ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ರಾಜ್ಯದಲ್ಲಿ ತಲೆದೋರಿರುವ ಮಳೆ ಕೊರತೆ ಹಾಗೂ ತೀವ್ರ ಬರ ಪರಿಸ್ಥಿತಿಯ ನಡುವೆ ಗ್ರಾಮೀಣ ಜನರು ಉದ್ಯೋಗ ಅರಸಿ ನಗರ ಮತ್ತು ಇತರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಡೆಯಲು ಬಳ್ಳಾರಿ (Ballari) ಜಿಲ್ಲಾಡಳಿತವು ‘ವಿಬಿ-ಜಿ ರಾಮ್ ಜಿ’ (ವಿಕ್ಷಿತ್ ಭಾರತ್–ಗ್ಯಾರಂಟಿ ಫಾರ್ ರೋಜಗಾರ್ & ಅಜೀವಿಕ ಮಿಷನ್ ಗ್ರಾಮೀಣ್) ಯೋಜನೆಯ (VB-G RAM G Scheme) ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದೆ.
ಬರಪೀಡಿತ ಪ್ರದೇಶಗಳಲ್ಲಿ ಕೆಲಸ ಕೇಳಿದವರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೂಚನೆಯಂತೆ ಗ್ರಾಮ ಪಂಚಾಯತ್ಗಳ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಲಾಗಿದೆ.
ಬರ ನಿರ್ವಹಣೆಯ ಭಾಗವಾಗಿ ರಾಜ್ಯದಲ್ಲಿ ಈಗಾಗಲೇ 2 ಕೋಟಿಗೂ ಅಧಿಕ ಮಾನವ ದಿನಗಳನ್ನು ಸೃಜಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಒದಗಿಸುವ ಮೂಲಕ ಗ್ರಾಮೀಣ ಜನರ ವಲಸೆಯನ್ನು ತಡೆಯಲು ಗಮನ ಹರಿಸಲಾಗಿದೆ.
ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ
ಬರ ಪರಿಸ್ಥಿತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಹೂಳೆತ್ತುವುದು, ಕೆರೆಗಳ ಪುನಶ್ಚೇತನ, ಕೃಷಿ ಹೊಂಡಗಳ ನಿರ್ಮಾಣ, ಚೆಕ್ ಡ್ಯಾಂ ಹಾಗೂ ವಿವಿಧ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಈ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿಯೇ ಉದ್ಯೋಗ ಸೃಷ್ಟಿಸಲಾಗುತ್ತಿದೆ.
ಕೂಲಿಕಾರರು ಉರಿಬಿಸಿಲಿನಿಂದ ತೊಂದರೆಗೆ ಒಳಗಾಗದಂತೆ ಕೆಲಸದ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜೊತೆಗೆ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳು ಕೆಲಸ ಕೋರಿ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ನೀಡಬೇಕು. ನಿಗದಿತ ಅವಧಿಯಲ್ಲಿ ಕೆಲಸ ನೀಡಲು ಸಾಧ್ಯವಾಗದಿದ್ದರೆ ನಿಯಮಾನುಸಾರ ನಿರುದ್ಯೋಗ ಭತ್ಯೆ ಪಾವತಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.
100ರಿಂದ 125 ದಿನಗಳಿಗೆ ಉದ್ಯೋಗ ಹೆಚ್ಚಳ
ಹೊಸ ನಿಯಮಾವಳಿಗಳ ಅನ್ವಯ ವಾರ್ಷಿಕ ಉದ್ಯೋಗದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದ್ದು, ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಭದ್ರತೆ ದೊರೆಯುತ್ತಿದೆ.
ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನಿಗದಿಪಡಿಸಲಾಗಿದ್ದು, ಆಧಾರ್ ಆಧಾರಿತ ವ್ಯವಸ್ಥೆಯ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶವಿಲ್ಲದಂತೆ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ.

Ballari: ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲೇ 3ನೇ ಸ್ಥಾನ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ವಿಬಿ-ಜಿ ರಾಮ್ ಜಿ’ ಯೋಜನೆಯ ಜಿಲ್ಲಾವಾರು ದೈನಂದಿನ ಪ್ರಗತಿ ವರದಿಯಂತೆ, ಮಾನವ ದಿನಗಳ ಸೃಜನೆಯ ಶೇಕಡಾವಾರು ಸಾಧನೆಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ.
