ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೌರವ ಮತ್ತು ಘನತೆ ಇದ್ದರೆ ನಿಮ್ಮ ತಂದೆ ಯಾಕೆ ಜೈಲಿಗೆ ಹೋಗಿದ್ದರು ಎಂಬುದನ್ನು ಜನರಿಗೆ ತಿಳಿಸಿ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಶಾಸಕ ಬಿ.ವೈ.ವಿಜಯೇಂದ್ರ (B Y Vijayendra) ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿ.ವೈ.ವಿಜಯೇಂದ್ರ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಕಾಂಗ್ರೆಸ್ ನಾಯಕರ ವಿರುದ್ಧ ‘ಕಳ್ಳ ನನ್ನ ಮಕ್ಕಳು’ ಎಂಬ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಇದೇ ಬಿಜೆಪಿಯ ಸಂಸ್ಕೃತಿ. ಚುನಾವಣೆಯವರೆಗೂ ಇಂತಹ ಹೇಳಿಕೆಗಳು ಮುಂದುವರಿಯಲಿವೆ ಎಂದು ಟೀಕಿಸಿದರು.
ಸೊರಬದ ದೇವರಾಜ್ ಎಂಬ ರೈತರ ಅಡಿಕೆ ತೋಟ ನಾಶವಾಗಿರುವ ವಿಚಾರ ಪ್ರಸ್ತಾಪಿಸಿದ ಸಚಿವರು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ರದ್ದುಪಡಿಸಿತ್ತು. ಇದೀಗ ಮಾಜಿ ಶಾಸಕ ಹಾಲಪ್ಪ ಅವರ ಮಾತು ನಂಬಿ ಸಂಸದ ರಾಘವೇಂದ್ರ ಅವರು ರಾಜಕೀಯ ಮಾಡಲು ಅಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ, ರೈತರ ತೋಟ ನಾಶವಾದಾಗ ಸಂಸದರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ತೋಟದಲ್ಲಿ ಫಸಲು ಬಂದಿಲ್ಲ ಎಂಬುದನ್ನು ಸಾಬೀತುಪಡಿಸಲು ನ್ಯಾಯಾಲಯಕ್ಕೆ ಫೋಟೋ ಕಳುಹಿಸುವ ಉದ್ದೇಶದಿಂದ ಸಂಸದರ ಬೆಂಬಲಿಗರೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ರಾಜಕೀಯ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಿ.ವೈ.ರಾಘವೇಂದ್ರ ಅವರು ನಾಲ್ಕು ಬಾರಿ ಸಂಸದರಾಗಿದ್ದಾರೆ. ಮಾತನಾಡುವಾಗ ಪ್ರಾಮಾಣಿಕತೆ ಇರಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ದಡ್ಡತನದಿಂದ ಮಾತನಾಡಬಾರದು. ಹಾಲಪ್ಪ ಅವರಂತಹವರ ಮಾತುಗಳನ್ನು ನಂಬಿಕೊಂಡು ಸಂಸದರು ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಾವೇರಿಯಲ್ಲಿ ರೈತರು ಗೊಬ್ಬರ ಕೇಳಿದಾಗ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಗುಂಡಿನ ದಾಳಿ ನಡೆದಿದ್ದನ್ನು ಬಿಜೆಪಿ ನಾಯಕರು ಮರೆತಿದ್ದಾರೆ. ರೈತರ ಶಾಲು ಹಾಕಿಕೊಳ್ಳುವ ನೈತಿಕ ಅರ್ಹತೆ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
Madhu Bangarappa: ಶಿಕಾರಿಪುರದಲ್ಲಿ ರಾಜಕೀಯ ಮಾಡುವ ಭಯವಿದೆ
ಬಿ.ವೈ.ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಅವರಿಗೆ ಶಿಕಾರಿಪುರದಲ್ಲಿ ನಾವು ರಾಜಕೀಯವಾಗಿ ಶಿಕಾರಿ ಮಾಡುತ್ತೇವೆ ಎಂಬ ಭಯ ಕಾಡುತ್ತಿದೆ. ವಿಜಯೇಂದ್ರ ಅವರು ಶಿಕಾರಿಪುರಕ್ಕೆ ಬಂದು ರಾಜಕೀಯ ಮಾಡುತ್ತಾರೆ ಎಂದು ವಿಧಾನಸಭೆಯಲ್ಲಿಯೇ ಆತಂಕ ವ್ಯಕ್ತಪಡಿಸುತ್ತಾರೆ. ಹಾಲಪ್ಪ ಅವರೇ ಯಡಿಯೂರಪ್ಪ ಮತ್ತು ತಾವು ಯಾಕೆ ಜೈಲಿಗೆ ಹೋಗಿದ್ದೆವು ಎಂಬುದನ್ನು ಹೇಳಲಿ. ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಅವರ ಇಬ್ಬರು ಮಕ್ಕಳೇ ಕಾರಣ ಎಂದು ಮಧು ಬಂಗಾರಪ್ಪ ಆರೋಪಿಸಿದರು.
