ಚೆನ್ನೈ: ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ(94) ಇಂದು ಸಂಜೆ ಇಹಲೋಕ ತ್ಯಜಿಸಿದ್ದಾರೆ.
ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿರುವ ಕರುಣಾನಿಧಿ ಅವರ ಆರೋಗ್ಯ ಇತ್ತೀಚೆಗೆ ತೀವ್ರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ, ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾಗಿ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ನಿನ್ನೆ ಮಧ್ಯಾಹ್ನದಿಂದ ಕರುಣಾನಿಧಿ ಅವರ ದೇಹದ ಅಂಗಾಂಗಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಿತ್ತು. ಆದರೂ ಅವರಿಗೆ ನಿರಂತರ ಚಿಕಿತ್ಸೆ ನೀಡಿ, 24 ಗಂಟೆಗಳ ಕಾಲ ನಿಕಟ ವೀಕ್ಷಣೆಯಲ್ಲಿಡಲಾಗಿತ್ತು.
ರಾಜರತಿನಂ ಸ್ಟೇಡಿಯಂನಲ್ಲೂ ಸುಮಾರು 1200 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ 500 ಸಶಸ್ತ್ರ ಪಡೆ ಮತ್ತು 700 ಸ್ಪೇಷಲ್ ಫೋರ್ಸ್ ಕಾರ್ಯ ನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
1924ರ ಜೂನ್ 3ರಂದು ಜನಿಸಿದ ಕರುಣಾನಿಧಿ ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಪುತ್ರ. ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ ಕರುಣಾನಿಧಿ ಅವರ ಮೊದಲ ಹೆಸರು ದಕ್ಷಿಣಾಮೂರ್ತಿ.
ಡಿಎಂಕೆ ಸ್ಥಾಪಕ ಅಣ್ಣಾದೊರೈ ಕಾಲವಾದ ನಂತರ ದರ ಮುಖಂಡತ್ವ ವಹಿಸಿಕೊಂಡರು. ಅವರು 1969-71, 1971-76, 1989-91, 1996-2001 ಮತ್ತು 2006-2011ರವರೆಗೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
60 ವರ್ಷಗಳ ದೀರ್ಘಕಾಲದ ರಾಜಕೀಯ ವೃತ್ತಿ ಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮೂಲಕ ದಾಖಲೆ ಮಾಡಿದ್ದರು.
