2026–27ನೇ ಸಾಲಿಗೆ ಬಳ್ಳಾರಿ ಜಿಲ್ಲೆಗೆ ಒಟ್ಟು 51,31,133 ಮಾನವ ದಿನಗಳ ವಾರ್ಷಿಕ ಗುರಿ ನಿಗದಿಪಡಿಸಲಾಗಿದೆ. ಅಕ್ಟೋಬರ್ 15ರವರೆಗೆ 11,03,119 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು ವಾರ್ಷಿಕ ಗುರಿಯ ಶೇ.21.50ರಷ್ಟು ಪ್ರಗತಿ ದಾಖಲಾಗಿದೆ.
ಹಿಂದಿನ ದಿನದವರೆಗೆ 10,92,098 ಮಾನವ ದಿನಗಳು ಸೃಜನೆಯಾಗಿದ್ದರೆ, ಒಂದೇ ದಿನದಲ್ಲಿ ಹೆಚ್ಚುವರಿಯಾಗಿ 11,021 ಮಾನವ ದಿನಗಳ ಪ್ರಗತಿ ದಾಖಲಾಗಿದೆ.
ಅಕ್ಟೋಬರ್ ಅಂತ್ಯದವರೆಗೆ ಶೇ.44ರಷ್ಟು ಗುರಿ ಸಾಧಿಸುವ ಉದ್ದೇಶ ಹೊಂದಲಾಗಿದ್ದು, ಈ ಅವಧಿಗೆ 22,57,699 ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ.
ಜಿಲ್ಲೆಯಲ್ಲಿ ಮಸ್ಟರ್ ರೋಲ್ ನೀಡಲಾದ ಒಟ್ಟು 213 ಕಾಮಗಾರಿಗಳು ಪ್ರಸ್ತುತ ಚಾಲ್ತಿಯಲ್ಲಿವೆ. ಮಸ್ಟರ್ ರೋಲ್ ಪ್ರಕಾರ 17,359 ಕೂಲಿಕಾರರು ವಿವಿಧ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ಮೂಲಕ ಅಕ್ಟೋಬರ್ 15ರಂದು 6,951 ಮಾನವ ದಿನಗಳ ಹಾಜರಾತಿ ದಾಖಲಾಗಿದೆ.

ಶೇ.82.31ರಷ್ಟು ವೇತನ 8 ದಿನಗಳೊಳಗೆ – 52,862 ಕುಟುಂಬಗಳಿಗೆ ಉದ್ಯೋಗ
ಕೂಲಿಕಾರರಿಗೆ ಸಕಾಲದಲ್ಲಿ ವೇತನ ಪಾವತಿಸುವಲ್ಲಿಯೂ ಜಿಲ್ಲೆ ಉತ್ತಮ ಸಾಧನೆ ದಾಖಲಿಸಿದೆ. ಒಟ್ಟು ವೇತನ ಪಾವತಿಯಲ್ಲಿ ಶೇ.82.31ರಷ್ಟು ವೇತನವನ್ನು 1ರಿಂದ 8 ದಿನಗಳೊಳಗೆ ಪ್ರಕ್ರಿಯೆಗೊಳಿಸಲಾಗಿದೆ.
ಶೇ.13.3ರಷ್ಟು ವೇತನ 9ರಿಂದ 15 ದಿನಗಳ ಅವಧಿಯಲ್ಲಿ ಪ್ರಕ್ರಿಯೆಗೊಂಡಿದ್ದು, ಶೇ.4.4ರಷ್ಟು ವೇತನ ಮಾತ್ರ 15 ದಿನಗಳಿಗಿಂತ ಹೆಚ್ಚು ವಿಳಂಬವಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 52,862 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಒಂದೇ ದಿನದಲ್ಲಿ ಹೊಸದಾಗಿ 217 ಕುಟುಂಬಗಳು ಯೋಜನೆಯಡಿ ಸೇರ್ಪಡೆಗೊಂಡಿವೆ.
