ಕಲ್ಪ ಮೀಡಿಯಾ ಹೌಸ್ | ಮುಂಬೈ |
ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಆತಂಕ ಮೂಡಿಸುವ ಘಟನೆ (Mumbai) ಮುಂಬೈ ಲೋಕಲ್ ರೈಲಿನಲ್ಲಿ ನಡೆದಿದೆ. ರೈಲಿನಲ್ಲಿ ಸಹಪ್ರಯಾಣಿಕನೊಬ್ಬ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ (Bad Touch) ನೀಡುತ್ತಿದ್ದುದನ್ನು ಪ್ರಶ್ನಿಸಿದ ಯುವತಿಯೊಬ್ಬಳನ್ನು ರೈಲಿನಿಂದ ಕೆಳಕ್ಕೆ ತಳ್ಳಿರುವ ಆರೋಪ ಕೇಳಿಬಂದಿದೆ. ಈ ಭೀಕರ ಘಟನೆಯಲ್ಲಿ ಯುವತಿ ತನ್ನ ಎಡಗೈಯನ್ನು ಕಳೆದುಕೊಂಡಿದ್ದು, ತಲೆಗೆ 16 ಹೊಲಿಗೆ ಹಾಕಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಬೋರಿವಲಿ (Borivali) ನಿಲ್ದಾಣದಿಂದ ವಿರಾರ್ (Virar) ಕಡೆಗೆ ತೆರಳುತ್ತಿದ್ದ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ನೈಗಾಂವ್ (Naigaon) ರೈಲು ನಿಲ್ದಾಣದ ಬಳಿ ಯುವತಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಅನುಚಿತ ಸ್ಪರ್ಶ ಪ್ರಶ್ನಿಸಿದ್ದಕ್ಕೆ ಜಗಳ
ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, ತಾನು ಬೋರಿವಲಿಯಿಂದ ವಿರಾರ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಸಹಪ್ರಯಾಣಿಕನೊಬ್ಬ ಪದೇಪದೆ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ (Inappropriate Touching) ನೀಡುತ್ತಿದ್ದ. ಇದರಿಂದ ಆಕ್ರೋಶಗೊಂಡ ಯುವತಿ ಆತನ ವರ್ತನೆಯನ್ನು ಪ್ರಶ್ನಿಸಿದ್ದಾಳೆ. ಅಲ್ಲದೆ, ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತನ್ನ ಚಪ್ಪಲಿಯನ್ನು ಎಸೆದಿದ್ದಾಳೆ.
ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ರೈಲಿನಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತನ್ನ ಚಪ್ಪಲಿಯಿಂದಲೂ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
Mumbai : ರೈಲಿನಿಂದ ತಳ್ಳಿದ ಆರೋಪಿ: ಚಕ್ರಕ್ಕೆ ಸಿಲುಕಿದ ಕೈ
ರೈಲು ನೈಗಾಂವ್ ನಿಲ್ದಾಣ ತಲುಪಿದ ಬಳಿಕವೂ ಇಬ್ಬರ ನಡುವಿನ ಜಗಳ ಮುಂದುವರಿದಿದೆ. ಈ ವೇಳೆ ಆರೋಪಿ ಯುವತಿಯನ್ನು ರೈಲಿನಿಂದ ಕೆಳಕ್ಕೆ ತಳ್ಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪರಿಣಾಮವಾಗಿ ಯುವತಿ ಎರಡು ರೈಲು ಬೋಗಿಗಳ ನಡುವಿನ ಅಂತರದಲ್ಲಿ ಬಿದ್ದಿದ್ದಾಳೆ.
ಅಲ್ಲಿಂದ ಪ್ಲಾಟ್‌ಫಾರ್ಮ್ ಮೇಲೆ ಏರಲು ಯುವತಿ ಪ್ರಯತ್ನಿಸುತ್ತಿದ್ದಾಗಲೇ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ ಆಕೆಯ ಎಡಗೈ ರೈಲಿನ ಚಕ್ರದ ಅಡಿಯಲ್ಲಿ ಸಿಲುಕಿದೆ. ಭೀಕರ ಅಪಘಾತದಲ್ಲಿ ಮೊಣಕೈ ಸಮೀಪದಿಂದಲೇ ಎಡಗೈ ತುಂಡಾಗಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಲೆಗೆ 16 ಹೊಲಿಗೆಗಳನ್ನು ಹಾಕಲಾಗಿದೆ.
Also Read>> ವಿಮಾನ ಸೇವೆ ಸ್ಥಗಿತ ಆತಂಕದ ನಡುವೆ ಶಿವಮೊಗ್ಗದಿಂದ 13 ನಗರಗಳಿಗೆ ಹೊಸ ಮಾರ್ಗಕ್ಕೆ ಬೇಡಿಕೆ!
ಘಟನೆಯ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ತಕ್ಷಣವೇ ನೆರವಿಗೆ ಧಾವಿಸಿ ಯುವತಿಯನ್ನು ಪ್ಲಾಟ್‌ಫಾರ್ಮ್ ಮೇಲೆ ಕರೆತಂದಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದ್ದಲದ ನಡುವೆ ಪರಾರಿಯಾಗಿದ್ದ ಆರೋಪಿ ಬಂಧನ
ಘಟನೆ ನಡೆದ ಸಂದರ್ಭದಲ್ಲಿ ಉಂಟಾದ ಗೊಂದಲದ ಲಾಭ ಪಡೆದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಪೊಲೀಸರು ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಿದ್ದಾರೆ.
