ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನದಿಂದ ಬದುಕು ಸಾರ್ಥಕಗೊಳ್ಳುತ್ತದೆ. ಕನ್ನಡ (Kannada) ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ ಮತ್ತು ಅಸ್ತಿತ್ವದ ಪ್ರತೀಕವಾಗಿದೆ ಎಂದು ಖ್ಯಾತ ಚಲನಚಿತ್ರ ನಟ ಡಾ. ಶ್ರೀಧರ್ (Actor Dr Shridhar) ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವತಿಯಿಂದ ಜ್ಞಾನ ಸಹ್ಯಾದ್ರಿಯ ಶಂಕರಘಟ್ಟದಲ್ಲಿರುವ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿಗೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಕನ್ನಡ ಸಾಹಿತ್ಯ ಅತ್ಯಂತ ಸಮೃದ್ಧವಾಗಿದ್ದು, ಇಂತಹ ಸಾಹಿತ್ಯವನ್ನು ಅಧ್ಯಯನ ಮಾಡುವುದೂ ಕನ್ನಡದ ಸೇವೆಯೇ ಆಗಿದೆ. ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ನಿರಂತರ ಪ್ರಯತ್ನ ಮಾಡಬೇಕು. ಕನ್ನಡವನ್ನು ಕೇವಲ ಮಾತನಾಡುವುದಕ್ಕೆ ಸೀಮಿತಗೊಳಿಸದೆ, ದೈನಂದಿನ ಬದುಕಿನಲ್ಲಿ ಹೆಚ್ಚು ಹೆಚ್ಚು ಬಳಸಬೇಕು. ಕನ್ನಡ ಉಳಿದರೆ ಮಾತ್ರ ನಮ್ಮ ಅಸ್ತಿತ್ವವೂ ಉಳಿಯುತ್ತದೆ ಎಂದು ಹೇಳಿದರು.
Kannada: ಕನ್ನಡ ನಮ್ಮ ಸಂಸ್ಕೃತಿಯೂ ಆಗಬೇಕು
ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ಭಾಗವಾಗಬೇಕು. ಭಾಷೆಯ ಮೇಲಿನ ಅಭಿಮಾನ ಕೇವಲ ಆಚರಣೆಗಳಿಗೆ ಸೀಮಿತವಾಗಬಾರದು. ಕನ್ನಡದ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.
ಯುವಜನತೆ ರಾಷ್ಟ್ರಕವಿ ಕುವೆಂಪು ಸೇರಿದಂತೆ ಪ್ರಮುಖ ಕನ್ನಡ ಸಾಹಿತಿಗಳ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತಿಗಳ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ನಾಡು, ನೆಲ, ಜಲ ಹಾಗೂ ಭಾಷೆಯ ಬಗ್ಗೆ ಆಸಕ್ತಿ ಮತ್ತು ಕಾಳಜಿ ಹೊಂದಬೇಕು. ಕನ್ನಡದ ಉಳಿವು ಮತ್ತು ಬೆಳವಣಿಗೆಯ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಕನ್ನಡ ಉಳಿಸುವ ಹೊಣೆಗಾರಿಕೆ: ಸವಿತಾ ಭೂಷಣ್
ಸಾಹಿತಿ ಸವಿತಾ ಭೂಷಣ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಎಲ್ಲರೂ ಕನ್ನಡದ ಬಳಕೆಗೆ ಆದ್ಯತೆ ನೀಡಿದಾಗ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ. ಕನ್ನಡದ ಬಗ್ಗೆ ಅಭಿಮಾನ ಹೊಂದುವುದರ ಜೊತೆಗೆ ಅದರ ಬಳಕೆಯನ್ನೂ ಹೆಚ್ಚಿಸಬೇಕು ಎಂದು ಹೇಳಿದರು.
ಕನ್ನಡ ಮಾತನಾಡುವುದು ಕೀಳರಿಮೆಯಲ್ಲ: ಕುಲಪತಿ
ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಕನ್ನಡ ಮಾತನಾಡುವುದು ಯಾವುದೇ ಕಾರಣಕ್ಕೂ ಕೀಳರಿಮೆಯ ವಿಷಯವಲ್ಲ. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹೊಂದಿರುವ ಭ್ರಮೆಯಿಂದ ನಾವು ಹೊರಬರಬೇಕು. ಕನ್ನಡ ಭಾಷೆಗೆ ತನ್ನದೇ ಆದ ಶಕ್ತಿ ಮತ್ತು ಸಾಮರ್ಥ್ಯವಿದೆ. ಭಾಷೆಯ ಬೆಳವಣಿಗೆಗೆ ಆರ್ಥಿಕ ಹಾಗೂ ಸಾಮಾಜಿಕ ಸಹೃದಯತೆಯ ವಾತಾವರಣ ನಿರ್ಮಾಣವಾದಾಗ ಅದು ಮತ್ತಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದರು.
Also Read>> ಶೌಚಾಲಯವೂ ಇಲ್ಲ, ಕುಡಿಯುವ ನೀರೂ ಇಲ್ಲ; ಐತಿಹಾಸಿಕ ಕೂಡ್ಲಿ ದೇಗುಲ ಬಳಿಯ ಅವ್ಯವಸ್ಥೆಗೆ ಆಕ್ರೋಶ
ಕನ್ನಡ ಭಾರತಿ ಕಾರ್ಯ ಶ್ಲಾಘನೀಯ
ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಸಿದ್ಧೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾರತಿ ಕನ್ನಡ ಭಾಷೆಯ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಾ ಬಂದಿದೆ. ಕನ್ನಡ ಭಾಷೆಗೆ ಸಂಬಂಧಿಸಿದ ವಿವಿಧ ಹೋರಾಟಗಳು ಹಾಗೂ ಚಟುವಟಿಕೆಗಳಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಭರತನಾಟ್ಯದಲ್ಲಿಯೂ ಪ್ರಾವೀಣ್ಯತೆ ಪಡೆದಿರುವ ನಟ ಡಾ. ಶ್ರೀಧರ್ ಅವರು ಕಾರ್ಯಕ್ರಮ ಉದ್ಘಾಟಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ತಿಮ್ಮರಾಯಪ್ಪ, ಡೀನ್ಗಳಾದ ಪ್ರೊ. ಚಂದ್ರಶೇಖರ್, ರಮೇಶ್, ನರಸಿಂಹಮೂರ್ತಿ, ಗಜಾನನ ಪ್ರಭು, ಸಾಹಿತಿ ಯುಗಧರ್ಮ ರಾಮಣ್ಣ, ಪ್ರೊ. ಎಸ್.ಎಂ. ಮುತ್ತಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕುವೆಂಪು ಪ್ರತಿಮೆಯಿಂದ ಬಸವ ಸಭಾ ಭವನದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಪುರುಷೋತ್ತಮ್, ಓಬಳೇಶ್ ಟಿ., ಮಂಜುನಾಥ್ ಟಿ. ಹಾಗೂ ರವಿಕುಮಾರ್ ಡಿ. ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









