ಕಲ್ಪ ಮೀಡಿಯಾ ಹೌಸ್ | ಮುಂಬೈ |
ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುಂಬೈ (Mumbai) ನಗರದಲ್ಲಿ ಪಟಾಕಿ ಸಿಡಿಸುವುದಕ್ಕೆ (Firecracker) ಸಂಪೂರ್ಣ ನಿಷೇಧ ಹೇರುವ ಕುರಿತಾಗಿ ಅಲ್ಲಿನ ಹೈಕೋರ್ಟ್ (Bombay High Court) ಗಂಭೀರ ಚಿಂತನೆ ನಡೆಸಿದೆ.
ಈ ಕುರಿತಂತೆ ನ್ಯಾಯಮೂರ್ತಿಗಳಾದ ಗಿರೀಶ್ ಎಸ್. ಕುಲಕರ್ಣಿ ಮತ್ತು ನೀಲಾ ಕೆ. ಗೋಖಲೆ ಅವರ ಪೀಠವು ಶಬ್ದಮಾಲಿನ್ಯ ಹಾಗೂ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಗಳ ಮೇಲೆ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಇತರ ಅರ್ಜಿಗಳ ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಿದೆ.
ಮುಂಬೈ ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಶಬ್ದಮಾಲಿನ್ಯ, ಪಟಾಕಿಗಳಿಂದ ಸಂಭವಿಸುತ್ತಿರುವ ಅಗ್ನಿ ಅವಘಡಗಳು ಹಾಗೂ ಹಬ್ಬದ ಸಂದರ್ಭಗಳಲ್ಲಿ ಜಾರಿಯಲ್ಲಿರುವ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ ಹೇರುವ ಕುರಿತು ಬಾಂಬೆ ಹೈಕೋರ್ಟ್ ಗಂಭೀರ ಚಿಂತನೆ ನಡೆಸಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿಗೆ ನಿಷೇಧ?
ಮುಂಬೈ ನಗರ ವ್ಯಾಪ್ತಿಯಲ್ಲಿ ಆಚರಿಸಲಾಗುವ ಯಾವುದೇ ಹಬ್ಬಗಳ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಗಳು, ಬೀದಿಗಳಲ್ಲಿ ಪಟಾಕಿ ಸಿಡಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ನಿಗದಿತ ಸಮಯದ ಬಳಿಕವೂ ಪಟಾಕಿ ಸಿಡಿಸಲಾಗುತ್ತಿದ್ದು, ಕೆಲವೆಡೆ ರಾತ್ರಿ 3 ಗಂಟೆಯವರೆಗೂ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ನಿಯಮಗಳನ್ನು ಜಾರಿಗೊಳಿಸಲು ಪೊಲೀಸ್ ಇಲಾಖೆ ಹಾಗೂ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರೂ, ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಇಂತಹ ಸಮಸ್ಯೆಯ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ ಹೇರುವಂತಹ ಕಠಿಣ ಆದೇಶಗಳನ್ನು ನೀಡಬೇಕಾಗಬಹುದು ಎಂದು ನ್ಯಾಯಪೀಠ ಸೂಚಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ, ಅನುಮತಿ ಇರುವ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಸಾಮೂಹಿಕ ಪಟಾಕಿ ಪ್ರದರ್ಶನಗಳಿಗೆ ಅವಕಾಶ ನೀಡುವ ಕುರಿತು ಕೂಡ ಚಿಂತನೆ ನಡೆಸಿದೆ. ಕೆಲವು ವಿದೇಶಗಳಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಲಕ್ಷಾಂತರ ನಾಗರಿಕರ ಹಿತಕ್ಕಾಗಿ ಕಠಿಣ ಆದೇಶ ಅಗತ್ಯ
ನಿಯಮಗಳನ್ನು ಉಲ್ಲಂಘಿಸುವ ಪ್ರವೃತ್ತಿ ಮುಂದುವರಿದಿರುವುದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನರು ತಮ್ಮ ಮನೋಭಾವ ಬದಲಿಸಿಕೊಳ್ಳದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
Also Read>> ಪೋಷಕರಿಗೆ ಸರ್ಕಾರದಿಂದ ಗುಡ್‌ನ್ಯೂಸ್! ಆರ್‌ಟಿಇ ಆದಾಯ ಮಿತಿ ಭಾರಿ ಏರಿಕೆ?