‘ನನ್ನ ಇಡೀ ಜೀವನ ಹಾಳಾಗಿದೆ, ನನಗೆ ನ್ಯಾಯ ಬೇಕು’
ಆಸ್ಪತ್ರೆಯ ಹಾಸಿಗೆಯಿಂದಲೇ ಎನ್‌ಡಿಟಿವಿ (NDTV) ಜೊತೆ ಮಾತನಾಡಿರುವ ಸಂತ್ರಸ್ತ ಯುವತಿ, ಘಟನೆಯ ಭೀಕರತೆಯನ್ನು ವಿವರಿಸಿದ್ದಾಳೆ.
“ನಾನು ಬೋರಿವಲಿಯಿಂದ ನೈಗಾಂವ್‌ಗೆ ಹೋಗಲು ರೈಲು ಹತ್ತಿದ್ದೆ. ನೈಗಾಂವ್ ನಿಲ್ದಾಣ ಸಮೀಪಿಸುತ್ತಿದ್ದಂತೆ ನನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ವ್ಯಕ್ತಿ ಮತ್ತೆ ಕಿರುಕುಳ ನೀಡಲು ಆರಂಭಿಸಿದ. ನಾನು ಆತನನ್ನು ಪ್ರಶ್ನಿಸಿದೆ. ರೈಲಿನಿಂದ ಇಳಿದ ಬಳಿಕವೂ ಆತ ನನ್ನನ್ನು ಬಿಡದೆ ಅನುಚಿತವಾಗಿ ವರ್ತಿಸುತ್ತಿದ್ದ. ‘ನಿನಗೆ ಮನೆಯಲ್ಲಿ ತಾಯಿ ಅಥವಾ ಸಹೋದರಿ ಇಲ್ಲವೇ?’ ಎಂದು ಕೇಳಿದರೂ ಆತ ತನ್ನ ವರ್ತನೆಯನ್ನು ನಿಲ್ಲಿಸಲಿಲ್ಲ” ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ.
“ನಾನು ಆತನಿಗೆ ಬೈದೆ. ಆತ ಕೂಡ ನನಗೆ ಬೈದ. ಆತನನ್ನು ದೂರವಿಡಲು ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದೆ. ಆಗ ಆತ ತನ್ನ ಚಪ್ಪಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿ, ರೈಲಿನಿಂದ ಕೆಳಕ್ಕೆ ತಳ್ಳಿದ. ನನಗೆ ನ್ಯಾಯ ಬೇಕು. ನನ್ನ ಇಡೀ ಜೀವನವೇ ಹಾಳಾಗಿದೆ. ಮನೆಯ ಎಲ್ಲ ಜವಾಬ್ದಾರಿಗಳನ್ನು ನಾನೇ ನಿಭಾಯಿಸುತ್ತಿದ್ದೆ. ಈಗ ಒಂದೇ ಕೈಯಿಂದ ನಾನು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ತಲೆಗೆ 16 ಹೊಲಿಗೆ ಹಾಕಲಾಗಿದೆ. ದಯವಿಟ್ಟು ನಾನು ಚೇತರಿಸಿಕೊಳ್ಳಲು ಪ್ರಾರ್ಥಿಸಿ. ಈ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಕೆ ಮನವಿ ಮಾಡಿದ್ದಾಳೆ.
ಕೊಲೆ ಯತ್ನದ ಸೆಕ್ಷನ್ ಸೇರಿಸಲು ಕುಟುಂಬದ ಒತ್ತಾಯ
ಇನ್ನೊಂದೆಡೆ, ಪ್ರಕರಣದ ಪೊಲೀಸ್ ತನಿಖೆಯ ಬಗ್ಗೆ ಸಂತ್ರಸ್ತೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (ಕೊಲೆ ಯತ್ನ) ಸೇರಿಸದಿರುವುದಕ್ಕೆ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ನಾಯಕರ ನೆರವು ಕೋರಿದ್ದಾರೆ. ಬಳಿಕ ಪಕ್ಷದ ಮುಖಂಡರು ಸರ್ಕಾರಿ ರೈಲ್ವೆ ಪೊಲೀಸ್ (GRP) ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕರನ್ನು ಭೇಟಿಯಾಗಿ ಪ್ರಕರಣದ ಗಂಭೀರತೆಯನ್ನು ವಿವರಿಸಿದ್ದಾರೆ.
ಕುಟುಂಬದ ಮನವಿಗೆ ಸ್ಪಂದಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಸೆಕ್ಷನ್‌ಗಳನ್ನು ಶೀಘ್ರದಲ್ಲೇ ಸೇರ್ಪಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಲೋಕಲ್ ರೈಲುಗಳಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಪ್ರಯಾಣಿಸುತ್ತಾರೆ. ಇಂತಹ ಸಂದರ್ಭದಲ್ಲಿ ಲೈಂಗಿಕ ಕಿರುಕುಳವನ್ನು ಪ್ರಶ್ನಿಸಿದ ಮಹಿಳೆಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯರ ಸುರಕ್ಷತೆ, ರೈಲ್ವೆ ನಿಲ್ದಾಣಗಳಲ್ಲಿನ ಭದ್ರತೆ ಹಾಗೂ ಇಂತಹ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