ತಾಲೂಕುವಾರು ನೋಡಿದರೆ ಸಿರುಗುಪ್ಪ ತಾಲೂಕಿನಲ್ಲಿ ಗರಿಷ್ಠ 13,941 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಕುರುಗೋಡು ತಾಲೂಕಿನಲ್ಲಿ 6,863 ಕುಟುಂಬಗಳಿಗೆ ಕೆಲಸ ನೀಡಲಾಗಿದೆ.
ಯೋಜನೆಯಡಿ ಉದ್ಯೋಗ ಪಡೆಯುತ್ತಿರುವವರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಗಮನಾರ್ಹವಾಗಿದೆ. ಜಿಲ್ಲಾ ಮಟ್ಟದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಶೇ.58.74ರಷ್ಟಿದೆ.
ಸಂಡೂರು ತಾಲೂಕಿನಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಗರಿಷ್ಠ ಶೇ.65.32ರಷ್ಟು ದಾಖಲಾಗಿದೆ.

11 ಲಕ್ಷ ಮಾನವ ದಿನ; ಸಂಡೂರು ಮುಂಚೂಣಿ
ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಐದು ತಾಲೂಕುಗಳ ಒಟ್ಟು 100 ಗ್ರಾಮ ಪಂಚಾಯತ್ಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಾಧನೆಯಲ್ಲಿ ಸಂಡೂರು ತಾಲೂಕು ಮೊದಲ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 28 ಕುಟುಂಬಗಳು 125 ದಿನಗಳ ಉದ್ಯೋಗವನ್ನು ಪೂರ್ಣಗೊಳಿಸಿವೆ. ಇದರಲ್ಲಿ ಪರಿಶಿಷ್ಟ ಪಂಗಡದ 3 ಹಾಗೂ ಇತರ ವರ್ಗದ 25 ಕುಟುಂಬಗಳು ಸೇರಿವೆ.
125 ದಿನಗಳ ಉದ್ಯೋಗ ಪೂರ್ಣಗೊಳಿಸಿದ 28 ಕುಟುಂಬಗಳ ಪೈಕಿ 26 ಕುಟುಂಬಗಳು ಸಂಡೂರು ತಾಲೂಕಿನವು. ಕುರುಗೋಡು ಮತ್ತು ಸಿರುಗುಪ್ಪ ತಾಲೂಕುಗಳಲ್ಲಿ ತಲಾ ಒಂದು ಕುಟುಂಬ ಗರಿಷ್ಠ ಉದ್ಯೋಗದ ದಿನಗಳನ್ನು ಪೂರೈಸಿದೆ.
Also Read>> ಮೈಸೂರಿನಿಂದ ಝಾನ್ಸಿಗೆ ವಿಶೇಷ ರೈಲು | ಯಾವಾಗ ಹೊರಡಲಿದೆ? ಎಲ್ಲೆಲ್ಲಿ ನಿಲುಗಡೆ?
ಗುಳೆ ತಡೆದು ಸ್ಥಳೀಯವಾಗಿಯೇ ಉದ್ಯೋಗ
ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರು ಕುಟುಂಬ ಸಮೇತ ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗುವುದನ್ನು ತಡೆಯಲು ಯೋಜನೆ ನೆರವಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಉದ್ಯೋಗದ ಕೊರತೆ ಎದುರಿಸುತ್ತಿದ್ದ ಪದವೀಧರ ಯುವಕ-ಯುವತಿಯರೂ ಯೋಜನೆಯಡಿ ನೋಂದಾಯಿಸಿಕೊಂಡು ಸ್ಥಳೀಯವಾಗಿಯೇ ಉದ್ಯೋಗ ಪಡೆದು ಆರ್ಥಿಕ ನೆರವು ಪಡೆಯುತ್ತಿದ್ದಾರೆ.
ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಅಂತರ್ಜಲ ಮರುಪೂರಣ, ರಸ್ತೆ ಸಂಪರ್ಕ, ಕೆರೆಗಳ ಪುನಶ್ಚೇತನ ಹಾಗೂ ಕೃಷಿ ಪೂರಕ ಮೂಲಸೌಕರ್ಯ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