Also Read>> ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಗೊಂಡ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಬಿಗ್ ಸ್ಟೇಟ್ಮೆಂಟ್!
ಹಾಲಪ್ಪ ವಿರುದ್ಧವೂ ವಾಗ್ದಾಳಿ
ಮಾಜಿ ಶಾಸಕ ಹರತಾಳು ಹಾಲಪ್ಪ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ಹಾಲಪ್ಪ ಅವರು ಒಂದು ರೀತಿಯಲ್ಲಿ ಟೂರಿಂಗ್ ಟೆಂಟ್ ಇದ್ದಂತೆ. ಎಲ್ಲಿ ಬೇಕಾದರೂ ಹಾಕಿಕೊಳ್ಳಬಹುದು. ಇದೀಗ ಅದರೊಳಗೆ ಸಂಸದ ರಾಘವೇಂದ್ರ ಅವರೂ ಸೇರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಇಷ್ಟು ವರ್ಷ ಜನರಿಗೆ ಸುಳ್ಳು ಹೇಳಿಕೊಂಡು ಬಂದಿರುವ ಹಾಲಪ್ಪನವರ ಮಾತುಗಳನ್ನು ನಂಬಿ ಸಂಸದ ರಾಘವೇಂದ್ರ ಅವರು ಹತಾಶರಾಗಿದ್ದಾರೆ. ನಮ್ಮ ಮನೆಯಲ್ಲಿ ನೆಲ ಒರೆಸುತ್ತಿದ್ದ ಹಾಲಪ್ಪ ಅವರನ್ನು ಶಾಸಕನನ್ನಾಗಿ ಮಾಡಿದವರು ನಾವು. ಆದರೆ, ಈಗ ಅವರು ತಮ್ಮ ಮನೆಯಿಂದ ಬಂಗಾರಪ್ಪನವರ ಫೋಟೋವನ್ನೇ ತೆಗೆದುಹಾಕಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್, ಮಾಜಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ವಿವಿಧ ಮಂಡಳಿ, ನಿಗಮ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಾದ ಚೇನತ್ಗೌಡ ಕೆ., ಮಧುಸೂಧನ್, ಎಸ್.ಟಿ.ಹಾಲಪ್ಪ, ಹೆಚ್.ಪಿ.ಗಿರೀಶ್, ಗೀತೇಂದ್ರಗೌಡ, ಹಾಪ್ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ (ದನಿ), ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಹಿಂದುಳಿದ ವರ್ಗಗಳ ರಾಜ್ಯ ಸಂಚಾಲಕ ಜಿ.ಡಿ.ಮಂಜುನಾಥ್ ಸೇರಿದಂತೆ ಕಲಗೋಡು ರತ್ನಾಕರ್, ಶಿವಣ್ಣ, ದೇವಿಕುಮಾರ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









