ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ (Hubballi) ರೈಲ್ವೆ ವಿಭಾಗದ ವತಿಯಿಂದ ವಿಭಾಗೀಯ ರೈಲ್ವೆ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ, (Gandhi Jayanti) ಸ್ವಚ್ಛ ಭಾರತ ದಿವಸ ಹಾಗೂ ‘ಸ್ವಚ್ಛತಾ ಹಿ ಸೇವಾ–2026’ ಅಭಿಯಾನದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆದರ್ಶಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು. ಸ್ವಚ್ಛತೆ ಕೇವಲ ಆಚರಣೆಗೆ ಸೀಮಿತವಾಗದೆ, ದೈನಂದಿನ ಜೀವನದ ಅಭ್ಯಾಸವಾಗಬೇಕು ಎಂದು ಹೇಳಿದರು.
ಸ್ವಚ್ಛತಾ ಶ್ರಮದಾನಕ್ಕೆ ಪ್ರಶಸ್ತಿ
ಸ್ವಚ್ಛತಾ ಗುರಿ ಘಟಕ ಅಡಿಯಲ್ಲಿ ಸ್ವಚ್ಛತಾ ಶ್ರಮದಾನದಲ್ಲಿ ಉತ್ತಮ ಸಾಧನೆ ತೋರಿದ ರೈಲ್ವೆ ವಿಭಾಗಗಳ ಶಾಖೆಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಸಿಬ್ಬಂದಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಈ ಸಂದರ್ಭದಲ್ಲಿ ಪ್ರಶಂಸಿಸಲಾಯಿತು.
Gandhi Jayanti: ವಿವಿಧ ಸ್ಪರ್ಧೆಗಳ ವಿಜೇತರಿಗೆ ಗೌರವ
ಸ್ವಚ್ಛತೆ ಹಾಗೂ ಗಾಂಧೀಜಿ ಅವರ ವಿಚಾರಗಳಿಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಚಿತ್ರಕಲೆ, ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುವ ಉದ್ದೇಶದಿಂದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
Also Read>> ರಿಪ್ಪನ್ಪೇಟೆ ಪೊಲೀಸ್ ಠಾಣೆ ಎದುರು ವಾಹನ ಡಿಕ್ಕಿ: ಎರಡು ಗೋವುಗಳು ಸಾವು
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಸಮಾರೋಪ ಸಮಾರಂಭದ ಅಂಗವಾಗಿ ಸ್ಕೌಟ್ಸ್ ಮತ್ತು ಗೈಡ್ಸ್, ನಾಟ್ಯಾಂಜಲಿ ನೃತ್ಯ ಕೇಂದ್ರ ಹಾಗೂ ಫಾತಿಮಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು.
ಸಾಮೂಹಿಕ ಸ್ವಚ್ಛತಾ ಶ್ರಮದಾನ
ಸಮಾರಂಭಕ್ಕೂ ಮುನ್ನ ಡಿಆರ್ಎಂ ಕಚೇರಿ ಆವರಣದಲ್ಲಿ ಸಾಮೂಹಿಕ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ರೈಲ್ವೆ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಗಾಂಧೀಜಿ ಅವರ ಸ್ವಚ್ಛತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











