ಕಲ್ಪ ಮೀಡಿಯಾ ಹೌಸ್ | ದುಬೈ |
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕೂಡ ಸಾಥ್ ನೀಡಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಅವರು ಯುಎಇ ಸೇರಿದಂತೆ ವಿಶ್ವದಾದ್ಯಂತ ದೀಪಾವಳಿ (Diwali) ಆಚರಿಸುತ್ತಿರುವ ಜನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅರೇಬಿಕ್, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂದೇಶ ಹಂಚಿಕೊಂಡಿರುವ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್, ದೀಪಾವಳಿ ಆಚರಿಸುತ್ತಿರುವ ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ ಎಂದು ಹಾರೈಸಿದ್ದಾರೆ. ಈ ಹಬ್ಬ ಹಾಗೂ ಮುಂಬರುವ ವರ್ಷವು ಜನರ ಬದುಕಿನಲ್ಲಿ ಸಂತೋಷ ಮತ್ತು ಕುಟುಂಬಗಳಲ್ಲಿ ನೆಮ್ಮದಿ ತರಲಿ ಎಂದು ಶುಭಕೋರಿದ್ದಾರೆ.
UAE: ಶಾಂತಿ, ಭರವಸೆ ಮತ್ತು ಸಮೃದ್ಧಿಗೆ ಉಪಾಧ್ಯಕ್ಷರ ಹಾರೈಕೆ
ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಅವರು ಕೂಡ ಶನಿವಾರ ದೀಪಾವಳಿ ಶುಭಾಶಯ ಸಂದೇಶ ಹಂಚಿಕೊಂಡಿದ್ದಾರೆ. ದೀಪಾವಳಿ ಆಚರಿಸುತ್ತಿರುವ ಎಲ್ಲರಿಗೂ ಶಾಂತಿ, ಭರವಸೆ ಮತ್ತು ಒಳಿತನ್ನು ಹಾರೈಸಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಸುರಕ್ಷತೆ, ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಯುಎಇಯಲ್ಲಿರುವ ವಿವಿಧ ಸಮುದಾಯಗಳು ಹಾಗೂ ವಿಶ್ವದಾದ್ಯಂತ ಹಬ್ಬ ಆಚರಿಸುವ ಜನರನ್ನು ಉದ್ದೇಶಿಸಿ ಉಭಯ ನಾಯಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಅಧ್ಯಕ್ಷರು ಮೂರು ಭಾಷೆಗಳಲ್ಲಿ ಸಂದೇಶ ನೀಡಿರುವುದು ಯುಎಇಯ ಬಹುಸಂಸ್ಕೃತಿಯ ಸಮಾಜದ ವೈವಿಧ್ಯತೆಯನ್ನು ಪ್ರತಿಬಿಂಬಿಸಿದೆ.
ದೀಪಾವಳಿ ಸಂದೇಶದಿಂದ ಕಂಗೊಳಿಸಿದ ಬುರ್ಜ್ ಖಲೀಫಾ
ಇನ್ನೊಂದೆಡೆ, ದುಬೈನ ವಿಶ್ವಪ್ರಸಿದ್ಧ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಕೂಡ ದೀಪಾವಳಿ ಹಬ್ಬದ ವಿಶೇಷ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಶನಿವಾರ ರಾತ್ರಿ ಕಟ್ಟಡದ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ದೀಪಾವಳಿ ಶುಭಾಶಯ ಸಂದೇಶವನ್ನು ಪ್ರದರ್ಶಿಸಲಾಯಿತು.
Also Read>> ಕಾಡಿನಿಂದ ನಕ್ಸಲರು ಮಾಯ, ರಾಜಕೀಯ ಪಕ್ಷಗಳಲ್ಲಿ ‘ದಿಮಾಗಿ ನಕ್ಸಲರು’ ಸಕ್ರಿಯ: ಮೋದಿ ಎಚ್ಚರಿಕೆ!
ಬುರ್ಜ್ ಖಲೀಫಾದ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ‘ಹಬ್ಬದ ಸಂಭ್ರಮ ನಿಮ್ಮ ಬದುಕಿನಲ್ಲಿ ಬೆಳಕು, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ – ದೀಪಾವಳಿಯ ಶುಭಾಶಯಗಳು’ ಎಂಬ ಸಂದೇಶ ಕಂಗೊಳಿಸಿದೆ.
ವಿಶ್ವದ ಅತಿ ಎತ್ತರದ ಕಟ್ಟಡಗಳಲ್ಲಿ ಒಂದಾಗಿರುವ ಬುರ್ಜ್ ಖಲೀಫಾ ದೀಪಾವಳಿ ಶುಭಾಶಯದ ಬೆಳಕಿನಲ್ಲಿ ಮಿನುಗಿದ್ದು, ದುಬೈನಲ್ಲಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










