ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಭಾರತೀಯ ರಾಷ್ಟ್ರೀಯ ಸೈನ್ಯ (INA) ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಹಸ, ಸಾಧನೆ, ತ್ಯಾಗ ಮತ್ತು ಬಲಿದಾನ ಭಾರತೀಯ ಇತಿಹಾಸದಲ್ಲಿ ಅಮೂಲ್ಯವಾದುದು ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಹೇಳಿದರು. ಚಾಮರಾಜನಗರ (Chamarajanagar) ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಜೈಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಐಎನ್ಎ ಸ್ಥಾಪನಾ ದಿನಾಚರಣೆ ಹಾಗೂ ದೇಶಪ್ರೇಮ ಸಾರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ರಾಷ್ಟ್ರೀಯ ಸೈನ್ಯದ ಸಾವಿರಾರು ಸೈನಿಕರಿಗೆ ಗೌರವ ನಮನ ಸಲ್ಲಿಸಿ, ಅವರ ತ್ಯಾಗವನ್ನು ಸ್ಮರಿಸುವ ಕಾರ್ಯ ಭಾರತೀಯ ನಾಗರಿಕರಿಂದ ಆಗಬೇಕು ಎಂದು ಹೇಳಿದರು.
ನೇತಾಜಿಯ ದೇಶಪ್ರೇಮ ಯುವಜನತೆಗೆ ಮಾದರಿ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬಾಲ್ಯದಿಂದಲೇ ದೇಶದ ಬಗ್ಗೆ ಅಪಾರ ಅಭಿಮಾನವಿತ್ತು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಸ್ವಾಮಿ ವಿವೇಕಾನಂದ ಹಾಗೂ ಅರವಿಂದ ಘೋಷ್ ಅವರ ಜೀವನ ಮತ್ತು ಸಾಧನೆಗಳಿಂದ ಅವರು ಪ್ರಭಾವಿತರಾಗಿದ್ದರು.
ಭಾರತ ಮಾತೆಯ ಗುಲಾಮಗಿರಿಯನ್ನು ಕೊನೆಗಾಣಿಸಲು ತ್ಯಾಗ ಮತ್ತು ಪ್ರಾಣಾರ್ಪಣೆಯ ಅಗತ್ಯವಿದೆ ಎಂಬ ಚಿಂತನೆ ನೇತಾಜಿಯವರ ಮೇಲೆ ಗಾಢ ಪರಿಣಾಮ ಬೀರಿತು. ದೇಶದ ಬಂಧನ ವಿಮೋಚನೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪಡೆದಿದ್ದ ಅಧಿಕಾರಿಯ ಹುದ್ದೆಯನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು ಎಂದು ಋಗ್ವೇದಿ ಸ್ಮರಿಸಿದರು.
‘ದಿಲ್ಲಿ ಚಲೋ’ ರಣಘೋಷ
ನೇತಾಜಿ ಸಶಸ್ತ್ರ ಹೋರಾಟಕ್ಕೆ ಕರೆ ನೀಡಿ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರು. 1942ರಲ್ಲಿ ಟೋಕಿಯೋ ರೇಡಿಯೋ ಮೂಲಕ ಭಾರತ ಹಾಗೂ ಪೂರ್ವ ಏಷ್ಯಾದ ಭಾರತೀಯರನ್ನು ಉದ್ದೇಶಿಸಿ ಅವರು ಮಾಡಿದ ಸ್ಪೂರ್ತಿದಾಯಕ ಭಾಷಣಗಳು ಸಾವಿರಾರು ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿ ಅವರನ್ನು ಹೋರಾಟಕ್ಕೆ ಒಗ್ಗೂಡಿಸಿದವು ಎಂದು ಹೇಳಿದರು.
ಜಪಾನ್ನಲ್ಲಿದ್ದ ರಾಸ್ ಬಿಹಾರಿ ಬೋಸ್ ಭಾರತೀಯರನ್ನು ಸಂಘಟಿಸಿ ನೇತಾಜಿಯವರಿಗೆ ನಾಯಕತ್ವ ವಹಿಸುವ ಅವಕಾಶ ಕಲ್ಪಿಸಿದರು. ಭಾರತೀಯ ರಾಷ್ಟ್ರೀಯ ಸೈನ್ಯದ ಮಹಾದಂಡನಾಯಕರಾಗಿ ನೇತಾಜಿ ಸಿಂಗಾಪುರದಲ್ಲಿ ಮೊಳಗಿಸಿದ ‘ದಿಲ್ಲಿ ಚಲೋ’ ರಣಘೋಷ ವಿಶ್ವದ ಗಮನ ಸೆಳೆಯಿತು ಎಂದು ವಿವರಿಸಿದರು.