ನಗರದ ಲಕ್ಷಾಂತರ ನಾಗರಿಕರ ದೊಡ್ಡ ಹಿತದೃಷ್ಟಿಯಿಂದ ನಾವು ಈಗ ಕೆಲವು ಕಠಿಣ ಆದೇಶಗಳನ್ನು ನೀಡಬೇಕಾಗಿದೆ. ಇಂತಹ ಸಕ್ರಿಯ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಯಾವುದೂ ಸುಧಾರಿಸುವುದಿಲ್ಲ. ಜನರು ತಮ್ಮ ಮನೋಭಾವವನ್ನು ಬದಲಿಸಿಕೊಳ್ಳಲು ಸಿದ್ಧರಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ದೀಪಾವಳಿ ವೇಳೆ 332 ಅಗ್ನಿ ಅವಘಡಗಳು: ಕೋರ್ಟ್ ಆತಂಕ!
ಪಟಾಕಿಗಳಿಂದ ಸಂಭವಿಸಬಹುದಾದ ಅಗ್ನಿ ಅವಘಡಗಳ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ದೀಪಾವಳಿ ಸಂದರ್ಭದಲ್ಲಿ ಮುಂಬೈನಲ್ಲಿ 332 ಅಗ್ನಿ ಅವಘಡಗಳು ಸಂಭವಿಸಿರುವ ವರದಿಯನ್ನು ಉ¯್ಲೆÃಖಿಸಿದ ನ್ಯಾಯಮೂರ್ತಿ ಕುಲಕರ್ಣಿ, ಈ ಸಂಖ್ಯೆಯನ್ನು ಆತಂಕಕಾರಿ ಎಂದು ಹೇಳಿz್ದÁರೆ.
ಪಟಾಕಿಗಳಿಂದ ಮನೆಗಳು, ಕಟ್ಟಡಗಳು ಹಾಗೂ ಇತರ ಆಸ್ತಿಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ದೀಪಾವಳಿ ಸಂದರ್ಭದಲ್ಲಿ ಆಕಾಶಕ್ಕೆ ಹಾರುವ ಪಟಾಕಿಗಳ ಬಳಕೆಯನ್ನು ನಿಷೇಧಿಸುವ ಮಹಾನಗರ ಪಾಲಿಕೆಯ ನಿರ್ಧಾರ ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Bombay High Court : ವಾಯುಮಾಲಿನ್ಯ ನಿಯಂತ್ರಣಕ್ಕೆ ಕೋರ್ಟ್ ಒತ್ತು
ಹಬ್ಬದ ಸಂದರ್ಭದಲ್ಲಿ ಮುಂಬೈ ನಗರದ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವುದರ ಬಗ್ಗೆಯೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ದೀಪಾವಳಿ ಸಂದರ್ಭದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಗರಿಷ್ಠ ಮಟ್ಟಕ್ಕೆ ತಲುಪಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, ಮುಂದಿನ ದಿನಗಳಲ್ಲಿ ಇಂತಹ ಮಾಲಿನ್ಯ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ಬಯಸಿದೆ ಎಂದು ತಿಳಿಸಿದೆ.
ಪಟಾಕಿಗಳಿಂದ ಹೊರಹೊಮ್ಮುವ ಹೊಗೆ, ಸೂಕ್ಷ್ಮ ಕಣಗಳು ಹಾಗೂ ವಿಷಕಾರಿ ರಾಸಾಯನಿಕಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ, ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ.
ಗ್ರೀನ್ ಪಟಾಕಿಗಳಲ್ಲೂ ನಿಷೇಧಿತ ರಾಸಾಯನಿಕ
ಪಟಾಕಿಗಳ ಸಂಪೂರ್ಣ ನಿಷೇಧಕ್ಕೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ, ಸಾರ್ವಜನಿಕ ಆರೋಗ್ಯವೇ ಮೊದಲ ಆದ್ಯತೆಯಾಗಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಥಾಣೆಯ ಅರ್ಜಿದಾರ ಡಾ. ಮಹೇಶ್ ಬೆಡೇಕರ್ ಪರ ಹಿರಿಯ ವಕೀಲ ಸಂಜೀವ್ ಗೋರ್ವಾರ್ಡ್ಕ ಹಾಗೂ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿರುವ ಅಮಿಕಸ್ ಕ್ಯೂರಿ ಆನಂದ್ ಪೈ ಅವರು, ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ‘ಗ್ರೀನ್ ಪಟಾಕಿ’ಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವು ಉತ್ಪನ್ನಗಳ ಮೇಲೆ ನಕಲಿ ಕ್ಕಿ ಕೋಡ್ಗಳಿರುವುದು ಹಾಗೂ ಅವುಗಳಲ್ಲಿ ನಿಷೇಧಿತ ರಾಸಾಯನಿಕಗಳನ್ನು ಬಳಸಿರುವುದನ್ನು ಪ್ರಯೋಗಾಲಯ ಪರೀಕ್ಷೆಗಳು ಬಹಿರಂಗಪಡಿಸಿವೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಗ್ರೀನ್ ಪಟಾಕಿಗಳ ಹೆಸರಿನಲ್ಲಿ ನಡೆಯುತ್ತಿರುವ ಮಾರಾಟದ ಮೇಲೂ ಕಟ್ಟುನಿಟ್ಟಿನ ಪರಿಶೀಲನೆ ಅಗತ್ಯ ಎಂದು ವಾದಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯಕ್ಕಿಂತ ಸಾರ್ವಜನಿಕ ಸುರಕ್ಷತೆ ಮುಖ್ಯವೇ?
