ಕಲ್ಪ ಮೀಡಿಯಾ ಹೌಸ್ | ಸಾಗರ (ಶಿವಮೊಗ್ಗ) |
ಸರಳತೆ, ಜನಪರ ಕಾಳಜಿ ಮತ್ತು ಹೋರಾಟದ ಬದುಕಿನ ಪ್ರತೀಕವಾಗಿರುವ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಡಾ. ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (Rajyothsava Award) ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂದು ಸಾಗರದಲ್ಲಿರುವ (Sagara) ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸಚಿವ ಮಧು ಬಂಗಾರಪ್ಪ ಅವರು ವಿಡಿಯೋ ಕರೆ ಮಾಡಿ, ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಾತನಾಡಿಸಿದರು. ಹಿರಿಯ ನಾಯಕನಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಶುಭಾಶಯ ತಿಳಿಸಿ, ರಾಜಕೀಯ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರ ಸೇವೆ ಅನುಕರಣೀಯವಾಗಿದೆ. ಭಗವಂತ ನಿಮಗೆ ಉತ್ತಮ ಆರೋಗ್ಯ ನೀಡಲಿ. ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸಿದರು.
ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಆಗಮಿಸುವುದು ಕಷ್ಟವಾಗಬಹುದೆಂಬ ಹಿನ್ನೆಲೆಯಲ್ಲಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡಬೇಕೇ ಎಂದು ಮುಖ್ಯಮಂತ್ರಿ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ ಅವರು, “ಬೇಡ, ನಾನು ಹೇಗೋ ಬರುವೆ” ಎಂದು ತಮ್ಮ ಸರಳ ಸ್ವಭಾವವನ್ನು ಮತ್ತೊಮ್ಮೆ ಮೆರೆದರು.

ಕಾಗೋಡು ಅವರ ಮನೆಗೆ ತೆರಳಿ ಪ್ರಶಸ್ತಿ ಪ್ರದಾನ: ಮಧು ಬಂಗಾರಪ್ಪ
ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರಿಗೆ ಬಂದು ಪ್ರಶಸ್ತಿ ಸ್ವೀಕರಿಸಲು ಅವರಿಗೆ ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅವರ ಮನೆಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರು ಸಚಿವ ಮಧು ಬಂಗಾರಪ್ಪ ಅವರ ಕೈಗೆ ಮುತ್ತಿಟ್ಟು ಪ್ರೀತಿಯಿಂದ ಮಾತನಾಡಿ, “ಸಣ್ಣ ವಯಸ್ಸಿನಲ್ಲೇ ಸಚಿವರಾಗಿದ್ದೀರಿ. ಒಳ್ಳೆಯ ಕೆಲಸ ಮಾಡಿ, ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ” ಎಂದು ಹಾರೈಸಿದರು. ಹಿರಿಯ ನಾಯಕನ ಈ ಪ್ರೀತಿ ಮತ್ತು ಆಶೀರ್ವಾದದ ಕ್ಷಣ ಎಲ್ಲರ ಗಮನ ಸೆಳೆಯಿತು.
ಕಾಗೋಡು ತಿಮ್ಮಪ್ಪರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಚಿವ ಶ್ರೀ ಮಧು ಬಂಗಾರಪ್ಪ ಅವರು, ʻʻಶರಾವತಿ ಸಂತ್ರಸ್ತರಿಗೆ ಭೂಹಕ್ಕು ನೀಡುವ ಸಂಬಂಧ ಸಮಗ್ರವಾಗಿ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಸದ್ಯವೇ ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದು, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಶೀಘ್ರದಲ್ಲೇ ಅವರಿಗೆಲ್ಲಾ ಹಕ್ಕು ಪತ್ರ ದೊರೆಯುವಂತೆ ಮಾಡಿ, ನಿಮ್ಮ ಬಹುದಿನಗಳ ಕನಸು ಈಡೇರುವಂತೆ ಮಾಡುತ್ತೇವೆʼʼ ಎಂದು ತಿಳಿಸಿದರು.
Also Read>> ಮೈಸೂರು ರೈಲ್ವೆ ವಿಭಾಗದ ಸಂಗೀತ ಸ್ಪರ್ಧೆಗೆ ಮೆರುಗು: 72 ಸ್ಪರ್ಧಿಗಳಿಂದ ಪ್ರತಿಭಾ ಪ್ರದರ್ಶನ
ಹೋರಾಟದ ಬದುಕಿಗೆ ಸಂದ ಗೌರವ
ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ವರ್ಷ ನವೆಂಬರ್ 1ರಂದು ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸಮಾಜಸೇವೆ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ಸಮಾಜವಾದಿ ಚಿಂತಕ, ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ. ಕಾಗೋಡು ತಿಮ್ಮಪ್ಪ ಅವರ ಹೆಸರೂ ಸೇರಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳಿಗಾಗಿ ಹೋರಾಡಿದ ಕಾಗೋಡು ತಿಮ್ಮಪ್ಪ ಅವರು, ಜನಪರ ಚಿಂತನೆ, ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ ಸರಳ ಜೀವನದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ಹೋರಾಟದ ಬದುಕಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










