ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಮೂಲಾಂಕಗಳಷ್ಟು ಹೆಚ್ಚಿಸಿ ಶೇ.5.50ಕ್ಕೆ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಗೃಹಸಾಲದ (Home Loan) ಮಾಸಿಕ ಕಂತು ಹಾಗೂ ಮನೆ ಖರೀದಿದಾರರ ಮೇಲಿನ ಆರ್ಥಿಕ ಹೊರೆ ಮತ್ತೆ ಚರ್ಚೆಗೆ ಬಂದಿದೆ. ಆರ್‌ಬಿಐ ತನ್ನ ನೀತಿಯ ನಿಲುವನ್ನು ‘ಕ್ಯಾಲಿಬ್ರೇಟೆಡ್ ಟೈಟನಿಂಗ್’ ಕಡೆಗೆ ಬದಲಿಸಿರುವುದು ಬಡ್ಡಿದರ(Intrest) ಏರಿಕೆಯ ಹೊಸ ಚಕ್ರದ ಸಂಕೇತವಾಗಿದೆ.
ಬಡ್ಡಿದರ ಏರಿಕೆಯಾದಾಗ ಸಾಮಾನ್ಯವಾಗಿ ಇಎಂಐ ಎಷ್ಟು ಹೆಚ್ಚಾಗಲಿದೆ ಎಂಬುದರತ್ತಲೇ ಸಾಲಗಾರರ ಗಮನ ಕೇಂದ್ರೀಕೃತವಾಗುತ್ತದೆ. ಆದರೆ ಇದರ ಹಿಂದೆ ಮತ್ತೊಂದು ಪ್ರಮುಖ ಆರ್ಥಿಕ ಅಪಾಯ ಅಡಗಿದೆ. ಇಎಂಐ ಮೊತ್ತವನ್ನು ಹೆಚ್ಚಿಸದಿದ್ದರೆ ಸಾಲದ ಮರುಪಾವತಿ ಅವಧಿ ವಿಸ್ತರಣೆಯಾಗಬಹುದು. ಇದರಿಂದ ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಒಟ್ಟು ಬಡ್ಡಿ ಮೊತ್ತ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
Home Loan: ಮನೆ ಖರೀದಿಯ ಆರಂಭಿಕ ವರ್ಷಗಳಲ್ಲೇ ಹೆಚ್ಚಿನ ಆರ್ಥಿಕ ಹೊರೆ
ಬಹುತೇಕ ಜನರಿಗೆ ಸ್ವಂತ ಮನೆ ಖರೀದಿ ಜೀವನದ ಅತಿ ದೊಡ್ಡ ಆರ್ಥಿಕ ಬದ್ಧತೆಗಳಲ್ಲಿ ಒಂದಾಗಿದೆ. ಮನೆಯ ಮುಂಗಡ ಹಣ ಪಾವತಿಸುವುದರ ಜೊತೆಗೆ ಮುದ್ರಾಂಕ ಶುಲ್ಕ, ನೋಂದಣಿ ವೆಚ್ಚ, ಒಳಾಂಗಣ ವಿನ್ಯಾಸ, ಪೀಠೋಪಕರಣ ಖರೀದಿ ಹಾಗೂ ಮನೆ ಬದಲಾವಣೆಯಂತಹ ಹಲವು ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗುತ್ತದೆ.
ಇದರಿಂದ ಮನೆ ಖರೀದಿಸಿದ ಮೊದಲ ಕೆಲವು ವರ್ಷಗಳು ಕುಟುಂಬದ ಆರ್ಥಿಕ ಸ್ಥಿತಿಗೆ ಅತ್ಯಂತ ಸೂಕ್ಷ್ಮ ಅವಧಿಯಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಗೃಹಸಾಲದ ಬಡ್ಡಿದರ ಏರಿಕೆಯಾದರೆ ಮಾಸಿಕ ಬಜೆಟ್ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಬಹುದು.
