ಕಲ್ಪ ಮೀಡಿಯಾ ಹೌಸ್ | ಸೊರಬ (ಶಿವಮೊಗ್ಗ) |
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕುರಿ ಶೆಡ್ಗೆ (Shed Fire) ಬೆಂಕಿ ತಗುಲಿ 150 ಕುರಿಗಳು ಹಾಗೂ 100ಕ್ಕೂ ಹೆಚ್ಚು ಕೋಳಿಗಳು ಸಜೀವ ದಹನಗೊಂಡಿರುವ ದುರ್ಘಟನೆ ಸೊರಬ (Soraba) ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಸುಮಾರು 12 ಗಂಟೆಯ ವೇಳೆಗೆ ಗ್ರಾಮದ ರಾಮಣ್ಣ ಎಂಬುವರಿಗೆ ಸೇರಿದ ಕುರಿ ಶೆಡ್ನಲ್ಲಿ ಈ ಅವಘಡ ಸಂಭವಿಸಿದೆ. ಏಕಾಏಕಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಶೆಡ್ಗೆ ವ್ಯಾಪಿಸಿದ್ದು, ಒಳಗಿದ್ದ ಕುರಿ ಮತ್ತು ಕೋಳಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ.
ಕುರಿಗಳ ಕಿರುಚಾಟ ಕೇಳಿ ಸ್ಥಳೀಯರು ಧಾವನೆ
ಶೆಡ್ನಲ್ಲಿದ್ದ ಕುರಿಗಳು ಬೆಂಕಿಯ ತೀವ್ರತೆಗೆ ಕಿರುಚುತ್ತಿದ್ದ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಂಕಿ ಇಡೀ ಶೆಡ್ಗೆ ವ್ಯಾಪಿಸಿತ್ತು. ಪರಿಣಾಮವಾಗಿ ಶೆಡ್ನಲ್ಲಿದ್ದ 150 ಕುರಿಗಳು ಹಾಗೂ 100ಕ್ಕೂ ಹೆಚ್ಚು ಕೋಳಿಗಳನ್ನು ರಕ್ಷಿಸಲು ಸಾಧ್ಯವಾಗದೆ ಸಜೀವ ದಹನಗೊಂಡಿವೆ.
Also Read>> ಮೈಸೂರು ಅರಮನೆ ಬಳಿ ಭೀಕರ ಅಪಘಾತ: 17 ವರ್ಷದ ವಿದ್ಯಾರ್ಥಿನಿ ದುರ್ಮರಣ
Soraba: ಲಕ್ಷಾಂತರ ರೂಪಾಯಿ ನಷ್ಟ
ಘಟನೆಯಿಂದ ಕುರಿ ಸಾಕಾಣಿಕೆಯನ್ನೇ ನಂಬಿಕೊಂಡಿದ್ದ ರಾಮಣ್ಣ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










