ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕೊಪ್ಪಳ ಬಲ್ಡೋಟ ಕಾರ್ಖಾನೆಯನ್ನು ಸ್ಥಳಾಂತರಿಸಬೇಕು, ಕಾರ್ಖಾನೆಯಿಂದ 22 ಹಳ್ಳಿಗಳಲ್ಲಿ ಉಂಟಾಗುತ್ತಿದೆ ಎನ್ನಲಾದ ಮಾಲಿನ್ಯವನ್ನು ತಡೆಗಟ್ಟಬೇಕು ಹಾಗೂ ಬಸಾಪುರ ಕೆರೆಯನ್ನು ಜನರು ಮತ್ತು ಜಾನುವಾರುಗಳ ನೀರಿನ ಬಳಕೆಗೆ ಮುಕ್ತಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ನಡೆಯುತ್ತಿರುವ ಹೋರಾಟಕ್ಕೆ ಅಕ್ಟೋಬರ್ 31ರಂದು ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಕೊಪ್ಪಳ–ಭಾಗ್ಯನಗರದಲ್ಲಿ (Koppala-Bhagyanagar)24 ಗಂಟೆಗಳ ಬಂದ್ ಆಚರಿಸಲು ನಿರ್ಧರಿಸಲಾಗಿದೆ.
ಬಂದ್ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮುಖಂಡರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಅಕ್ಟೋಬರ್ 31ರಂದು ಬಂದ್ ನಡೆಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಂದ್ ದಿನಾಂಕ ನಿಗದಿ
ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ಅಂದು ಬಂದ್ ಆಚರಿಸುವ ಬದಲು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಜಿಲ್ಲಾಡಳಿತದ ವತಿಯಿಂದ ಹೋರಾಟಗಾರರಿಗೆ ಪ್ರಸ್ತಾಪಿಸಲಾಯಿತು.
ಇದಕ್ಕೆ ಸಮ್ಮತಿಸಿದ ಹೋರಾಟದ ಮುಖಂಡರು, ಅಕ್ಟೋಬರ್ 31ರಂದು 24 ಗಂಟೆಗಳ ಕಾಲ ಕೊಪ್ಪಳ–ಭಾಗ್ಯನಗರ ಬಂದ್ ಆಚರಿಸಿ, ಮರುದಿನ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಒಪ್ಪಿಗೆ ಸೂಚಿಸಿದರು.
Koppala-Bhagyanagar: ‘ಎರಡು ಲಕ್ಷ ಜನರು ಹೋರಾಟಕ್ಕೆ ಬರಬೇಕು’
ಕೊಪ್ಪಳ–ಭಾಗ್ಯನಗರದ ಸುಮಾರು 1.5 ಲಕ್ಷ ಜನರು ಹಾಗೂ ಕಾರ್ಖಾನೆಯ ಮಾಲಿನ್ಯದಿಂದ ಬಾಧಿತರಾಗಿದ್ದಾರೆ ಎನ್ನಲಾದ 22 ಗ್ರಾಮಗಳ ಸುಮಾರು 50 ಸಾವಿರ ಜನರು ಸೇರಿದಂತೆ ಒಟ್ಟು ಎರಡು ಲಕ್ಷ ಜನರ ಆರೋಗ್ಯ ಮತ್ತು ಜೀವ ರಕ್ಷಣೆಯ ದೃಷ್ಟಿಯಿಂದ ಈ ಹೋರಾಟ ಮಹತ್ವದ್ದಾಗಿದೆ ಎಂದು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಬಂದ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಆರೋಗ್ಯ ಹಾಗೂ ಪರಿಸರ ರಕ್ಷಣೆಗಾಗಿ ಒಗ್ಗಟ್ಟಿನಿಂದ ಬೀದಿಗಿಳಿದು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಮಾಲಿನ್ಯ ತಡೆಗೆ ಒಗ್ಗಟ್ಟಿನ ಹೋರಾಟಕ್ಕೆ ಕರೆ
ಕಾರ್ಖಾನೆಯಿಂದ ಉಂಟಾಗುತ್ತಿದೆ ಎನ್ನಲಾದ ಮಾಲಿನ್ಯವು ಜನರ ಆರೋಗ್ಯ, ಪರಿಸರ ಮತ್ತು ಜಲಮೂಲಗಳ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಅಗತ್ಯ ಎಂದು ಜಂಟಿ ಕ್ರಿಯಾ ವೇದಿಕೆ ತಿಳಿಸಿದೆ.
ಕೊಪ್ಪಳ–ಭಾಗ್ಯನಗರದ ನಾಗರಿಕರು, ವ್ಯಾಪಾರಸ್ಥರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಸಾಮಾಜಿಕ ಸಂಘಟನೆಗಳು, ವಿವಿಧ ಸಮಾಜಗಳ ಮುಖಂಡರು, ಧಾರ್ಮಿಕ ಗುರುಗಳು, ಪುರಪ್ರಮುಖರು, ಆಟೋ ಚಾಲಕರು ಹಾಗೂ ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
Also Read>> SIR ಇಲ್ಲದಿದ್ದರೂ ಕಾಂಗ್ರೆಸ್ಗೆ ಸೋಲು ತಪ್ಪಲ್ಲ: ರಾಹುಲ್ ಗಾಂಧಿಗೆ ಚನ್ನಬಸಪ್ಪ ತಿರುಗೇಟು
ಗವಿಮಠದಿಂದ ಬೃಹತ್ ಮೆರವಣಿಗೆ
ಅಕ್ಟೋಬರ್ 31ರಂದು ಶ್ರೀ ಗವಿಮಠದಿಂದ ಸಾರ್ವಜನಿಕ ಮೆರವಣಿಗೆ ಆರಂಭವಾಗಲಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗುವ ಮೆರವಣಿಗೆಯ ಬಳಿಕ ನಗರಸಭೆ ಮುಂಭಾಗದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ.
ಪರಿಸರ ಸಂರಕ್ಷಣೆ, ಜಲಮೂಲಗಳ ರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಡೆಯುತ್ತಿರುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಬೆಂಬಲ ನೀಡಬೇಕು ಎಂದು ಜಂಟಿ ಕ್ರಿಯಾ ವೇದಿಕೆ ಕೋರಿದೆ.
ಹೋರಾಟದ 354ನೇ ದಿನದ ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಂಜುನಾಥ ಜಿ. ಗೊಂಡಬಾಳ, ಮೂಕಪ್ಪ ಮೇಸ್ತ್ರಿ, ರವಿ ಕಾಂತನವರ, ರಾಜಶೇಖರ ಏಳುಭಾವಿ, ಶಂಭುಲಿಂಗಪ್ಪ ಹರಗೇರಿ, ವೈ.ಎಫ್. ಹಳ್ಳಿಕೇರಿ, ಮಹಾಂತೇಶ ಕೊತಬಾಳ, ನಟರಾಜ ಸವಡಿ, ವಿ.ಬಿ. ಕಟ್ಟಿ, ಮಹಾಂತೇಶ ಮಲ್ಲನಗೌಡ್ರ, ಬಸವಪ್ರಭು ಶೆಟ್ಟರ್, ಶಾಂತಯ್ಯ ಅಂಗಡಿ, ಈರಯ್ಯ ಸಾಲಿಮಠ, ವಿಜಯಮಹಾಂತೇಶ ಹಟ್ಟಿ, ಮಲ್ಲಪ್ಪ ಮಾದಿನೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