ಅಂಡಮಾನ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ನೇತಾಜಿ
ಐಎನ್ಎ ಪಡೆಗಳ ಹೋರಾಟದ ಸಂದರ್ಭದಲ್ಲಿ ಸಿಂಗಾಪುರ ಹಾಗೂ ಅಂಡಮಾನ್ ದ್ವೀಪಗಳ ಮೇಲಿನ ನಿಯಂತ್ರಣದ ಬೆಳವಣಿಗೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹ ನೀಡಿದವು. ಅಂಡಮಾನ್ ದ್ವೀಪದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯದ ಘೋಷಣೆ ಮಾಡಿದ ನೇತಾಜಿಯವರ ಧೈರ್ಯ, ಸಾಹಸ ಮತ್ತು ದೇಶಪ್ರೇಮ ಇಂದಿಗೂ ಭಾರತೀಯರಿಗೆ ಸ್ಫೂರ್ತಿಯಾಗಿದೆ ಎಂದು ಋಗ್ವೇದಿ ಹೇಳಿದರು.
ಐಎನ್ಎಯ ಮಹಿಳಾ ಘಟಕವಾದ ಝಾನ್ಸಿ ರಾಣಿ ಪಡೆಯ ನಾಯಕತ್ವ ವಹಿಸಿದ್ದ ಕ್ಯಾಪ್ಟನ್ ಲಕ್ಷ್ಮಿ ಸಹಗಲ್ ಸೇರಿದಂತೆ ಅನೇಕರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು ಎಂದರು.

Chamarajanagar: ಯುವಕರು ದೇಶಪ್ರೇಮ ಬೆಳೆಸಿಕೊಳ್ಳಬೇಕು
ಯುವಕರು ಮತ್ತು ವಿದ್ಯಾರ್ಥಿಗಳು ದೇಶ ಹಾಗೂ ಸಮಾಜ ವಿರೋಧಿ ಭಾವನೆಗಳನ್ನು ಬೆಳೆಸಿಕೊಳ್ಳದೆ ದೇಶಪ್ರೇಮಿಗಳಾಗಿ ಉತ್ತಮ ಕಾರ್ಯಗಳನ್ನು ಮಾಡಬೇಕು. ದೇಶದ ಅಭಿವೃದ್ಧಿಗೆ ತಮ್ಮ ಸೇವೆಯನ್ನು ಸದಾ ಮುಡಿಪಾಗಿಡಬೇಕು. ಯಾವುದೇ ಕಾರ್ಯವನ್ನು ಶ್ರದ್ಧೆ, ಭಕ್ತಿ ಹಾಗೂ ಸ್ವಯಂಪ್ರೇರಣೆಯಿಂದ ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸುರೇಶ್ ಋಗ್ವೇದಿ ಕರೆ ನೀಡಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ, ಭಾರತದ ವಿಮೋಚನಾ ಹೋರಾಟದಲ್ಲಿ ಚಳವಳಿಕಾರರು ಹಾಗೂ ಸೈನಿಕರ ಕೊಡುಗೆ ವ್ಯಾಪಕವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೈನ್ಯದ ಸೈನಿಕರು ಚಿತ್ತದಿಂದ ಹೋರಾಡಿ, ಬಂಧನಕ್ಕೊಳಗಾಗಿಯೂ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.
Also Read>> ಶಿವಮೊಗ್ಗ ದಸರಾ ಆನೆ ಘಟನೆ: ಅಧಿಕಾರಿಗಳ ಲೋಪವೇ? ವರದಿ ಬಳಿಕ ನಿರ್ಧಾರ ಎಂದ ಸಚಿವ ಮಧು ಬಂಗಾರಪ್ಪ
ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಸೇವೆಯನ್ನು ಸಮಾಜಕ್ಕೆ ಸಮರ್ಪಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ದೈಹಿಕ ಸಾಮರ್ಥ್ಯ ಹಾಗೂ ಜ್ಞಾನವನ್ನು ಬೆಳೆಸಿಕೊಂಡು ದೇಶ ಸೇವೆಗಾಗಿ ಸೈನ್ಯಕ್ಕೆ ಸೇರುವ ಬಗ್ಗೆಯೂ ಚಿಂತಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಮಹಾದೇವಪ್ರಸಾದ್, ಸಂಜು, ಸಂಪತ್ತು, ಶ್ರಾವ್ಯ ಋಗ್ವೇದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









