ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ (swachh survekshan 2025-26) ಸ್ವಚ್ಛ ನಗರಗಳ ಪಟ್ಟಿಯಲ್ಲಿ ನವಿ ಮುಂಬೈ (Navi Mumbai) ಮೊದಲ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಸತತ ಎಂಟು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಮಧ್ಯಪ್ರದೇಶದ ಇಂದೋರ್ನ (Indore) ದಾಖಲೆ ಅಂತ್ಯಗೊಂಡಿದೆ. ಸ್ವಚ್ಛ ಸರ್ವೇಕ್ಷಣ್ 2025-26ರ ರಾಷ್ಟ್ರೀಯ ಸ್ವಚ್ಛತಾ ಶ್ರೇಯಾಂಕದಲ್ಲಿ ನವಿ ಮುಂಬೈ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಸೂರತ್ (Surat) ಎರಡನೇ ಹಾಗೂ ವಿಜಯವಾಡ ಮೂರನೇ ಸ್ಥಾನ ಪಡೆದಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತ ನಗರಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಬಾರಿಯ ಸಮೀಕ್ಷೆಯಲ್ಲಿ ದೇಶದ 4,700ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳು ಭಾಗವಹಿಸಿದ್ದವು.
ವಿವಿಧ ವಿಭಾಗಗಳಲ್ಲಿ ನಗರಗಳ ಸಾಧನೆ
10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಗ್ರೇಟರ್ ವಿಶಾಖಪಟ್ಟಣಂ ಮೊದಲ ಸ್ಥಾನ ಪಡೆದಿದೆ. 3 ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಉಜ್ಜಯಿನಿ ಅಗ್ರಸ್ಥಾನ ಗಳಿಸಿದೆ.
ಕಳೆದ ಎಂಟು ವರ್ಷಗಳಿಂದ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಂದೋರ್ ಅನ್ನು ಈ ಬಾರಿ ಹೊಸದಾಗಿ ಪರಿಚಯಿಸಲಾದ ‘ಮೆಂಟರ್ ಸಿಟಿ’ ವಿಭಾಗದಲ್ಲಿ ಸೇರಿಸಲಾಗಿದೆ. ಈ ವಿಭಾಗದಲ್ಲಿ ಇಂದೋರ್ ತನ್ನ ಸಹಭಾಗಿ ಪಟ್ಟಣವಾದ ದೇಪಾಲ್ಪುರದೊಂದಿಗೆ ಎರಡನೇ ಸ್ಥಾನ ಪಡೆದಿದೆ.
ಅಹಮದಾಬಾದ್ ತನ್ನ ಸಹಭಾಗಿ ಪಟ್ಟಣ ಸನಂದ್ನೊಂದಿಗೆ ಮೊದಲ ಸ್ಥಾನ ಗಳಿಸಿದರೆ, ತಿರುಪತಿ ತನ್ನ ಸಹಭಾಗಿ ಪಟ್ಟಣ ಕುಪ್ಪಂನೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಯೋಜನೆಗೆ ‘ಸ್ವಚ್ಛ ಶಹರ್ ಜೋಡಿ’ ಎಂದು ಹೆಸರಿಸಲಾಗಿದೆ.
ನದಿ ತೀರ ಹಾಗೂ ಕರಾವಳಿ ನಗರಗಳ ವಿಭಾಗ
ಸ್ವಚ್ಛ ನದಿ ತೀರದ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ರೇವಾ ಮೊದಲ ಸ್ಥಾನ ಪಡೆದಿದೆ. ಛತ್ತೀಸ್ಗಢದ ಬಿಲಾಸ್ಪುರ ಎರಡನೇ ಹಾಗೂ ವಾರಾಣಸಿ ಮೂರನೇ ಸ್ಥಾನದಲ್ಲಿವೆ.
ಸ್ವಚ್ಛ ಕರಾವಳಿ ನಗರಗಳ ವಿಭಾಗದಲ್ಲಿ ಒಡಿಶಾದ ಪುರಿ ಮೊದಲ ಸ್ಥಾನ ಪಡೆದಿದೆ. ಕೇರಳದ ಆಲಪ್ಪುಳ ಎರಡನೇ ಹಾಗೂ ಮಹಾರಾಷ್ಟ್ರದ ರತ್ನಗಿರಿ ಮೂರನೇ ಸ್ಥಾನ ಗಳಿಸಿವೆ.
ಹಿಮಾಲಯ ಪ್ರದೇಶದ ಸ್ವಚ್ಛ ನಗರಗಳ ವಿಭಾಗದಲ್ಲಿ ಉತ್ತರಾಖಂಡದ ರುದ್ರಪುರ ಮೊದಲ ಸ್ಥಾನ ಪಡೆದಿದೆ. ಜಮ್ಮು ಎರಡನೇ ಹಾಗೂ ಶೋಪಿಯಾನ್ ಮೂರನೇ ಸ್ಥಾನದಲ್ಲಿವೆ.
