ಕಲ್ಪ ಮೀಡಿಯಾ ಹೌಸ್ | ಮುಂಬೈ |
ನಟ ಟೈಗರ್ ಶ್ರಾಫ್ (Tiger shroff) ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದಲ್ಲಿ ನಾಲ್ವರನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ಅ.18ರಂದು ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ಮುಂದುವರಿದಿದ್ದು, ಬಂಧಿತ ನಾಲ್ವರನ್ನು ಮುಂಬೈ (Mumbai) ಪೊಲೀಸ್ ಸಿಐಡಿ ಘಟಕವು ಅಧಿಕೃತವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಅಮೃತಸರದಿಂದ ಪಿಸ್ತೂಲ್, 20 ಗುಂಡು ಸಂಗ್ರಹ
ಪೊಲೀಸರ ಪ್ರಕಾರ, ಕುಣಾಲ್ ಎಂಬಾತ ಅನಿಲ್ ಪಂಡಿತ್ ಸೂಚನೆಯ ಮೇರೆಗೆ ಅಮೃತಸರದಿಂದ ಒಂದು ಪಿಸ್ತೂಲ್ ಹಾಗೂ 20 ಸುತ್ತಿನ ಗುಂಡುಗಳನ್ನು ಸಂಗ್ರಹಿಸಿದ್ದಾನೆ. ಈ ವೇಳೆ ಸುಮಿತ್ ಕೂಡ ಆತನೊಂದಿಗೆ ತೆರಳಿದ್ದ ಎನ್ನಲಾಗಿದೆ.
ನಂತರ ರಾಧಾ ಮತ್ತು ಬಬಿತಾ ಎಂಬವರು ಶಸ್ತ್ರಾಸ್ತ್ರವನ್ನು ಮುಂಬೈಗೆ ತೆಗೆದುಕೊಂಡು ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರ ಬಂಧನದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಮುಂಬೈ ಪೊಲೀಸ್ ಸಿಐಡಿ ನಾಲ್ವರನ್ನು ಅಧಿಕೃತವಾಗಿ ಬಂಧಿಸಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳಿಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ಕೂಡ ಪಡೆದುಕೊಳ್ಳಲಾಗಿದೆ.
ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ
ಅ.18ರ ಭಾನುವಾರ ಸಂಜೆ ಫುಟ್ಬಾಲ್ ಆಡಿದ ಬಳಿಕ ಕ್ಲಬ್ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಟೈಗರ್ ಶ್ರಾಫ್ ಅಪಾಯದಿಂದ ಪಾರಾಗಿದ್ದರು.
ಘಟನೆ ಬಳಿಕ ಆರೋಪಿಗಳಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದು, ಸೋಮವಾರ ಬೆಳಗ್ಗೆ ರಾಜಸ್ಥಾನದ ಕೋಟಾದಲ್ಲಿ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ನೇಪಾಳಕ್ಕೆ ಪರಾರಿಯಾಗಲು ಸಿದ್ಧತೆ ನಡೆಸುತ್ತಿದ್ದ ವೇಳೆ ಅವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆಗೆ ಸಂಚು ರೂಪಿಸಿದ್ದರೇ?
ಪ್ರಕರಣದ ತನಿಖೆ ಮುಂದುವರಿದಿದ್ದು, ಗುಂಡಿನ ದಾಳಿಯ ಹಿಂದಿನ ನಿಖರ ಉದ್ದೇಶವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ರೀತಿ ನೋಡಿದರೆ, ಆರೋಪಿಗಳು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
Also Read>> ಮೈಸೂರಿನಿಂದ ಝಾನ್ಸಿಗೆ ವಿಶೇಷ ರೈಲು | ಯಾವಾಗ ಹೊರಡಲಿದೆ? ಎಲ್ಲೆಲ್ಲಿ ನಿಲುಗಡೆ?
ಈ ಪ್ರಕರಣದಲ್ಲಿ ಬಂಧಿತರಾದ ಮೂವರು ಶಂಕಿತ ದಾಳಿಕೋರರನ್ನು ಸೋನಿಪತ್ನ ರೆಹಾನ್ ಅಲಿಯಾಸ್ ಸುಕ್ಕಾ, ಬಿಹಾರದ ಬೇಗುಸರಾಯ್ ಮೂಲದ ಹಾಗೂ ಮುಂಬೈನಲ್ಲಿ ವಾಸಿಸುತ್ತಿದ್ದ ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಮತ್ತು ಹರಿಯಾಣದ ಫೂಲ್ ಸಿಂಗ್ ಎಂದು ಗುರುತಿಸಲಾಗಿದೆ.
ಶಸ್ತ್ರಾಸ್ತ್ರ ಪೂರೈಕೆ ಜಾಲ, ದಾಳಿಯ ಹಿಂದಿನ ಉದ್ದೇಶ ಹಾಗೂ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










