ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ (ಶಿವಮೊಗ್ಗ) |
ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಸಮಾಜವು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತೀರ್ಥಹಳ್ಳಿಯಲ್ಲಿ (Thirthahalli) ಸಮಾಜದ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಸೇರಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ. ಸಮಾಜದ ಜೊತೆ ಸದಾ ಜೊತೆಯಾಗಿ ನಿಲ್ಲುತ್ತೇನೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು.
ತೀರ್ಥಹಳ್ಳಿಯ ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಹಾಗೂ ಆರ್ಯ ಈಡಿಗರ ಸಂಘ, ಬಿಲ್ಲವ ಸಂಘ, ನಾರಾಯಣ ಗುರು ವಿಚಾರ ವೇದಿಕೆ, ಈಡಿಗ-ಬಿಲ್ಲವ ಮಹಿಳಾ ಸಂಘ ಮತ್ತು ಸಮಾಜದ ಸಹಕಾರ ಸಂಘಗಳ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಸಮಾಜದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Thirthahalli: ‘ಪಂಗಡ, ಪಕ್ಷದ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗೋಣ’
ನಮ್ಮ ಸಮಾಜದವರು ಇಲ್ಲಿಯವರೆಗೆ ಹೊಡೆತಗಳನ್ನು ತಿಂದಿದ್ದು ಸಾಕು. ಇನ್ನು ಮುಂದೆ ಎಲ್ಲರೂ ಒಗ್ಗಟ್ಟಾಗಬೇಕು. ಪಂಗಡ ಹಾಗೂ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜದ ಏಳಿಗೆಗಾಗಿ ದುಡಿಯಬೇಕು ಎಂದು ಮಧು ಬಂಗಾರಪ್ಪ ಕರೆ ನೀಡಿದರು.
ತೀರ್ಥಹಳ್ಳಿಯಲ್ಲಿ ಸಮಾಜ ಯಶಸ್ವಿಯಾಗಿ ಸಂಘಟಿತವಾಗಿರುವಂತೆಯೇ ರಾಜ್ಯಾದ್ಯಂತ ಸಮಾಜವನ್ನು ಸಂಘಟಿಸಬೇಕು. ಆ ಮೂಲಕ ಸಮಾಜದ ಶಕ್ತಿಯನ್ನು ಕಾಯ್ದುಕೊಳ್ಳಬೇಕು. ಯಾವುದೇ ಕೆಲಸಕ್ಕಾಗಿ ಬೇರೆಯವರ ಮನೆ ಬಾಗಿಲನ್ನು ಕಾಯುವ ಪರಿಸ್ಥಿತಿ ಇನ್ನು ಮುಂದೆ ಬರಬಾರದು. ಶತಮಾನಗಳ ಹಿಂದೆಯೇ ನಾರಾಯಣ ಗುರುಗಳು ನೀಡಿದ ಸಂದೇಶದಂತೆ ಸಂಘಟಿತರಾಗಿ ಮುನ್ನಡೆಯಬೇಕು ಎಂದರು.
‘ರಾಜ್ಕುಮಾರ್, ಬಂಗಾರಪ್ಪ ಸಮಾಜದ ಎರಡು ಕಣ್ಣುಗಳು’
ಸಮಾಜದ ಹೆಮ್ಮೆಯ ನಾಯಕರನ್ನು ಸ್ಮರಿಸಿದ ಮಧು ಬಂಗಾರಪ್ಪ, ವರನಟ ಡಾ. ರಾಜ್ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜದ ಎರಡು ಕಣ್ಣುಗಳಿದ್ದಂತೆ. ನಟ ಪುನೀತ್ ರಾಜ್ಕುಮಾರ್ ಸಮಾಜದ ಮೂರನೇ ಕಣ್ಣಿನಂತೆ ಹೊರಹೊಮ್ಮಿದ್ದಾರೆ. ಅವರನ್ನು ಆರಾಧಿಸುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಂತಹ ಮಹಾನ್ ವ್ಯಕ್ತಿತ್ವಗಳನ್ನು ಪಡೆದಿರುವ ಸಮಾಜದ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಹೊಂದಬೇಕು ಎಂದು ಹೇಳಿದರು.