ಆದರೂ ಸಾಲ ಮಂಜೂರಾತಿಯ ಸಮಯದಲ್ಲಿ ಬಡ್ಡಿದರ ತುಸು ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಅನೇಕ ಸಾಲಗಾರರು ಫ್ಲೋಟಿಂಗ್-ರೇಟ್ ಗೃಹಸಾಲಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಬಡ್ಡಿದರ ಏರಿದರೆ ಸಾಲಗಾರರ ಮುಂದಿರುವ ಎರಡು ಆಯ್ಕೆಗಳು
ಫ್ಲೋಟಿಂಗ್ ಬಡ್ಡಿದರದ ಗೃಹಸಾಲ ಪಡೆದವರಿಗೆ ಬಡ್ಡಿದರ ಏರಿಕೆಯಾದಾಗ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ. ಹೆಚ್ಚಿದ ಬಡ್ಡಿದರಕ್ಕೆ ಅನುಗುಣವಾಗಿ ಹೆಚ್ಚಿನ ಇಎಂಐ ಪಾವತಿಸುವುದು ಮೊದಲ ಆಯ್ಕೆಯಾದರೆ, ಇಎಂಐ ಮೊತ್ತವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಸಾಲದ ಅವಧಿಯನ್ನು ವಿಸ್ತರಿಸಿಕೊಳ್ಳುವುದು ಮತ್ತೊಂದು ಆಯ್ಕೆಯಾಗಿದೆ.
ಎರಡನೇ ಆಯ್ಕೆಯಲ್ಲಿ ತಕ್ಷಣದ ಮಾಸಿಕ ಆರ್ಥಿಕ ಹೊರೆ ಹೆಚ್ಚಾಗದಿದ್ದರೂ ಸಾಲದ ಅವಧಿ ದೀರ್ಘವಾಗುತ್ತದೆ. ಪರಿಣಾಮವಾಗಿ ಸಾಲಗಾರರು ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಒಟ್ಟಾರೆ ಬಡ್ಡಿ ವೆಚ್ಚ ಹೆಚ್ಚಾಗಬಹುದು.
ಪ್ರಸ್ತುತ ರೆಪೊ ದರ ಶೇ.5.50ರಲ್ಲಿದ್ದು, ಹಿಂದಿನ ಬಡ್ಡಿದರ ಚಕ್ರದಲ್ಲಿ ಕಂಡಿದ್ದ ಶೇ.6.50ರ ಗರಿಷ್ಠ ಮಟ್ಟಕ್ಕಿಂತ 100 ಮೂಲಾಂಕಗಳಷ್ಟು ಕಡಿಮೆಯಾಗಿದೆ. ದೀರ್ಘಾವಧಿಯ ಗೃಹಸಾಲದಲ್ಲಿ ಬಡ್ಡಿದರಗಳ ಏರಿಳಿತ ಸಾಲಗಾರರ ಮರುಪಾವತಿ ಯೋಜನೆಯ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಇದು ಸೂಚಿಸುತ್ತದೆ.
39, 52 ಅಥವಾ 65 ತಿಂಗಳು ಬಡ್ಡಿದರ ಸ್ಥಿರಗೊಳಿಸುವ ಆಯ್ಕೆ
ಬಡ್ಡಿದರದ ಏರಿಳಿತದ ನಡುವೆಯೇ ಮಾಸಿಕ ಮರುಪಾವತಿಯಲ್ಲಿ ಹೆಚ್ಚಿನ ನಿಶ್ಚಿತತೆ ಬಯಸುವ ಗ್ರಾಹಕರಿಗಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್ ಹೈಬ್ರಿಡ್ ಗೃಹಸಾಲ ಯೋಜನೆಯನ್ನು ಮುಂದಿಟ್ಟಿದೆ.
ಈ ಯೋಜನೆಯಡಿ ಅರ್ಹ ಗ್ರಾಹಕರು ತಮ್ಮ ಗೃಹಸಾಲದ ಬಡ್ಡಿದರವನ್ನು 39, 52 ಅಥವಾ 65 ತಿಂಗಳುಗಳವರೆಗೆ ಸ್ಥಿರಗೊಳಿಸಿಕೊಳ್ಳಬಹುದು. ಆಯ್ಕೆ ಮಾಡಿದ ಅವಧಿಯಲ್ಲಿ ರೆಪೊ ದರ ಏರಿಕೆಯಾದರೂ ಸಾಲದ ಬಡ್ಡಿದರ ಮತ್ತು ಇಎಂಐ ಬದಲಾಗದೆ ಸ್ಥಿರವಾಗಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಸ್ಥಿರ ಅವಧಿ ಪೂರ್ಣಗೊಂಡ ಬಳಿಕ ಸಾಲವು ರೆಪೊ ದರ ಹಾಗೂ ಸಾಲ ಮಂಜೂರಾತಿ ಸಂದರ್ಭದಲ್ಲಿ ನಿಗದಿಪಡಿಸಿದ ಪೂರ್ವನಿರ್ಧರಿತ ಸ್ಪ್ರೆಡ್ ಆಧಾರಿತ ಫ್ಲೋಟಿಂಗ್-ದರ ಮಾದರಿಗೆ ಬದಲಾಗುತ್ತದೆ.
