ನವದೆಹಲಿ: ಡಿಮಾನಿಟೈಸೇಶನ್ ಆದ ನಂತರ ನಕಲಿ ನೋಟುಗಳ ಹಾವಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಸಾಬೀತಾದ ಬೆನ್ನಲ್ಲೇ, ಈಗ ಚೀನಾ ಸಹ ಭಾರತದ ಕರೆನ್ಸಿಯ ನೋಟುಗಳನ್ನು ಮುದ್ರಿಸುತ್ತಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತ ಸೇರಿದಂತೆ ಹಲವು ದೇಶಗಳ ಕರೆನ್ಸಿಗಳನ್ನು ಚೀನಾ ದೊಡ್ಡ ಪ್ರಮಾಣದಲ್ಲಿ ಮುದ್ರಿಸುತ್ತಿದೆ. ಚೀನಾದ ನೋಟು ಮುದ್ರಣ ಘಟಕಗಳಲ್ಲೇ ಭಾರೀ ಪ್ರಮಾಣದಲ್ಲಿ ಮುದ್ರಣವಾಗುತ್ತಿದೆ ಎಂದಿದೆ.
ಚೈನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಆಂಡ್ ಮೀಟಿಂಗ್ ಕಾರ್ಪೊರೇಶನ್ ಮೂಲಕ ಚೀನದ ಈ ನೋಟು ಮುದ್ರಣಾಲಯಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ. ಸರ್ಕಾರ ಈ ವರ್ಷ ಈ ಮುದ್ರಣ ಘಟಕಗಳಿಗೆ ಅಸಾಮಾನ್ಯ ಎನಿಸಿರುವ ಅತ್ಯಧಿಕ ಪ್ರಮಾಣದ ಮುದ್ರಣ ಗುರಿಯನ್ನು ವಿಧಿಸಿದೆ ಎಂದಿದೆ.
ಇನ್ನು ಈ ವಿಚಾರವನ್ನು ಪ್ರಸ್ತಾಪಿಸಿ ಸುದ್ದಿ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಈ ಸುದ್ದಿ ನಿಜವೇ ಆದಲ್ಲಿ ಇದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದಿದ್ದಾರೆ. ಆದರೆ ಕೇಂದ್ರ ಸರ್ಕಾರ ಈವರೆಗೆ ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೂಲಗಳ ಮಾಹಿತಿಯಂತೆ, 2013ರಲ್ಲಿ ಬೆಲ್ಟ್ ಆಂಡ್ ರೋಡ್ ಯೋಜನೆಯನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ಥಾಯ್ಲಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಭಾರತ, ಬ್ರಝಿಲ್ ಮತ್ತು ಪೋಲಂಡ್ ದೇಶಗಳ ಕರೆನ್ಸಿ ಉತ್ಪಾದನೆ ಯೋಜನೆಯ ಗುತ್ತಿಗೆಗಳನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂದು ಚೈನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಅಧ್ಯಕ್ಷ ಲಿಯು ಗೀಶೆಂಗ್ ಅವರ ಲೇಖನವನ್ನು ವರದಿಯು ಉಲ್ಲೇಖೀಸಿದೆ.
Discussion about this post