ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ (ಶಿವಮೊಗ್ಗ) |
ಮಕ್ಕಳು ದೇವರ ಪ್ರತಿರೂಪ. ಅವರ ಮುಗ್ಧ ಮನಸ್ಸು, ನಗು ಹಾಗೂ ನಲಿವು ಮನೆಯ ವಾತಾವರಣವನ್ನೇ ಸಂತೋಷದ ಹೂಬನವಾಗಿಸುತ್ತದೆ. ಮಕ್ಕಳಿದ್ದರೆ ಮನೆ ತುಂಬಾ ಸಂಭ್ರಮ ಮತ್ತು ಸಂತಸ ನೆಲೆಸಿರುತ್ತದೆ ಎಂದು ಶಿಕಾರಿಪುರದ (Shikaripura) ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ (Kumadvathi School) ಕೋ-ಆರ್ಡಿನೇಟರ್ ಪ್ರಭು ಆರ್. ಹೇಳಿದರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ದೇಶದ ಭವಿಷ್ಯದ ನಾಯಕರು ಮತ್ತು ಆಧಾರಸ್ತಂಭಗಳಾಗಿದ್ದಾರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶದ ಉತ್ತಮ ನಾಯಕರಾಗಿ, ಪೋಷಕರ ಹೆಮ್ಮೆಯ ಮಕ್ಕಳಾಗಿ ಹಾಗೂ ಸಮಾಜದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಹಾರೈಸಿದರು.
ನೆಹರು ಆದರ್ಶಗಳು ಮಕ್ಕಳಿಗೆ ಪ್ರೇರಣೆಯಾಗಲಿ
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾರ್ಥಿ ಸಂಘದ ನಾಯಕಿ ಸಮುಚಿತ ಮಾತನಾಡಿ, ಮಕ್ಕಳ ದಿನಾಚರಣೆಯನ್ನು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ. ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ನೆಹರು ಅವರ ಆದರ್ಶ ಬದುಕು ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯಾಗಬೇಕು ಎಂದರು.
ವಿದ್ಯಾರ್ಥಿಗಳು ನೆಹರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಪೋಷಕರ ಪ್ರೀತಿಗೆ ಪಾತ್ರರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕರಿಂದ ನೃತ್ಯ, ಗಾಯನದ ಮೂಲಕ ಮನರಂಜನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಚಾರ್ಯ ಪ್ರಶಾಂತ್ ಎಚ್.ಡಿ. ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕ ಪ್ರತೀಕ್ ಪಾಟೀಲ್ ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಶಿಕ್ಷಕ-ಶಿಕ್ಷಕಿಯರು ನೃತ್ಯ ಹಾಗೂ ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Also Read>> ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸಬೇಕಾ? ಹಾಗಾದರೆ ಈ 4 ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿ!
Shikaripura: ಶಿಕ್ಷಕರು, ವಿದ್ಯಾರ್ಥಿಗಳ ಸಂಭ್ರಮದ ಭಾಗವಹಿಸುವಿಕೆ
ಕಾರ್ಯಕ್ರಮವನ್ನು ಸಂಗೀತ ಶಿಕ್ಷಕಿ ಸವಿತಾ ಹಾಗೂ ಶಿಕ್ಷಕಿಯರು ಹಾಡುವ ಮೂಲಕ ಆರಂಭಿಸಿದರು. ಸಹಶಿಕ್ಷಕಿ ಸುಷ್ಮಾ ಸ್ವಾಗತಿಸಿದರು. ಸಹಶಿಕ್ಷಕ ಗುರುರಾಜ್ ವಂದಿಸಿದರು. ಜಿಯಾಹುಲ್ಲಾ ಮತ್ತು ಐಶ್ವರ್ಯ ನಿರೂಪಿಸಿದರು.
ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಸಹಶಿಕ್ಷಕಿ ಸವಿತಾ ನಡೆಸಿಕೊಟ್ಟರು. ಶಾಲೆಯ ಎಲ್ಲ ವಿಭಾಗಗಳ ಕೋ-ಆರ್ಡಿನೇಟರ್ಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










