ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Gandhiji) ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ಅವರು ಮಹಾತ್ಮ ಗಾಂಧೀಜಿಯವರ ಮಾತೃಭಾಷಾ ಚಿಂತನೆ ಕುರಿತು ಮಾತನಾಡಿದರು.
ಮಾತೃಭಾಷೆಯಲ್ಲಿನ ಶಿಕ್ಷಣವು ಜಗತ್ತಿನಲ್ಲಿ ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಪ್ರಮುಖ ಅಡಿಪಾಯವಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ಚೈತನ್ಯ ಶಕ್ತಿ, ಸೃಜನಶೀಲತೆ ಹಾಗೂ ಚಿಂತನಾ ಸಾಮರ್ಥ್ಯ ಹೆಚ್ಚುತ್ತದೆ. ಯಾವುದೇ ವಿಷಯವನ್ನು ಪರಿಪೂರ್ಣವಾಗಿ ಅರಿತುಕೊಳ್ಳಲು ಮಾತೃಭಾಷೆಯ ಶಿಕ್ಷಣ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ದೇಶಭಕ್ತಿಯ ಪ್ರೇರಣೆಯಾಗಿದ್ದ ಶಾಸ್ತ್ರಿ
ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದ ಪ್ರಧಾನಿಯಾಗಿ ದೇಶದ ಗಡಿ ರಕ್ಷಣೆ ಹಾಗೂ ಕೃಷಿ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸೈನಿಕರು ಮತ್ತು ರೈತರಲ್ಲಿ ರಾಷ್ಟ್ರೀಯ ಸ್ಪೂರ್ತಿ ಮೂಡಿಸುವ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮೂಲಕ ದೇಶದ ಜನರಲ್ಲಿ ದೇಶಭಕ್ತಿ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಿದ ಮಹಾನ್ ನಾಯಕರು ಎಂದು ಋಗ್ವೇದಿ ಹೇಳಿದರು.
Also Read>> ಶರಾವತಿ ಸಂತ್ರಸ್ತರ ಭೂಮಿ ಡಿ-ನೋಟಿಫಿಕೇಶನ್ | ಪ್ರಸ್ತಾವನೆ ಶೀಘ್ರ ಸಲ್ಲಿಸಲು ಸಚಿವರ ಸೂಚನೆ
ದೇಶದ ಗಡಿ ರಕ್ಷಣೆಗೆ ಮಹತ್ವ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಹಾಗೂ ಸರಳ ಜೀವನವನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ನೀಡಿದ ನಾಯಕತ್ವ ಹಾಗೂ ಅಹಿಂಸೆಯ ಸಂದೇಶ ವಿಶ್ವದಾದ್ಯಂತ ಪ್ರೇರಣೆಯಾಗಿದೆ ಎಂದರು.
ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿರುವುದು ಹಾಗೂ ಜಗತ್ತಿನ ವಿವಿಧ ದೇಶಗಳಲ್ಲಿ ಈ ದಿನವನ್ನು ಆಚರಿಸುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಅವರು ಹೇಳಿದರು.
Gandhiji: ಜೀವನ ಚರಿತ್ರೆ ಪರಿಚಯ
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಚರಿತ್ರೆ ಮತ್ತು ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಹಿಂಸಾ ತತ್ವವನ್ನು ಸಾರುವ ಗೀತೆಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಮಹಾತ್ಮ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ‘ಬಡವರ ಬಾದಾಮಿ’ ಎಂದೇ ಪ್ರಸಿದ್ಧವಾದ ಕಡ್ಲೆಕಾಯಿ ಬೀಜ ಹಾಗೂ ಗಾಂಧೀಜಿಯವರ ಕಿರುಪುಸ್ತಕವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸರಸ್ವತಿ, ಜಯರಾಜ್, ಸಿದ್ದರಾಜು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











