ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮೀಸಲಾತಿ ಘೋಷಣೆಯಾಗಿದ್ದು, 35 ವಾರ್ಡ್‌ಗಳಲ್ಲಿ 17 ಸ್ಥಾನವನ್ನು ಮಹಿಳೆಯರಿಗೆ ಹಾಗೂ 18 ಸ್ಥಾನ ಪುರುಷರಿಗೆ ದಕ್ಕಿದೆ.
ಹಾಲಿ ಜನಪ್ರತಿನಿಧಿಗಳ ಅವಧಿ ಸೆ.30ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ, ಹೊಸ ಚುನಾವಣೆಗಾಗಿ ಸರ್ಕಾರ ವಾರ್ಡ್‌ಗಳ ಮೀಸಲಾತಿಯನ್ನು ಪ್ರಕಟಿಸಿದೆ.
ಈ ಹಿಂದಿನಂತೆ ಎಲ್ಲಾ 35 ವಾರ್ಡ್‌ಗಳನ್ನು ಮುಂದುವರೆಸಲಾಗಿದೆ. ಆದರೆ ಮೀಸಲಾತಿಯಲ್ಲಿ ಸಾಕಷ್ಟು ಬದಲಾವಣೆ ನಡೆದಿದೆ. 35 ವಾರ್ಡುಗಳ ಪೈಕಿ 17 ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಉಳಿದ 18 ಸ್ಥಾನ ಪುರುಷರಿಗೆ ದಕ್ಕಿದೆ. ಈ ಪ್ರಕಾರ ಶೇ. 50 ರಷ್ಟು ಮೀಸಲಾತಿಯನ್ನು ಪಾಲಿಕೆಯಲ್ಲಿ ನೀಡಲಾಗಿದೆ.
ಸಾಮಾನ್ಯವರ್ಗಕ್ಕೆ 8, ಸಾಮಾನ್ಯಮಹಿಳೆಗೆ 9, ಹಿಂದುಳಿದ ವರ್ಗ ಎ. ಪುರುಷರಿಗೆ 6, ಮಹಿಳೆಗೆ 5, ಎಸ್‌ಸಿ ಮಹಿಳೆಗೆ 2, ಎಸ್‌ಸಿಗೆ 2, ಎಸ್‌ಟಿಗೆ 1, ಹಿಂದುಳಿದ ವರ್ಗ ಬಿ. ಮಹಿಳೆಗೆ 1, ಪುರುಷರಿಗೆ 1 ಸ್ಥಾನವನ್ನು ನೀಡಲಾಗಿದೆ.
ಸಾಮಾನ್ಯವರ್ಗಕ್ಕೆ 17 ಸ್ಥಾನ ಅಂದರೆ ಅರ್ಧದಷ್ಟನ್ನು ನೀಡಲಾಗಿದೆ. 10 ಸಾವಿರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ವಾರ್ಡನ್ನು ರಚಿಸಲಾಗಿದೆ. ಈ ಪ್ರಕಾರ 7ನೆಯ ವಾರ್ಡಿನಲ್ಲಿ ಅತೀ ಹೆಚ್ಚು ಎಂದರೆ 10,655 ಮತದಾರರಿದ್ದಾರೆ. ಅತೀ ಕಡಿಮೆ ಮತದಾರರು 35ನೆಯ ವಾರ್ಡಿನಲ್ಲಿ 7,423 ಮತದಾರರು ಇದ್ದಾರೆ. ಪರಿಶಿಷ್ಠ ಪಂಗಡಗಳ 502 ಮತದಾರರಿರುವ 18ನೆಯ ವಾರ್ಡನ್ನು(ವಿನೋಬನಗರ ದಕ್ಷಿಣ) ಈ ವರ್ಗಕ್ಕೆ ಮೀಸಲಿಡಲಾಗಿದೆ. ಸುಮಾರು 6 ವಾರ್ಡುಗಳಲ್ಲಿ 10 ಸಾವಿರಕ್ಕೂ ಸ್ಪಲ್ಪ ಹೆಚ್ಚು ಮತದಾರರು ಇದ್ದಾರೆ.