ಸಣ್ಣ ನಗರಗಳಲ್ಲೂ ಸ್ವಚ್ಛತಾ ಸಾಧನೆ
50 ಸಾವಿರದಿಂದ 3 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ದೇವಾಸ್ ಮೊದಲ ಸ್ಥಾನ ಪಡೆದಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಎರಡನೇ ಹಾಗೂ ಮಧ್ಯಪ್ರದೇಶದ ಸಾಗರ್ ಮೂರನೇ ಸ್ಥಾನ ಗಳಿಸಿವೆ.
20 ಸಾವಿರದಿಂದ 50 ಸಾವಿರ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ವೀಟಾ ಮೊದಲ ಸ್ಥಾನ ಪಡೆದಿದೆ. ಒಡಿಶಾದ ಆಸ್ಕಾ ಎರಡನೇ ಹಾಗೂ ಗೋವಾದ ಪಣಜಿ ಮೂರನೇ ಸ್ಥಾನ ಪಡೆದಿವೆ.
Swachh Survekshan : ಸ್ವಚ್ಛತಾ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ
ಈ ಬಾರಿಯ ಸ್ವಚ್ಛ ಸರ್ವೇಕ್ಷಣ್ನ ಘೋಷವಾಕ್ಯ ‘ಸ್ವಚ್ಛತಾ ಕಿ ನಯಿ ಪೆಹಲ್ – ಬಢಾಯೇಂ ಹಾಥ್, ಕರೇಂ ಸಫಾಯಿ ಸಾಥ್’ (ಸ್ವಚ್ಛತೆಯ ಹೊಸ ಪ್ರಯತ್ನ – ಕೈಜೋಡಿಸೋಣ, ಒಟ್ಟಾಗಿ ಸ್ವಚ್ಛತೆ ಕಾಪಾಡೋಣ) ಎಂಬುದಾಗಿದೆ.
ದೇಶಾದ್ಯಂತ 3,000ಕ್ಕೂ ಹೆಚ್ಚು ತರಬೇತಿ ಪಡೆದ ಮೌಲ್ಯಮಾಪಕರು ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ಜಿಪಿಎಸ್ ಆಧಾರಿತ ನೈಜ ಸಮಯದ ಮೇಲ್ವಿಚಾರಣೆಯನ್ನೂ ಬಳಸಲಾಗಿದೆ. ದಾಖಲೆಗಳ ಸಲ್ಲಿಕೆಯಿಂದ ಪರಿಶೀಲನೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಮಾರ್ಗದರ್ಶಕ ನಗರಗಳ ಸಹಕಾರ ಪಡೆದ ನಗರಗಳಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟದಲ್ಲೂ ಗಣನೀಯ ಸುಧಾರಣೆ ಕಂಡುಬಂದಿದೆ.
- ಕಣ್ಣಿಗೆ ಕಾಣುವ ಸ್ವಚ್ಛತೆ: ಶೇ.48ರಿಂದ ಶೇ.70ಕ್ಕೆ ಏರಿಕೆ.
- ಮನೆಮನೆಗೆ ತ್ಯಾಜ್ಯ ಸಂಗ್ರಹ: ಶೇ.52ರಿಂದ ಶೇ.74ಕ್ಕೆ ಏರಿಕೆ.
- ತ್ಯಾಜ್ಯದ ಮೂಲದಲ್ಲೇ ವಿಂಗಡಣೆ: ಶೇ.16ರಿಂದ ಶೇ.30ಕ್ಕೆ ಏರಿಕೆ.
- ನೈರ್ಮಲ್ಯ ಸೌಲಭ್ಯಗಳ ಲಭ್ಯತೆ: ಶೇ.11ರಿಂದ ಶೇ.38ಕ್ಕೆ ಏರಿಕೆ.
- ಬಳಸಿದ ನೀರಿನ ನಿರ್ವಹಣೆ: ಶೇ.32ರಿಂದ ಶೇ.53ಕ್ಕೆ ಏರಿಕೆ.
- ಸ್ವಚ್ಛತಾ ಜಾಗೃತಿ: ಶೇ.48ರಿಂದ ಶೇ.66ಕ್ಕೆ ಏರಿಕೆ.
ಉತ್ತಮ ಸಾಧನೆ ಮಾಡಿರುವ ನಗರಗಳ ಮಾರ್ಗದರ್ಶನದಿಂದ ಇತರ ನಗರಗಳಲ್ಲಿಯೂ ಸ್ವಚ್ಛತಾ ವ್ಯವಸ್ಥೆ ಬಲಗೊಳ್ಳುತ್ತಿದೆ. ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ ಸೌಲಭ್ಯ ಹಾಗೂ ಸಾರ್ವಜನಿಕ ಸ್ವಚ್ಛತೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಸಚಿವಾಲಯ ಪ್ರಕಟಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