ಪಟಾಕಿ ಸಿಡಿಸುವ ಪದ್ಧತಿಗೆ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ರಕ್ಷಣೆ ನೀಡಬಹುದೇ ಎಂಬ ವಿಚಾರವನ್ನೂ ನ್ಯಾಯಾಲಯ ಚರ್ಚಿಸಿದೆ.
ಭಾರತೀಯ ಸಂವಿಧಾನದ 25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯ, ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಹಾಗೂ ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ. ಆದರೆ ಜೀವಕ್ಕೆ ಹಾಗೂ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಆಚರಣೆಗಳಿಗೆ ಈ ಹಕ್ಕಿನ ಅಡಿಯಲ್ಲಿ ಸ್ವಯಂಚಾಲಿತವಾಗಿ ರಕ್ಷಣೆ ದೊರೆಯುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕರ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳನ್ನು ಧಾರ್ಮಿಕ ಆಚರಣೆ ಎಂಬ ಕಾರಣಕ್ಕೆ ಸಮರ್ಥಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
491 ಪ್ರಕರಣ ದಾಖಲು, 21 ಲಕ್ಷ ಮೌಲ್ಯದ ಪಟಾಕಿ ವಶ
ಈ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಮುಂಬೈ ನಗರ ಆಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೊಳಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಮುಂಬೈ ಪೊಲೀಸ್ ಇಲಾಖೆಯ ಪ್ರಕಾರ, ನ.4ರಿಂದ 13ರವರೆಗೆ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಒಟ್ಟು 491 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ ಸುಮಾರು 21 ಲಕ್ಷ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಆದರೆ ನಿಯಮಗಳಿದ್ದರೂ ಅವುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿರುವುದರಿಂದ, ಇನ್ನಷ್ಟು ಪರಿಣಾಮಕಾರಿ ಹಾಗೂ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂದು ನ್ಯಾಯಪೀಠ ಸೂಚಿಸಿದೆ.
ಇಡೀ ಮಹಾರಾಷ್ಟ್ರಕ್ಕೂ ಅನ್ವಯವಾಗುತ್ತದೆಯೇ?
ಮುಂಬೈ ನಗರಕ್ಕೆ ಮಾತ್ರ ಸೀಮಿತವಾಗದೆ, ಪಟಾಕಿ ಬಳಕೆಗೆ ಸಂಬಂಧಿಸಿದಂತೆ ನೀಡುವ ಅಂತಿಮ ನಿರ್ದೇಶನಗಳನ್ನು ಇಡೀ ಮಹಾರಾಷ್ಟ್ರ ರಾಜ್ಯಕ್ಕೆ ಅನ್ವಯಿಸಬೇಕೇ ಎಂಬುದನ್ನೂ ಬಾಂಬೆ ಹೈಕೋರ್ಟ್ ಪರಿಗಣಿಸುತ್ತಿದೆ.
ನಗರಗಳಲ್ಲಿ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪಟಾಕಿ ಬಳಕೆಗೆ ಕಠಿಣ ನಿಯಂತ್ರಣ ಅಥವಾ ಸಂಪೂರ್ಣ ನಿಷೇಧ ಜಾರಿಯಾದರೆ ಮಹಾರಾಷ್ಟ್ರದಲ್ಲಿ ಹಬ್ಬಗಳ ಆಚರಣೆಯ ವಿಧಾನವೇ ಬದಲಾಗುವ ಸಾಧ್ಯತೆಯಿದೆ.
ಸಾರ್ವಜನಿಕರ ಆರೋಗ್ಯ, ಪರಿಸರ ಸಂರಕ್ಷಣೆ, ಅಗ್ನಿ ಸುರಕ್ಷತೆ ಹಾಗೂ ಧಾರ್ಮಿಕ ಆಚರಣೆಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಂಬೆ ಹೈಕೋರ್ಟ್ ನೀಡಲಿರುವ ಅಂತಿಮ ಆದೇಶ ಮಹತ್ವ ಪಡೆದುಕೊಂಡಿದೆ.
ಪಟಾಕಿ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಅಂತಿಮ ಆದೇಶ ಹೊರಬಂದ ಬಳಿಕ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಯಾವ ರೀತಿಯ ನಿರ್ಬಂಧಗಳು ಜಾರಿಯಾಗಲಿವೆ ಎಂಬುದು ಸ್ಪಷ್ಟವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






