ಶಿವಮೊಗ್ಗ: ಶೀಘ್ರದಲ್ಲೇ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ನಗರ ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿ ಮೂರು ವರ್ಷ ಕಳೆದಿದೆ. ಆದರೆ, ಈ ಕುರಿತಂತೆ ಕೇಂದ್ರದಿಂದ ಅನುದಾನ ಮಂಜೂರಾಗಿದ್ದರೂ ಸಹ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಸ್ಮಾರ್ಟ್‌ಸಿಟಿ ಯೋಜನೆಗೆ ಕೇಂದ್ರಸರ್ಕಾರ ಪ್ರತೀ ವರ್ಷ 100 ಕೋಟಿ ರೂ. ನೀಡಲಿದೆ. ಅದೇ ರೀತಿ ರಾಜ್ಯಸರ್ಕಾರವೂ ಸಹಾ 100 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಿದೆ. ಈಗಾಗಲೇ 3 ವರ್ಷಗಳಿಂದ ಹಣ ಬಂದಿದೆ. ಆದರೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ ಎಂದರು.
ಇನ್ನು ಎರಡು ವರ್ಷಗಳಲ್ಲಿ 1 ಸಾವಿರ ಕೋಟಿ ರೂ. ಆಗಲಿದೆ. ಇಷ್ಟು ಹಣವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡು ನಗರವನ್ನು ಅಭಿವೃದ್ಧಿ ಮಾಡಲಾಗುವುದು. ನಗರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಈ ಕಾರ್ಯ ಆರಂಭಕ್ಕೂ ಮುನ್ನ ನಗರದ ನಾಗರಿಕರೊಂದಿಗೆ ಚರ್ಚೆ ನಡೆಸಿ ಅವರಿಂದ ಸೂಕ್ತ ಅಭಿಪ್ರಾಯ ಪಡೆದುಕೊಳ್ಳಲಾಗುವುದು. ಪ್ರತೀ ಮೂರು ತಿಂಗಳಿಗೊಮ್ಮೆ ಸ್ಮಾರ್ಟ್‌ಸಿಟಿ ಪ್ರಗತಿಯ ವಿವರಗಳನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಿಳಿಸಲಾಗುವುದು. ಕಾಲಕಾಲಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು.
ಇನ್ನು, ನಗರದಲ್ಲಿ ಯಾವಕಡೆ ಕಾಮಗಾರಿಗಳು ನಡೆಯಬೇಕು ಎಂಬುದರ ಬಗ್ಗೆ ಸಹಾ ಯೋಜನೆಗಳನ್ನು ಇದುವರೆಗೂ ರೂಪಿಸಲಾಗಿಲ್ಲ. ಈ ಕುರಿತು ತಾನು ನಿನ್ನೆ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಅವರು ಸೂಕ್ತರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:
- ಶಿವಮೊಗ್ಗ ಏರ್‌ಪೋರ್ಟ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ತಾನು ನಗರಕ್ಕೆ ಹೆಚ್ಚಿನ ಕೈಗಾರಿಕೆಗಳು ಬರುವ ದೃಷ್ಠಿಯಿಂದ ನಗರಕ್ಕೆ ಏಪೋರ್ಟ್ ತರುತ್ತೇನೆ.
- ವಿಮಾನಯಾನ ಕೇವಲ ಶ್ರೀಮಂತರಿಗೆ ಅಲ್ಲ. ನಗರದಲ್ಲಿ ವಿಮಾನ ನಿಲ್ದಾಣವಾದರೆ ಅನೇಕ ಜನರಿಗೆ ಅನುಕೂಲವಾಗಲಿದೆ.
- ಜೂನ್ 21ರಂದು ಶಾಸಕರ ಕಚೇರಿಯನ್ನು ಶಿವಪ್ಪನಾಯಕ ಮಾರುಕಟ್ಟೆಯ ಹಿಂದಿನ ಕಟ್ಟಡದಲ್ಲಿ ತೆರೆಯಲಿದ್ದೇನೆ.
- ನೂತನ ಕಚೇರಿಯಲ್ಲಿ ಸ್ಮಾರ್ಟ್‌ಸಿಟಿ, ಯುಜಿಡಿ ಸೇರಿದಂತೆ ಪ್ರತಿಯೊಂದು ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ.
- ಈ ಕಚೇರಿಯಲ್ಲಿ ಸಾರ್ವಜನಿಕರಿಗೂ ತಮ್ಮ ಸಮಸ್ಯೆ ಹೇಳಲು ಸಂಪೂರ್ಣ ಅವಕಾಶವಿದೆ
Discussion about this post