ಕಲ್ಪ ಮೀಡಿಯಾ ಹೌಸ್ | ಸೊರಬ | ವರದಿ: ಮಧುರಾಮ್ |
ಧಾರ್ಮಿಕ ಹಾಗೂ ಲೋಕಕಲ್ಯಾಣದ ಉದ್ದೇಶದಿಂದ ಸೊರಬ (Soraba) ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಶ್ರೀ ಚತುಃಪವಿತ್ರ (Nagamandala Utsav) ನಾಗಮಂಡಲೋತ್ಸವ, ಮಹಾರುದ್ರಯಾಗ ಹಾಗೂ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಅಂಚೆ ಕಚೇರಿ ಹಿಂಭಾಗದಲ್ಲಿರುವ ಶ್ರೀ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ನ.27ರಿಂದ 29ರವರೆಗೆ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನ.27ರಂದು ಬೆಳಿಗ್ಗೆ 7ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಮಹಾರುದ್ರಯಾಗಕ್ಕೆ ಚಾಲನೆ ದೊರೆಯಲಿದೆ. ಸಂಜೆ ವಿವಿಧ ಗ್ರಾಮಗಳ ಭಕ್ತರಿಂದ ಸಮರ್ಪಿಸಲಾಗುವ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಧರ್ಮಸಭೆ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಲಿವೆ.
Soraba : ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ
ನ.28ರಂದು ಬೆಳಿಗ್ಗೆ ಸಹಸ್ರ ಬಿಲ್ವಾರ್ಚನೆ, ನಾಗಮಂಡಲೋತ್ಸವದ ಪೂರ್ವಾಂಗ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಧರ್ಮಸಭೆ ಆಯೋಜಿಸಲಾಗಿದೆ. ಸಂಜೆ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ನಡೆಯಲಿದೆ.
ನ.29ರಂದು ಬೆಳಿಗ್ಗೆ ಮಹಾರುದ್ರಯಾಗ ಮತ್ತು ನಾಗಮಂಡಲೋತ್ಸವದ ಹೋಮ, ಹವನ ಹಾಗೂ ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ ಪಲ್ಲಕ್ಕಿ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
Also Read>> ಲಿಬರ್ಟಿ ಜನರಲ್ ಇನ್ಶೂರೆನ್ಸ್ನಿಂದ ‘ಲಿಬರ್ಟಿ ಎಟರ್ನಿಯಾ’ ಆರೋಗ್ಯ ವಿಮಾ ಯೋಜನೆ ಪರಿಚಯ
ಶ್ರೀ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಘನಪಾಠಿ ನಾರಾಯಣ ಭಟ್ ಮರಾಠೆ, ಎಚ್. ಗಣಪತಿ, ಸದಸ್ಯರು, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಎನ್. ಷಣ್ಮುಖಾಚಾರ್, ಸಂಚಾಲಕ ಎನ್.ಎಸ್. ಶಂಕರ, ಎಂ.ಡಿ. ಉಮೇಶ್, ಗುರುಮೂರ್ತಿ ಹಿರೇಶಕುನ, ಎಂ.ಎನ್. ಗುರುಮೂರ್ತಿ, ಕೆ. ಗೌಡ, ರಾಜು ಹಿರಿಯಾವಲಿ, ಮಹೇಶ್ ಪೂಜಾರಿ, ಮಂಜುನಾಥ, ರಮೇಶ್ ಮಂಚಿ, ಡಿ. ಶಿವಯೋಗಿ, ಶ್ರೀಧರ್ ಕೊಳೂರು, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








