ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಶುಕ್ರವಾರ ತಮ್ಮ ಕುಟುಂಬದ ಸದಸ್ಯರೊಂದಿಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಭೇಟಿಯಾದರು. ಈ ಭೇಟಿಯ ವೇಳೆ ನಡೆದ ಪುಟ್ಟ ಬಾಲಕಿಯ ಕನ್ನಡ ಹಾಡಿನ ಗಾಯನ ಪ್ರಧಾನಿ ಮೋದಿ ಅವರ ಗಮನ ಸೆಳೆದಿದ್ದು, ಈ ಸುಂದರ ಕ್ಷಣ ಇದೀಗ ವಿಶೇಷ ಗಮನ ಸೆಳೆದಿದೆ.
ಸೂರ್ಯಕುಮಾರ್ ಯಾದವ್ ಅವರೊಂದಿಗೆ ಪತ್ನಿ ದೇವಿಶಾ, ಪುಟ್ಟ ಮಗಳು, ಅತ್ತಿಗೆ ದೀಕ್ಷಾ, ಭಾವ ಅಜಯ್ ಶೆಟ್ಟಿ ಹಾಗೂ ಅತ್ತಿಗೆಯ ಇಬ್ಬರು ಮಕ್ಕಳು ರಾಮ್ ಮತ್ತು ಸರುಯು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರುಯು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕನ್ನಡ ಹಾಡೊಂದನ್ನು ಹಾಡಿದ್ದಾಳೆ. ಪುಟ್ಟ ಬಾಲಕಿಯ ಗಾಯನವನ್ನು ಪ್ರಧಾನಿ ಮೋದಿ ಅವರು ಆಸಕ್ತಿಯಿಂದ ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆ ನಡೆದ ಈ ಆತ್ಮೀಯ ಭೇಟಿ ಕುಟುಂಬದ ಪಾಲಿಗೆ ಸ್ಮರಣೀಯ ಕ್ಷಣವಾಗಿದೆ.
ದೀಪಾವಳಿ ಸಂಭ್ರಮಕ್ಕೆ ಮಕ್ಕಳ ಆಗಮನದ ಮೆರುಗು
ಈ ಭೇಟಿಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಮ್ ಮತ್ತು ಸರುಯು ಅವರ ಆಗಮನವು ದೀಪಾವಳಿಯ ಸಂಭ್ರಮದ ವಾತಾವರಣದೊಂದಿಗೆ ಹೊಂದಿಕೆಯಾಗಿದ್ದು, ಹಬ್ಬದ ಆಚರಣೆಯನ್ನು ಮತ್ತಷ್ಟು ಪವಿತ್ರ ಹಾಗೂ ದೈವಿಕವಾಗಿಸಿದೆ ಎಂದು ಹಿಂದಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
PM Modi: ಪ್ರಧಾನಿ ಭೇಟಿಯಿಂದ ಧನ್ಯರಾದ ಸೂರ್ಯಕುಮಾರ್
ಇನ್ನು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂತಸವನ್ನು ಸೂರ್ಯಕುಮಾರ್ ಯಾದವ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಅವರೊಂದಿಗಿನ ಈ ಭೇಟಿ ಆಶೀರ್ವಾದಪೂರ್ವಕ ಹಾಗೂ ಹೃದಯಸ್ಪರ್ಶಿ ಕ್ಷಣವಾಗಿತ್ತು. ನಮ್ಮ ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಎಲ್ಲರನ್ನೂ ಒಗ್ಗೂಡಿಸುವ ಮೌಲ್ಯಗಳನ್ನು ನೆನಪಿಸುವ ಸುಂದರ ಅನುಭವ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
Also Read>> ಷೇರುಪೇಟೆಯಲ್ಲಿ ದೀಪಾವಳಿ ಧಮಾಕಾ: 1,718 ಅಂಕ ಏರಿದ ಸೆನ್ಸೆಕ್ಸ್, 25 ಸಾವಿರ ದಾಟಿದ ನಿಫ್ಟಿ!
ವಿಶ್ವಕಪ್ ಗೆಲುವಿನ ಸಾರಥಿಯಾಗಿದ್ದ ಸೂರ್ಯಕುಮಾರ್
ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ ಗೆಲುವಿನಲ್ಲಿ ತಂಡದ ನಾಯಕತ್ವ ವಹಿಸಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಅವರು, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿಯೂ ಮುಂದುವರಿದಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ಈ ಕುಟುಂಬದ ಆತ್ಮೀಯ ಭೇಟಿಯಲ್ಲಿ ಪುಟ್ಟ ಬಾಲಕಿಯ ಕನ್ನಡ ಹಾಡು ವಿಶೇಷ ಆಕರ್ಷಣೆಯಾಗಿದ್ದು, ಕನ್ನಡದ ಕಂಪು ರಾಷ್ಟ್ರ ರಾಜಧಾನಿಯಲ್ಲೂ ಮೊಳಗಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









