ನವದೆಹಲಿ: 72ನೆಯ ಸ್ವಾತಂತ್ರೋತ್ಸವ ಸಂಭ್ರಮ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮನೆ ಮಾಡಿದ್ದು, ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಇಡಿಯ ದೇಶವೇ ಫಿದಾ ಆಗಿದೆ.
ಇಂದಿನ ಭಾಷಣದ ಕುರಿತಾಗಿ ಹೇಳುವುದಾದೆ, ಇಂದಿನ ಮೋದಿಯವರ ಭಾಷಣ ಅವರ ಮೂರನೆಯ ಅತ್ಯಂತ ಸುಧೀರ್ಘ ಭಾಷಣವಾಗಿದೆ ಎನ್ನುವುದು ಪ್ರಮುಖ ಅಂಶ.
ತಮ್ಮ ಪ್ರಸಕ್ತ ಅವಧಿಯ ಕೊನೆ ಸ್ವಾತಂತ್ಯೋತ್ಸವ ಭಾಷಣ ಮಾಡಿದ ಮೋದಿ, ತಮ್ಮ ಸರ್ಕಾರದ ಅಧಿಕಾರವಧಿಯಲ್ಲಿ ದೇಶದಲ್ಲಾದ ಅಭಿವೃದ್ದಿ ಕುರಿತಾಗಿ ಸುಮಾರು 82 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಪ್ರಧಾನಿಯವರ ಮೂರನೆಯ ಅತಿ ಸುಧೀರ್ಘ ಭಾಷಣ ಇದಾಗಿದ್ದು, ಹಲವಾರು ಹೊಸ ಘೋಷಣೆಗಳು ಹಾಗೂ ತಮ್ಮ ಸರ್ಕಾರದ ಸಾಧನೆಯ ಕುರಿತಾಗಿ ತಿಳಿಸಿದರು.
ಕಳೆದ ವರ್ಷದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಮೋದಿಯವರ ಭಾಷಣ ಅತ್ಯಲ್ಪ ಅವಧಿಯದ್ದಾಗಿತ್ತು.
ಇನ್ನು, 2016ರ ಸ್ವಾತಂತ್ರೋತ್ಸವ ಸಂದರ್ಭದಲ್ಲಿ 96 ನಿಮಿಷಗಳ ಕಾಲ ಭಾಷಣ ಮಾಡಿದ್ದ ಪ್ರಧಾನಿಯವರು, 2017ರಲ್ಲಿ ಕೇವಲ 57 ನಿಮಿಷಗಳ ಕಾಲ ಮಾತ್ರ ಮಾತನಾಡಿದ್ದರು.
ಗಮನಿಸಬೇಕಾದ ಅಂಶವೆಂದರೆ 2016ರಲ್ಲಿ 96 ನಿಮಿಷಗಳ ಕಾಲ ಮಾಡಿದ್ದ ಮೋದಿಯವರ ಭಾಷಣ ಭಾರತದ ಇತಿಹಾಸದಲ್ಲೇ ಪ್ರಧಾನಿಯೊಬ್ಬರ ಸ್ವಾತಂತ್ರೋತ್ಸವದ ಸುಧೀರ್ಘ ಭಾಷಣ ಎಂಬ ಖ್ಯಾತಿ ಪಡೆದಿದೆ.
ಇನ್ನು, 2014ರಲ್ಲಿ 65 ನಿಮಿಷಗಳ ಕಾಲ ಮಾತನಾಡಿದ್ದ ಮೋದಿ, 2015ರಲ್ಲಿ 86 ನಿಮಿಷಗಳ ಕಾಲ ಭಾಷಣ ಮಾಡಿದ್ದರು.
ಸುಮಾರು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ತಮ್ಮ ಅವಧಿಯ ಸ್ವಾತಂತ್ರೋತ್ಸವದಲ್ಲಿ ಎಂದಿಗೂ 50 ನಿಮಿಷಗಳನ್ನು ಮೀರಿ ಮಾತನಾಡಿರಲಿಲ್ಲ.
ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ 1947ರಲ್ಲಿ 72 ನಿಮಿಷಗಳ ಕಾಲ ಭಾಷಣ ಮಾಡಿದ್ದರು.
Discussion about this post