ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಂಡೋ-ಪೆಸಿಫಿಕ್ (Indo-Pacific) ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿದ್ದಾರೆ.
ಫಿಲಿಪ್ಪೀನ್ಸ್ನ ಮನಿಲಾದಲ್ಲಿ ನಡೆದ 23ನೇ ಭಾರತ-ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಆಸಿಯಾನ್ ನಡುವಿನ ಬೆಳೆಯುತ್ತಿರುವ ಪಾಲುದಾರಿಕೆಯನ್ನು ಉಲ್ಲೇಖಿಸಿದರು. ಆಸಿಯಾನ್ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಆಸಿಯಾನ್ ನಾಯಕರೊಂದಿಗೆ ಈ ಸ್ವರೂಪದಲ್ಲಿ ತಾವು 13ನೇ ಬಾರಿ ಸಂವಾದ ನಡೆಸುತ್ತಿರುವುದಾಗಿ ತಿಳಿಸಿದ ಮೋದಿ, 2014ರಿಂದ ಭಾರತದ ‘ಆಕ್ಟ್ ಈಸ್ಟ್’ ನೀತಿಯು ಭಾರತ-ಆಸಿಯಾನ್ ಸಂಬಂಧಗಳಿಗೆ ಹೊಸ ವೇಗ ಮತ್ತು ಆಳವನ್ನು ನೀಡಿದೆ ಎಂದರು.
ಹಂಚಿಕೊಂಡ ಸಂಸ್ಕೃತಿ ಮತ್ತು ಪರಂಪರೆಯ ಆಧಾರದ ಮೇಲೆ ಬೆಳೆದಿರುವ ಈ ಪಾಲುದಾರಿಕೆ ಇದೀಗ ಡಿಜಿಟಲ್ ತಂತ್ರಜ್ಞಾನ, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೂ ವಿಸ್ತರಿಸಿದೆ. 2014ರಿಂದ ಉಭಯ ರಾಷ್ಟ್ರಗಳ ನಡುವಿನ ಜನರ ಸಂಪರ್ಕವನ್ನು ಬಲಪಡಿಸಲು 100ಕ್ಕೂ ಹೆಚ್ಚು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. 250ಕ್ಕೂ ಹೆಚ್ಚು ತ್ವರಿತ ಪರಿಣಾಮದ ಯೋಜನೆಗಳನ್ನು ಆರಂಭಿಸಲಾಗಿದ್ದು, ಕೌಶಲ್ಯಾಭಿವೃದ್ಧಿಗಾಗಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಭಾರತ ಮತ್ತು ಆಸಿಯಾನ್ನ ಒಂಬತ್ತು ರಾಷ್ಟ್ರಗಳ ನಡುವೆ ನೇರ ವಿಮಾನಯಾನ ಸೌಲಭ್ಯ ಹಾಗೂ ಪ್ರವಾಸೋದ್ಯಮದ ಬೆಳವಣಿಗೆ ಉಭಯ ದೇಶಗಳ ನಿಕಟ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದರು.
PM Modi: ಸಹಕಾರದಿಂದ ಭವಿಷ್ಯ ರೂಪಿಸೋಣ
‘ನಮ್ಮ ಭವಿಷ್ಯವನ್ನು ಒಟ್ಟಾಗಿ ಮುನ್ನಡೆಸೋಣ’ ಎಂಬ ಶೃಂಗಸಭೆಯ ಧ್ಯೇಯವಾಕ್ಯ ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ವಿಶೇಷ ಮಹತ್ವ ಹೊಂದಿದೆ. ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಒಟ್ಟಾಗಿ ವಿಶ್ವದ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದು ಭಾಗವನ್ನು ಪ್ರತಿನಿಧಿಸುತ್ತವೆ. ಸ್ಪರ್ಧೆಗಿಂತ ಸಹಕಾರದ ಮೂಲಕ ಭವಿಷ್ಯವನ್ನು ರೂಪಿಸಬೇಕಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಭಾರತದ ಅಭಿವೃದ್ಧಿ ಮತ್ತು ಆಸಿಯಾನ್ನ ಸಮೃದ್ಧಿ ಪರಸ್ಪರ ನಿಕಟವಾಗಿ ಬೆಸೆದುಕೊಂಡಿವೆ. ಆಸಿಯಾನ್ ಸಮುದಾಯದ 2045ರ ದೃಷ್ಟಿಕೋನ ಹಾಗೂ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಭಾರತದ ಗುರಿ ಪರಸ್ಪರ ಹಂಚಿಕೊಂಡ ಆಶಯಗಳನ್ನು ಈಡೇರಿಸಲು ನೆರವಾಗಲಿವೆ ಎಂದರು.
Also Read>> ರಾಜ್ಯದಲ್ಲಿ ‘ಮಿಷನ್-60+’ ಅಭಿಯಾನಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ
ಆಸಿಯಾನ್ನ ಏಕತೆ ಮತ್ತು ಕೇಂದ್ರಸ್ಥಾನಕ್ಕೆ ಭಾರತದ ಬೆಂಬಲ ಎಂದಿಗೂ ಅಚಲವಾಗಿರಲಿದೆ ಎಂದು ಪುನರುಚ್ಚರಿಸಿದ ಅವರು, ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು. ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶ ನಿರ್ಮಾಣಕ್ಕೆ ಶೃಂಗಸಭೆ ಕೊಡುಗೆ ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲೂ ಭಾಗವಹಿಸಿದರು. ಆಸಿಯಾನ್ ಸದಸ್ಯ ರಾಷ್ಟ್ರಗಳ ನಾಯಕರು ಹಾಗೂ ಎಂಟು ಸಂವಾದ ಪಾಲುದಾರ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಚರ್ಚಿಸಿದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಮನಿಲಾದ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಭೇಟಿ ನೀಡಿ, ಪಂಚ ಪ್ಯಾರೆಗಳ ಸಮ್ಮುಖದಲ್ಲಿ ಗುರುದ್ವಾರದ ಪುನರಾಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










