತ್ವವನ್ನು ಎತ್ತಿಹಿಡಿದು “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯ ಮೂಲಕ ದೇಶದ ಜನರಲ್ಲಿ ರಾಷ್ಟ್ರಭಕ್ತಿ ಹಾಗೂ ಆತ್ಮವಿಶ್ವಾಸವನ್ನು ಮೂಡಿಸಿದರು ಎಂದು ತಿಳಿಸಿದರು.
Shikaripura: ಭಾವಚಿತ್ರಗಳಿಗೆ ಪುಷ್ಪನಮನ
ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಅವರ ಆದರ್ಶಗಳು ಹಾಗೂ ಜೀವನಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












