ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಪ್ರದಾಯದ ಸೊಬಗು, ಗೊಂಬೆಗಳ ವೈವಿಧ್ಯ, ಭಕ್ತಿಭಾವ ಹಾಗೂ ವಿದ್ಯಾರ್ಥಿಗಳ ಉತ್ಸಾಹದ ಸಮ್ಮಿಲನಕ್ಕೆ ಶಿವಮೊಗ್ಗ (Shivamogga) ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದಲ್ಲಿ ಸೋಮವಾರ ಚಾಲನೆ ದೊರೆತ ‘ಎಂಸಿಎ ದಸರಾ’ (Dasara) ಸಂಭ್ರಮ ಸಾಕ್ಷಿಯಾಯಿತು.
ಗೊಂಬೆಗಳ ಪ್ರದರ್ಶನದಲ್ಲಿ ಸಂಸ್ಕೃತಿಯ ಅನಾವರಣ
ಸಾಂಪ್ರದಾಯಿಕ ಉಡುಗೆಯಲ್ಲಿ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ವಿವಿಧ ಬಗೆಯ ಗೊಂಬೆಗಳನ್ನು ಕಲಾತ್ಮಕವಾಗಿ ಜೋಡಿಸಿದರು. ಮಧ್ಯದಲ್ಲಿ ದುರ್ಗಾದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಮಾವಿನ ತೋರಣ ಹಾಗೂ ಬಾಳೆಕಂಬಗಳಿಂದ ಅಲಂಕರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.

ಉಪನ್ಯಾಸಕರು ಹಾಗೂ ಸಹಪಾಠಿಗಳೊಂದಿಗೆ ಸಾಮೂಹಿಕವಾಗಿ ದೇವಿಯನ್ನು ಆರಾಧಿಸಿದ ವಿದ್ಯಾರ್ಥಿಗಳು, ಜಗತ್ತಿನ ಒಳಿತಿಗಾಗಿ ಹಾಗೂ ಬದುಕಿನ ಉನ್ನತಿಗಾಗಿ ಪ್ರಾರ್ಥಿಸಿದರು. ಕಲಿಕೆಯ ಅಂಗಳದಲ್ಲಿ ಸಂಸ್ಕೃತಿಯ ಕಂಪು ಮೂಡಿಸಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂಪ್ರದಾಯದ ಬಗೆಗಿನ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ದಸರೆಯ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ಗೊಂಬೆಗಳ ಪ್ರದರ್ಶನವೂ ಗಮನ ಸೆಳೆಯಿತು. ದಶಾವತಾರ, ವಿವಾಹ ಸಂಪ್ರದಾಯದ ವಿವಿಧ ಆಚರಣೆಗಳು, ಗಂಡು-ಹೆಣ್ಣಿನ ಜೋಡಿಗಳು, ಎತ್ತು, ಹಸು-ಕರು, ಆನೆ ಸೇರಿದಂತೆ ಜನಪದ ಬದುಕು ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗೊಂಬೆಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು.
Shivamogga: JNNCE ಕಾಲೇಜಿನಲ್ಲಿ ನಾಲ್ಕು ದಿನಗಳ ವೈವಿಧ್ಯಮಯ ಸಂಭ್ರಮ
ಎಂಸಿಎ ವಿಭಾಗದ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ದಸರಾ ಕಾರ್ಯಕ್ರಮದಲ್ಲಿ ಪೂಜೆ, ಕ್ರೀಡೆ, ಕಲೆ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.
ಮೊದಲ ದಿನ ದೇವಿಯ ಪೂಜೆಯೊಂದಿಗೆ ಬೆಂಕಿ ರಹಿತ ಸಾಂಪ್ರದಾಯಿಕ ಅಡುಗೆ ಸ್ಪರ್ಧೆ ನಡೆಯಲಿದೆ. ಎರಡನೇ ದಿನ ಕೆಂಪು ಬಣ್ಣದ ಉಡುಗೆ ಸಂಹಿತೆಯೊಂದಿಗೆ ರಂಗೋಲಿ, ಮೆಹಂದಿ, ಕೇರಂ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.

ತಾಂತ್ರಿಕ ಜ್ಞಾನಕ್ಕೂ ವೇದಿಕೆ
ಮೂರನೇ ದಿನ ನೀಲಿ ಬಣ್ಣದ ಉಡುಗೆ ಸಂಹಿತೆಯೊಂದಿಗೆ ತಾಂತ್ರಿಕ ಜ್ಞಾನ ಹಾಗೂ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಿದ್ಧವಾಗಲಿದೆ. ವೆಬ್ ಡಿಸೈನ್, ಐಟಿ ಮ್ಯಾನೇಜರ್, ರಸಪ್ರಶ್ನೆ, ಚರ್ಚೆ ಹಾಗೂ ಪಿಕ್ ಆ್ಯಂಡ್ ಆ್ಯಕ್ಟ್ ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನ, ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸಲಿವೆ.
ನಾಲ್ಕನೇ ದಿನ ಹಳದಿ ಬಣ್ಣದ ಉಡುಗೆ ಸಂಹಿತೆಯೊಂದಿಗೆ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ನಾಲ್ಕು ದಿನಗಳ ದಸರಾ ಸಂಭ್ರಮಕ್ಕೆ ತೆರೆ ಬೀಳಲಿದೆ.
Also Read>> ಕ್ರೈಸ್ಟ್ಕಿಂಗ್ ಪ್ರೌಢಶಾಲೆಯಲ್ಲಿ ಧ್ಯಾನ, ಏಕಾಗ್ರತೆ ತರಬೇತಿ ಕಾರ್ಯಕ್ರಮ
ಪ್ರಾಂಶುಪಾಲರಿಂದ ಉದ್ಘಾಟನೆ
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಕುಮಾರ್ ಸೇರಿದಂತೆ ವಿಭಾಗದ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