₹1 ಕೋಟಿ ಸಾಲಕ್ಕೆ ₹3.46 ಲಕ್ಷ ಸಂಭಾವ್ಯ ಉಳಿತಾಯ
ಬ್ಯಾಂಕ್ ನೀಡಿರುವ ವಿವರಣಾತ್ಮಕ ಲೆಕ್ಕಾಚಾರದ ಪ್ರಕಾರ, 25 ವರ್ಷಗಳ ಅವಧಿಯ ₹1 ಕೋಟಿ ಗೃಹಸಾಲಕ್ಕೆ ಶೇ.7.60ರ ಸ್ಥಿರ ಬಡ್ಡಿದರ ಪರಿಗಣಿಸಿದರೆ ಆರಂಭಿಕ ಇಎಂಐ ₹74,550 ಆಗಿರುತ್ತದೆ. 65 ತಿಂಗಳ ಅವಧಿಯಲ್ಲಿ ರೆಪೊ ದರ ಶೇ.5.50ರಿಂದ ಶೇ.6.50ಕ್ಕೆ ಏರಿಕೆಯಾದರೆ ಫ್ಲೋಟಿಂಗ್ ಸಾಲದ ಇಎಂಐ 65ನೇ ತಿಂಗಳಲ್ಲಿ ₹82,450ಕ್ಕಿಂತ ಹೆಚ್ಚಾಗಬಹುದು.
ಇದೇ ಸಂದರ್ಭದಲ್ಲಿ 65 ತಿಂಗಳ ಹೈಬ್ರಿಡ್ ಸ್ಥಿರ ಅವಧಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಇಎಂಐ ₹74,550ರಲ್ಲೇ ಉಳಿಯುತ್ತದೆ. 65ನೇ ತಿಂಗಳಲ್ಲಿ ಎರಡರ ನಡುವಿನ ವ್ಯತ್ಯಾಸ ₹7,900ಕ್ಕಿಂತ ಹೆಚ್ಚಾಗಬಹುದು. ಸ್ಥಿರ ಅವಧಿಯಲ್ಲಿ ಸುಮಾರು ₹3.46 ಲಕ್ಷದ ಸಂಭಾವ್ಯ ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.
ಅದೇ ರೀತಿ ₹75 ಲಕ್ಷ ಗೃಹಸಾಲಕ್ಕೆ ಆರಂಭಿಕ ಇಎಂಐ ₹55,900 ಆಗಿದ್ದು, ರೆಪೊ ದರ 100 ಮೂಲಾಂಕ ಏರಿಕೆಯಾದಲ್ಲಿ ಫ್ಲೋಟಿಂಗ್ ಇಎಂಐ ₹61,800ಕ್ಕಿಂತ ಹೆಚ್ಚಾಗಬಹುದು. ಹೈಬ್ರಿಡ್ ಸಾಲದಲ್ಲಿ ₹55,900ರ ಇಎಂಐ ಮುಂದುವರಿದರೆ ತಿಂಗಳಿಗೆ ₹5,900ಕ್ಕಿಂತ ಹೆಚ್ಚಿನ ವ್ಯತ್ಯಾಸ ಉಂಟಾಗಲಿದ್ದು, ಸ್ಥಿರ ಅವಧಿಯಲ್ಲಿ ಸುಮಾರು ₹2.59 ಲಕ್ಷ ಸಂಭಾವ್ಯ ಉಳಿತಾಯವಾಗಬಹುದು ಎಂದು ಲೆಕ್ಕಾಚಾರ ತಿಳಿಸಿದೆ.
ಈ ಅಂಕಿಅಂಶಗಳು ವಿವರಣಾತ್ಮಕ ಉದ್ದೇಶಕ್ಕೆ ಮಾತ್ರವಾಗಿದ್ದು, ವಾಸ್ತವಿಕ ಫಲಿತಾಂಶಗಳು ಸಾಲದ ಮೊತ್ತ, ಮರುಪಾವತಿ ಅವಧಿ, ಬಡ್ಡಿದರದಲ್ಲಿನ ಬದಲಾವಣೆ, ಗ್ರಾಹಕರ ಅರ್ಹತೆ ಹಾಗೂ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತವೆ.