ಈ ಬಾರಿಯ ಮೀಸಲಾತಿಯಿಂದ ಹಾಲಿ ಪಾಲಿಕೆಯ ಹಲವು ಸದಸ್ಯರು ತಮ್ಮ ಕ್ಷೇತ್ರವನ್ನು ಕಳೆದುಕೊಳ್ಳಲಿದ್ದಾರೆ. ಬಿಜೆಪಿಯ ಎನ್.ಜೆ. ರಾಜಶೇಖರ್ ಪ್ರತಿನಿಧಿಸುತ್ತಿದ್ದ 19ನೆಯ ವಾರ್ಡ್ (ಶರಾವತಿ ನಗರ) ಪರಿಶಿಷ್ಠ ಜಾತಿಗೆ ಮೀಸಲಾಗಿದೆ. ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಪ್ರತಿನಿಧಿಸುತ್ತಿದ್ದ 30ನೆಯ ವಾರ್ಡ್ (ಸೀಗೆಹಟ್ಟಿ) ಈ ಬಾರಿ ಸಾಮಾನ್ಯ ಮಹಿಳೆಯ ಪಾಲಾಗಿದೆ. ವಿಶ್ವನಾಥ ಕಾಶಿ ಪ್ರತಿನಿಧಿಸುತ್ತಿದ್ದ 14ನೆಯ ವಾರ್ಡ್ ( ವಿದ್ಯಾನಗರ ಉತ್ತರ)ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಲಕ್ಷ್ಮಣ ಪ್ರತಿನಿಧಿಸುತ್ತಿದ್ದ 20ನೆಯ ವಾರ್ಡ್ (ಹೊಸಮನೆ) ಸಾಮಾನ್ಯ ಮಹಿಳೆಗೆ ಕೊಡಲ್ಪಟ್ಟಿದೆ.
ಎಚ್.ಸಿ. ಯೋಗೇಶ್ ಪ್ರತಿನಿಧಿಸುತ್ತಿದ್ದ 4ನೆಯ ವಾರ್ಡ್ (ಮಲ್ಲೇಶ್ವರ) ನಗರ ಹಿಂದುಳಿದ ವರ್ಗ ಬಿ ಮಹಿಳೆಗೆ ಮತ್ತು ಹಾಲಿ ಮೇಯರ್ ನಾಗರಾಜ್ ಕಂಕಾರಿ ಪ್ರತಿನಿಧಿಸುತಿದ್ದ 9ನೆಯ ವಾರ್ಡ್ ಹಿಂದುಳಿದ ವರ್ಗ ಬಿ ಗೆ, ಮಾಜಿ ಮೇಯರ್ ಕೇಬಲ್ ಬಾಬು ಪ್ರತಿನಿಧಿಸುತ್ತಿದ್ದ 27ನೆಯ (ಮಿಳಘಟ್ಟ) ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆಗೆ ಮತ್ತು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪ್ರತಿನಿಧಿಸುತ್ತಿದ್ದ (ಅಶೋಕನಗರ) ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆಯ ಪಾಲಾಗಿದೆ.
ಹಾಲಿ ಪ್ರತಿನಿಧಿಗಳಲ್ಲಿ 8ನೆಯ ವಾರ್ಡಿನ (ಜೆಪಿಎನ್‌ನಗರ) ವಿಜಯಲಕ್ಷ್ಮೀ ಪಾಟೀಲ್, 21ನೆಯ ವಾರ್ಡ್ (ದುರ್ಗಿಗುಡಿ) ಗೋಪಾಲಕೃಷ್ಣ ಅವರು ಮತ್ತೆ ಸ್ಪರ್ಧಿಸುವಂತೆ ಅನುಕೂಲವಾಗಿದೆ.
ಹಾಲಿ ಮತದಾರರ ಪಟ್ಟಿಯ ಪ್ರಕಾರ ಒಟ್ಟು 3,32,650 ಮತದಾರರಿದ್ದು ಈ ಪೈಕಿ 40,737 ಎಸ್‌ಸಿ ಮತ್ತು 9192 ಎಸ್‌ಟಿ ಮತದಾರರಿದ್ದಾರೆ.
Discussion about this post