ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಗವಂತನ ನಾಮಸ್ಮರಣೆಯ ಮೂಲಕ ಜೀವನವನ್ನು ಪವಿತ್ರಗೊಳಿಸಿಕೊಳ್ಳಬೇಕು. ‘ಹರೇ ರಾಮ, ಹರೇ ಕೃಷ್ಣ’ ಮಂತ್ರ ಜಪವು ಮನುಷ್ಯನ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಹೆಚ್ಚಿಸುವುದರ ಜೊತೆಗೆ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಸನ್ಮಾರ್ಗದಲ್ಲಿ ಸಾಗಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸತ್ಸಂಗ ಹಾಗೂ ಭಜನೆಗಳು ಅತ್ಯಂತ ಅಗತ್ಯ ಎಂದು ಮೈಸೂರಿನ ಇಸ್ಕಾನ್ ಸಂಸ್ಥೆಯ ಗುರುಗಳಾದ ಮಹಾಪುರಾಣದಾಸ್ ಹೇಳಿದರು.
ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ (Youth Club) ಹಾಗೂ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಋಗ್ವೇದಿ ಕುಟೀರದಲ್ಲಿ ಆಯೋಜಿಸಿದ್ದ ರಾಧಾಷ್ಟಮಿ (Radhashtami) ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀ ರಾಧಾ ಕೃಷ್ಣ ಆರತಿ ನೆರವೇರಿಸಿ ಅವರು ಮಾತನಾಡಿದರು.
ಸಜ್ಜನರ ಸಹವಾಸ ಹಾಗೂ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಮುಖ್ಯ. ಸತ್ಸಂಗದಿಂದ ಮನಸ್ಸಿನಲ್ಲಿರುವ ಗೊಂದಲ, ಭಯ, ಕೋಪ ಹಾಗೂ ದ್ವೇಷದಂತಹ ಭಾವನೆಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸತ್ಸಂಗ ಸಹಕಾರಿಯಾಗುತ್ತದೆ ಎಂದರು.
Radhashtami: ರಾಧಾಷ್ಟಮಿ ಭಕ್ತಿ ಮತ್ತು ಪ್ರೀತಿಯ ಸಂಕೇತ
ಪರಮ ಸತ್ಯವನ್ನು ಅರಿಯುವುದೇ ಪೂಜೆಯ ಒಂದು ಮುಖ್ಯ ಉದ್ದೇಶವಾಗಿದೆ. ರಾಧೆಯು ಶ್ರೀ ಮಹಾಲಕ್ಷ್ಮಿಯ ಅವತಾರವಾಗಿದ್ದು, ಭಕ್ತಿ ಮತ್ತು ಪ್ರೀತಿಯ ಸಂಕೇತವಾಗಿ ಕಾಣಲಾಗುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ ಭಗವಂತನಿಗೆ ಶರಣಾಗುವುದು ಅತ್ಯಂತ ಅಗತ್ಯ ಎಂದು ಮಹಾಪುರಾಣದಾಸ್ ತಿಳಿಸಿದರು.
ರಾಧಾಷ್ಟಮಿಯನ್ನು ಭಕ್ತಿ ಮತ್ತು ಪ್ರೀತಿಯ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ರಾಧಾಷ್ಟಮಿಯನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತದೆ. ರಾಧಾಷ್ಟಮಿ ಅಂಗವಾಗಿ ನಡೆಯುವ ಸತ್ಸಂಗವು ಎಲ್ಲರಲ್ಲೂ ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚಿಸಲಿ ಎಂದು ಅವರು ಆಶಿಸಿದರು.
ಸಾಮೂಹಿಕ ಸತ್ಸಂಗ ಹೆಚ್ಚಾಗಲಿ
ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಜ್ಞಾನದ ವೃದ್ಧಿಗೆ ಸತ್ಸಂಗವು ಸಹಕಾರಿಯಾಗಿದೆ. ಸಾಮೂಹಿಕ ಭಜನೆ, ಕೀರ್ತನೆ ಹಾಗೂ ಮಂತ್ರ ಪಠಣದಿಂದ ಉತ್ತಮ ಚಿಂತನೆಗಳು ಮೂಡುತ್ತವೆ. ಇದರಿಂದ ಪವಿತ್ರ ಜೀವನ ನಡೆಸಲು ಅಗತ್ಯವಾದ ಚೈತನ್ಯ ಹಾಗೂ ಶಕ್ತಿ ದೊರೆಯುತ್ತದೆ ಎಂದರು.
ಸಾಮೂಹಿಕವಾಗಿ ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಇಂತಹ ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಅವರು ತಿಳಿಸಿದರು.
Also Read>> ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಆದರ್ಶಗಳನ್ನು ಸ್ಮರಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಮಂತ್ರಜಪ, ಕೃಷ್ಣ ಆರತಿ
ಕಾರ್ಯಕ್ರಮದಲ್ಲಿ ‘ಹರೇ ರಾಮ, ಹರೇ ಕೃಷ್ಣ’ ಮಂತ್ರ ಜಪ ಹಾಗೂ ಶ್ರೀ ಕೃಷ್ಣ ಆರತಿಯನ್ನು ಮೈಸೂರಿನ ಇಸ್ಕಾನ್ ಸಂಸ್ಥೆಯ ಮಹಾಪುರಾಣದಾಸ್ ಹಾಗೂ ಭಕ್ತರು ನೆರವೇರಿಸಿದರು. ಭಕ್ತರು ಸಾಮೂಹಿಕವಾಗಿ ಮಂತ್ರ ಜಪ ಮತ್ತು ಭಜನೆಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ಸದಸ್ಯರಾದ ರಾಮ್ ಪ್ರಸಾದ್, ಮುರುಗೇಶ್, ಭೋಜರಾಜ್, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ವಾಣಿಶ್ರೀ, ಯಶಸ್ವಿನಿ, ಶ್ರಾವ್ಯ ಋಗ್ವೇದಿ, ಸುಪ್ರಿಯಾ ಭಾರದ್ವಾಜ್ ಸೇರಿದಂತೆ ಮೈಸೂರಿನ ಇಸ್ಕಾನ್ ಭಕ್ತರು ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











