ಕಲ್ಪ ಮೀಡಿಯಾ ಹೌಸ್ | ತಾಳಗುಪ್ಪ (ಶಿವಮೊಗ್ಗ) |
ತಾಳಗುಪ್ಪ (Talaguppa) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬರನ್ನು 112 ತುರ್ತು ಸೇವೆಯ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
112 ಪೊಲೀಸರು ಕೇವಲ ಅಪರಾಧ ತಡೆಗಟ್ಟುವುದು ಅಥವಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮಾತ್ರ ಸೀಮಿತರಾಗದೆ, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿ ಹಲವು ಸಂದರ್ಭಗಳಲ್ಲಿ ಅಮೂಲ್ಯ ಜೀವಗಳನ್ನು ಉಳಿಸುತ್ತಿದ್ದಾರೆ. ತಾಳಗುಪ್ಪದಲ್ಲಿ ನಡೆದ ಈ ಘಟನೆ ಇದಕ್ಕೆ ಮತ್ತೊಂದು ನಿದರ್ಶನವಾಗಿದೆ.
ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ 112 ಸಿಬ್ಬಂದಿ
ಅಕ್ಟೋಬರ್ 26ರ ಸಂಜೆ 112 ತುರ್ತು ಸೇವೆಯ ಸಿಬ್ಬಂದಿಗೆ ದೂರವಾಣಿ ಕರೆ ಬಂದಿದ್ದು, ಶಿವಮೊಗ್ಗ ಕಡೆಯ ವ್ಯಕ್ತಿಯೊಬ್ಬರು ತಾಳಗುಪ್ಪದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಯಾವುದೇ ಸಮಯ ವ್ಯರ್ಥ ಮಾಡದೆ, ವ್ಯಕ್ತಿಯ ಜೀವವನ್ನು ಉಳಿಸಬೇಕೆಂಬ ಉದ್ದೇಶದಿಂದ ಇಆರ್ವಿ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು.
Talaguppa ರೈಲು ಹಳಿಗಳ ಮೇಲೆ ವ್ಯಕ್ತಿ ಪತ್ತೆ
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಸುರೇಂದ್ರ ಕುಮಾರ್ ಹಾಗೂ ಚಾಲಕರಾದ ಎ.ಎಚ್.ಸಿ. ಶಿವಾನಂದ್ ಅವರು ಸ್ಥಳೀಯ ಗ್ರಾಮಸ್ಥರೊಂದಿಗೆ ತಾಳಗುಪ್ಪ ರೈಲ್ವೆ ನಿಲ್ದಾಣದ ಸಮೀಪಕ್ಕೆ ತೆರಳಿದರು.
ಈ ವೇಳೆ ರೈಲು ಹಳಿಗಳ ಮೇಲೆ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣವೇ ಆತನನ್ನು ತಡೆದು ನಿಲ್ಲಿಸಿ, ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
Also Read>> ಅ.28ಕ್ಕೆ ‘ಅರ್ನಬ್’ ಚಂಡಮಾರುತ ಕರಾವಳಿ ದಾಟುವ ಸಾಧ್ಯತೆ; ಹಲವು ರಾಜ್ಯಗಳಲ್ಲಿ ಅಲರ್ಟ್
ಬುದ್ಧಿವಾದ ಹೇಳಿ ಮನವೊಲಿಕೆ
ಆತ್ಮಹತ್ಯೆಯ ಆಲೋಚನೆಯಿಂದ ಹೊರಬರುವಂತೆ ವ್ಯಕ್ತಿಗೆ 112 ಸಿಬ್ಬಂದಿ ಧೈರ್ಯ ತುಂಬಿ ಬುದ್ಧಿವಾದ ಹೇಳಿದ್ದಾರೆ. ಆತನೊಂದಿಗೆ ಸಮಾಧಾನದಿಂದ ಮಾತನಾಡಿ, ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ಹಾಗೂ ಮಾನವೀಯ ನಡೆ ಫಲವಾಗಿ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಗಿದೆ.
ಈ ಹಿಂದೆಯೂ ವೃದ್ಧನ ರಕ್ಷಣೆ
112 ಸಿಬ್ಬಂದಿ ಈ ರೀತಿಯ ಮಾನವೀಯ ಕಾರ್ಯಾಚರಣೆ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವಮೊಗ್ಗದಿಂದ ಆಗುಂಬೆ ಕಡೆಗೆ ತೆರಳಿದ್ದ ವೃದ್ಧರೊಬ್ಬರನ್ನು 112 ಪೊಲೀಸರು ಪತ್ತೆಹಚ್ಚಿ, ಮನವೊಲಿಸಿ ರಕ್ಷಿಸಿದ್ದರು.
ತುರ್ತು ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಜೀವಗಳನ್ನು ಉಳಿಸುತ್ತಿರುವ 112 ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










