ಕಲ್ಪ ಮೀಡಿಯಾ ಹೌಸ್ | ಸೊರಬ (ಶಿವಮೊಗ್ಗ) |
ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಅನಾವರಣಗೊಳಿಸಲು ಪೋಷಕರು, ಶಿಕ್ಷಕರು ಹಾಗೂ ಸಂಘ-ಸಂಸ್ಥೆಗಳ ಪ್ರೋತ್ಸಾಹ ಅಗತ್ಯ ಎಂದು ತಹಶೀಲ್ದಾರ್ ಕೆ. ಪುರಂದರ ಹೇಳಿದರು.
ಸೊರಬ (Soraba) ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ (Dasara Uthsava)ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆಯ ಸಹಕಾರದೊಂದಿಗೆ ಭಾನುವಾರ ಆಯೋಜಿಸಿದ್ದ 18ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ಎಂಟನೇ ದಿನದ ಮಕ್ಕಳ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Soraba: ಪ್ರತಿಭೆ ಗುರುತಿಸಲು ಮಕ್ಕಳ ದಸರಾ ವೇದಿಕೆ
ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ದಸರಾ ಉತ್ಸವದ ಸಂದರ್ಭದಲ್ಲಿ ಮಕ್ಕಳಿಗಾಗಿಯೇ ವಿಶೇಷ ವೇದಿಕೆಯನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಕೆ. ಪುರಂದರ ಹೇಳಿದರು.
ಸೊರಬ ಪಟ್ಟಣದಲ್ಲಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಶ್ರೀದೇವಿಯ ಆರಾಧನೆ ನಡೆಸುತ್ತಿರುವುದು ಜಿಲ್ಲೆಯಲ್ಲಿಯೇ ವಿಶೇಷವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.
ಮಕ್ಕಳಿಗೆ ಮೊಬೈಲ್ ಬಳಕೆ ವಿಚಾರದಲ್ಲಿ ಕಿವಿಮಾತು
ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ್ತ ಉಪ ನಿಯಂತ್ರಕ ಬಂಗಾರಪ್ಪ ಜಡೇಕರ್ ಮಾತನಾಡಿ, ದಸರಾ ಉತ್ಸವದ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಮಕ್ಕಳು ತಮ್ಮ ಪೋಷಕರನ್ನು ಅನುಸರಿಸುವುದರಿಂದ ಪೋಷಕರು ಮೊದಲು ತಮ್ಮ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮಕ್ಕಳು ಶೈಕ್ಷಣಿಕವಾಗಿ ಅಗತ್ಯವಿರುವ ಮಾಹಿತಿ ಪಡೆಯಲು ಮೊಬೈಲ್ ಬಳಸಬೇಕು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಸಮಯ ಕಳೆಯುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
Also Read>> ದೇವರ ಅನುಗ್ರಹ-ಅವಕೃಪೆ ಬುದ್ಧಿಯ ದಿಕ್ಕಿನಿಂದಲೇ ತಿಳಿಯುತ್ತದೆ: ರಾಘವೇಶ್ವರ ಶ್ರೀ
ಪೌರಕಾರ್ಮಿಕರಿಗೆ ದಸರಾ ಉತ್ಸವ ಸಾಧಕ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಪುರಸಭೆಯ ಪೌರಕಾರ್ಮಿಕ ರಾಜು ಅವರಿಗೆ ದಸರಾ ಉತ್ಸವ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಾಯೋಜಕರಾದ ವೈದ್ಯ ಡಾ. ಎಸ್.ಟಿ. ಮುರುಳೀಧರ್, ಸಮಾಜ ಸೇವಕ ನಾಗರಾಜ ಗುತ್ತಿ, ಬಂಗಾರಪ್ಪ ಜಡೇಕರ್, ಕಟ್ಟಡ ಗುತ್ತಿಗೆದಾರ ಮಣಿಮೇಸ್ತ್ರಿ, ಗಜಾನನ ಎಲೆಕ್ಟ್ರಿಕಲ್ಸ್ ಮಾಲೀಕ ಬಿ.ಜಿ. ಮಹೇಶ್, ವಾಯು ವಿವಾಹ ಬಳಗದ ಬಸವಂತಪ್ಪ ಗುರ್ಕಿ ಹಾಗೂ ಗಂಗಾಮತ ಸಮಾಜದ ಅಧ್ಯಕ್ಷ ನಾಗರಾಜ ಎಲೆ ಅವರನ್ನು ಸನ್ಮಾನಿಸಲಾಯಿತು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ್ ಮೇಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಣ್ಣಬೈಲ್ ಪರಶುರಾಮಪ್ಪ, ಪಿಎಸ್ಐ ನವೀನ್ ಕುಮಾರ್, ಪಟ್ಟಣ ಆಶ್ರಯ ಸಮಿತಿ ಸದಸ್ಯ ನೆಹರು ಕೊಡಕಣಿ, ಹಿರೇಶಕುನ ದುರ್ಗಾಂಬ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಎನ್. ಷಣ್ಮುಖಾಚಾರ್, ಜಿ. ಕೆರಿಯಪ್ಪ, ಸುಜಾತಾ ಜೋತಾಡಿ, ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರಾಧ್ಯ ಪ್ರಾರ್ಥಿಸಿದರು. ಎಸ್. ಮಂಜುನಾಥ್ ಸ್ವಾಗತಿಸಿದರು. ಮಹೇಶ್ ಖಾರ್ವಿ ವಂದಿಸಿದರು. ರೂಪಾ ಮಧುಕೇಶ್ವರ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