ನಾರಾಯಣ ಗುರು ಕುರಿತ ಮೂರು ಬೇಡಿಕೆ ಈಡೇರಿಸಿದ್ದ ಸಿದ್ದರಾಮಯ್ಯ
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕು, ಅವರ ಚಿಂತನೆಗಳ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಅಧ್ಯಯನ ಪೀಠ ಸ್ಥಾಪಿಸಬೇಕು ಹಾಗೂ ನಾರಾಯಣ ಗುರುಗಳ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಎಂಬ ಮೂರು ಬೇಡಿಕೆಗಳನ್ನು ತಾವು ವಿರೋಧ ಪಕ್ಷದಲ್ಲಿದ್ದಾಗಲೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾಗಿ ಮಧು ಬಂಗಾರಪ್ಪ ತಿಳಿಸಿದರು.
ಈ ಮೂರು ಬೇಡಿಕೆಗಳಿಗೂ ಸಿದ್ದರಾಮಯ್ಯ ಅಂದೇ ಸಮ್ಮತಿ ಸೂಚಿಸಿದ್ದರು. ನಾರಾಯಣ ಗುರುಗಳ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅವರ ಆಶಯದಂತೆ ಸಮಾಜದ ಪ್ರತಿಯೊಂದು ಮಗುವೂ ಶಿಕ್ಷಣವಂತರಾಗಬೇಕು. ಶಿಕ್ಷಣವೇ ಸಮಾಜದ ಪ್ರಗತಿಗೆ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.

ಸಮುದಾಯದ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಬದ್ಧ
ಪ್ರಸ್ತುತ ಸರ್ಕಾರದಲ್ಲಿ ತಮ್ಮ ಸಮಾಜದಿಂದ ತಾವೊಬ್ಬರೇ ಸಚಿವರಾಗಿದ್ದು, ಸಮಾಜದ ಅಭಿವೃದ್ಧಿಯ ಹೊಣೆಗಾರಿಕೆಯೂ ತಮ್ಮ ಮೇಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಸಮಾಜದ ವಿವಿಧ ಬೇಡಿಕೆಗಳನ್ನು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ತಮ್ಮ ಗಮನಕ್ಕೆ ತಂದಿದ್ದಾರೆ. ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಾವು ಬದ್ಧರಾಗಿರುವುದಾಗಿ ಭರವಸೆ ನೀಡಿದರು.
ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವುದು ನನ್ನ ಜವಾಬ್ದಾರಿ
ಶರಾವತಿ ಸಂತ್ರಸ್ತರ ಸಮಸ್ಯೆಯ ಕುರಿತು ಮಾತನಾಡಿದ ಸಚಿವರು, ನಾಡಿಗೆ ಬೆಳಕು ನೀಡಲು ಈ ಜಿಲ್ಲೆಯ ಜನರು ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡಿದ್ದಾರೆ. ಸಂತ್ರಸ್ತರಲ್ಲಿ ತಮ್ಮ ಸಮಾಜದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ದೊರಕುವಂತೆ ಮಾಡುವುದು ತಮ್ಮ ಜವಾಬ್ದಾರಿ ಎಂದು ಹೇಳಿದರು.
ಈ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಒಪ್ಪುವಂತಹ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ತಂದು ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಶರಾವತಿ ಸಂತ್ರಸ್ತರ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆಶಯವನ್ನು ಈಡೇರಿಸುವುದು ತಮ್ಮ ಗುರಿಯಾಗಿದೆ ಎಂದರು.
Also Read>> ಗೃಹಸಾಲದ ಬಡ್ಡಿದರ ಏರಿಕೆ: ಮನೆ ಖರೀದಿದಾರರಿಗೆ ಕಾದಿದೆ ‘ಗುಪ್ತ ಅಪಾಯ’ ಏನು?
ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ
ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ನಂತರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಬೇಕು. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಯಾವುದೇ ಅಡೆತಡೆಗಳು ಎದುರಾಗದಂತೆ ಅಗತ್ಯ ಸಹಕಾರ ನೀಡಬೇಕು ಎಂದು ಮಧು ಬಂಗಾರಪ್ಪ ವೇದಿಕೆಯಲ್ಲಿಯೇ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಿಟ್ಟೂರು-ಗರ್ತಿಕೆರೆಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ವಹಿಸಿದ್ದರು. ಸಾರಗನಜಡ್ಡು ಕಾರ್ತಿಕೇಯ ಮಠದ ಶ್ರೀ ಯೋಗೇಂದ್ರ ಅವಧೂತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿ.ಕೆ. ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ಸೇರಿದಂತೆ ಆರ್ಯ ಈಡಿಗ-ಬಿಲ್ಲವ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾವಿರಾರು ಸಮಾಜ ಬಾಂಧವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