‘ಕಡಿಮೆ ಬಡ್ಡಿದರ ಮಾತ್ರ ಗಮನಿಸಿದರೆ ಸಾಲದು’
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮಾರ್ಟ್‌ಗೇಜಸ್ ವಿಭಾಗದ ಬಿಸಿನೆಸ್ ಹೆಡ್ ನಕುಲ್ ಸಕ್ಸೇನಾ ಮಾತನಾಡಿ, ಬಡ್ಡಿದರಗಳು ಕಾಲಕಾಲಕ್ಕೆ ಚಕ್ರಾಕಾರವಾಗಿ ಏರಿಳಿತ ಕಾಣುತ್ತವೆ. ಮನೆ ಖರೀದಿಸಿದ ಆರಂಭಿಕ ವರ್ಷಗಳಲ್ಲಿ ಹೊಸ ಇಎಂಐ ಜೊತೆಗೆ ಮನೆಯ ಇತರ ವೆಚ್ಚಗಳನ್ನು ನಿಭಾಯಿಸುತ್ತಾ ಉಳಿತಾಯವನ್ನು ಮತ್ತೆ ರೂಪಿಸಿಕೊಳ್ಳಬೇಕಾಗುವುದರಿಂದ ಸಾಲಗಾರರಿಗೆ ಈ ಅವಧಿ ಆರ್ಥಿಕವಾಗಿ ಹೆಚ್ಚು ಸವಾಲಿನದ್ದಾಗಿರುತ್ತದೆ ಎಂದರು.
ಸಾಲ ಮಂಜೂರಾತಿ ಸಂದರ್ಭದಲ್ಲಿ ಅತಿ ಕಡಿಮೆ ಬಡ್ಡಿದರ ಪಡೆಯುವುದರ ಮೇಲಷ್ಟೇ ಗಮನಹರಿಸುವ ಬದಲು, ಮುಂದಿನ ಕೆಲವು ವರ್ಷಗಳಲ್ಲಿ ಬಡ್ಡಿದರ ಏರಿದರೆ ಕುಟುಂಬದ ಬಜೆಟ್ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನೂ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.
ಮರುಪಾವತಿಯಲ್ಲಿ ನಿಶ್ಚಿತತೆ ಬಯಸುವ ಗ್ರಾಹಕರಿಗೆ ಹೈಬ್ರಿಡ್ ಗೃಹಸಾಲವು ನಿರ್ದಿಷ್ಟ ಅವಧಿಯವರೆಗೆ ರೆಪೊ ದರ ಏರಿಕೆಯಿಂದ ಉಂಟಾಗಬಹುದಾದ ಇಎಂಐ ಹೆಚ್ಚಳ ಹಾಗೂ ಸಾಲದ ಅವಧಿ ವಿಸ್ತರಣೆಯಿಂದ ರಕ್ಷಣೆ ನೀಡುತ್ತದೆ ಎಂದು ತಿಳಿಸಿದರು.
Also Read>> ಶಿವಮೊಗ್ಗ | ಫಾರ್ಮಸಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ
ಗೃಹಸಾಲ ಆಯ್ಕೆಯಲ್ಲಿ ದೀರ್ಘಾವಧಿ ವೆಚ್ಚವೂ ಮುಖ್ಯ
ಗೃಹಸಾಲ ಆಯ್ಕೆ ಮಾಡುವಾಗ ಆರಂಭಿಕ ಬಡ್ಡಿದರ ಮಾತ್ರ ನಿರ್ಧಾರಕ ಅಂಶವಾಗಬಾರದು. ಸಾಲದ ಅವಧಿಯಲ್ಲಿ ಬಡ್ಡಿದರ ಬದಲಾವಣೆಯಿಂದ ಇಎಂಐ ಮತ್ತು ಒಟ್ಟಾರೆ ಮರುಪಾವತಿ ಮೊತ್ತದ ಮೇಲೆ ಆಗಬಹುದಾದ ಪರಿಣಾಮವನ್ನೂ ಪರಿಗಣಿಸುವುದು ಮುಖ್ಯ.
ಕೈಗೆಟುಕುವ ಮಾಸಿಕ ಕಂತು, ಮರುಪಾವತಿಯ ನಿಶ್ಚಿತತೆ, ಅಗತ್ಯ ನಮ್ಯತೆ ಹಾಗೂ ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಒಟ್ಟಾರೆ ವೆಚ್ಚದ ನಡುವೆ ಸಮತೋಲನ ಸಾಧಿಸುವ ಗೃಹಸಾಲವನ್ನು ಆಯ್ಕೆ ಮಾಡುವುದು ಮನೆ ಖರೀದಿದಾರರ ಆರ್ಥಿಕ ಯೋಜನೆಗೆ ಮಹತ್ವದ್ದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








