ಕಲ್ಪ ಮೀಡಿಯಾ ಹೌಸ್ | ಜಮ್ಮು ಕಾಶ್ಮೀರ |
ಜಮ್ಮು-ಕಾಶ್ಮೀರದಲ್ಲಿ (Jammu and Kashmir) ಉಗ್ರರ ಅಟ್ಟಹಾಸ (Terrorists Attack) ಮುಂದುವರಿದಿದ್ದು, ಕುಲ್ಗಾಂ (Kulgam) ಜಿಲ್ಲೆಯಲ್ಲಿರುವ ಸಿಆರ್ಪಿಎಫ್ (CRPF) ಚೆಕ್ಪೋಸ್ಟ್ ಮೇಲೆ ಬುಧವಾರ ಮಧ್ಯಾಹ್ನ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ ಓರ್ವ ಅಧಿಕಾರಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ಸುಮಾರು 2.15ರ ವೇಳೆಗೆ ಈ ದಾಳಿ ನಡೆದಿದೆ. ಮೋಟಾರ್ಸೈಕಲ್ನಲ್ಲಿ ಬಂದಿದ್ದ ಉಗ್ರರು ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಓರ್ವ ಅಧಿಕಾರಿಯ ಸ್ಥಿತಿ ಗಂಭೀರ
ಉಗ್ರರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಮೂವರು ಸಿಆರ್ಪಿಎಫ್ ಸಿಬ್ಬಂದಿಯನ್ನು ತಕ್ಷಣವೇ ಸಮೀಪದ ಅನಂತನಾಗ್ (Anantnag) ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳಲ್ಲಿ ಓರ್ವ ಅಧಿಕಾರಿಯ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಬ್ಬ ಸಿಬ್ಬಂದಿಯ ತೋಳಿಗೆ ಗುಂಡು ತಗುಲಿ ಗಾಯವಾಗಿದ್ದರೆ, ಮತ್ತೊಬ್ಬರ ಕಾಲಿಗೆ ಗುಂಡು ತಗುಲಿದೆ. ಇಬ್ಬರಿಗೂ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಿಆರ್ಪಿಎಫ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಕಾಶ್ಮೀರದ ಕುಲ್ಗಾಂನಲ್ಲಿ ಸಿಆರ್ಪಿಎಫ್ ನಾಕಾ (ಚೆಕ್ಪೋಸ್ಟ್) ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ದಾಳಿಕೋರರನ್ನು ಪತ್ತೆಹಚ್ಚಿ ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ” ಎಂದು ತಿಳಿಸಿದೆ.
Terrorists Attack : ಸ್ಥಳದಲ್ಲಿ ಬಿಗಿ ಭದ್ರತೆ, ಶೋಧ ಕಾರ್ಯಾಚರಣೆ
ದಾಳಿ ನಡೆದ ಬೆನ್ನಲ್ಲೇ ಭದ್ರತಾ ಪಡೆಗಳು ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಗೂ ಶಸ್ತ್ರಸಜ್ಜಿತ ವಾಹನಗಳನ್ನು ರವಾನಿಸಿವೆ. ಉಗ್ರರು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಪತ್ತೆಹಚ್ಚಲು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಪ್ರದೇಶದಲ್ಲಿ ಹೆಚ್ಚುವರಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಭದ್ರತಾ ಪಡೆಗಳು ವಾಹನಗಳ ತಪಾಸಣೆ ನಡೆಸುತ್ತಿವೆ. ಸೈರನ್ಗಳನ್ನು ಮೊಳಗಿಸುವ ಮೂಲಕ ಹಾಗೂ ಧ್ವನಿವರ್ಧಕಗಳ ಮೂಲಕ ಸ್ಥಳೀಯ ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ. ಉಗ್ರರು ತಪ್ಪಿಸಿಕೊಳ್ಳದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಕುಲ್ಗಾಂಗೆ ಭೇಟಿ ನೀಡಿದ್ದ ಲೆಫ್ಟಿನೆಂಟ್ ಗವರ್ನರ್
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಅವರು ಬುಧವಾರ ಕುಲ್ಗಾಂ ಜಿಲ್ಲೆಗೆ ಭೇಟಿ ನೀಡಿದ್ದರು. ಇದೇ ದಿನ ಉಗ್ರರ ದಾಳಿ ನಡೆದಿದ್ದರೂ, ಗುಂಡಿನ ದಾಳಿ ನಡೆದ ಸ್ಥಳದ ಸಮೀಪ ಅವರು ಇರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಐದು ತಿಂಗಳಲ್ಲಿ ಮೂರನೇ ಉಗ್ರರ ದಾಳಿ
ಕಳೆದ ಐದು ತಿಂಗಳ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಮೂರನೇ ಉಗ್ರರ ದಾಳಿ ಇದಾಗಿದೆ. ಅಲ್ಲದೆ, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆದ ಎರಡನೇ ದಾಳಿ ಎಂಬುದು ಗಮನಾರ್ಹ.
ಜುಲೈ 22ರಂದು ಅನಂತನಾಗ್ನಲ್ಲಿ ದಾಳಿ: ಜುಲೈ 22ರಂದು ಅನಂತನಾಗ್ ಪಟ್ಟಣದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಶಿಕ್ ಹುಸೇನ್ ಖುರೇಶಿ (Aashiq Hussain Qureshi) ಮೃತಪಟ್ಟಿದ್ದರು. ಅವರು ಬುದ್ಗಾಮ್ ಜಿಲ್ಲೆಯ ಬೀರ್ವಾ ನಿವಾಸಿಯಾಗಿದ್ದು, ಐಆರ್ 3ನೇ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಉಗ್ರರ ದಾಳಿಗೆ ಬಲಿಯಾಗಿದ್ದರು.
ಜುಲೈ 31ರಂದು ಕುಲ್ಗಾಂನಲ್ಲಿ ದಾಳಿ: ಇದಾದ ಒಂಬತ್ತು ದಿನಗಳ ಬಳಿಕ, ಜುಲೈ 31ರಂದು ಕುಲ್ಗಾಂ ಜಿಲ್ಲೆಯ ಕಿಲಂ ಗ್ರಾಮದಲ್ಲಿರುವ ಇಟ್ಟಿಗೆ ಕಾರ್ಖಾನೆಯ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಛತ್ತೀಸ್ಗಢ ಮೂಲದ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದರು.
ಇದೀಗ ಮತ್ತೊಮ್ಮೆ ಕುಲ್ಗಾಂನಲ್ಲೇ ಸಿಆರ್ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿರುವುದು ಭದ್ರತಾ ಪಡೆಗಳಲ್ಲಿ ಆತಂಕ ಮೂಡಿಸಿದೆ. ದಾಳಿಕೋರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








