ಸೊರಬ: ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿರುವ ಸಂಕುಚಿತ ಮನೋಭಾವಗಳನ್ನು ಮೀರಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಪಟ್ಟಣದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ್ ಹೇಳಿದರು.
ತಾಲೂಕಿನ ಮಾವಲಿ ವಲಯದ ಗೇರುಕೊಪ್ಪ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಸ್ವಚ್ಚತಾ ಹಾಗೂ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮೀಣ ಮಹಿಳೆಯರ ಸ್ಥಾನಮಾನ ಮತ್ತು ಶಿಕ್ಷಣದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕುಟುಂಬ ನಿರ್ವಹಣೆಯ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಪುರುಷನಿಗೆ ಸಮಾನವಾದ ಕೆಲಸ ನಿರ್ವಹಿಸಿದರೂ ಕೂಡ ಮಹಿಳೆಯನ್ನು ಎರಡನೇ ದರ್ಜೆ ವ್ಯಕ್ತಿಯನ್ನಾಗಿ ಪರಿಗಣಿಸುತ್ತಿರುವುದು ವಿಪರ್ಯಾಸ. ಸಾಮಾಜಿಕ ಕಟ್ಟು ಪಾಡುಗಳು, ಧಾರ್ಮಿಕ ಅಂಧಶ್ರದ್ದೆ ಹಾಗೂ ಮೌಡ್ಯಗಳಿಂದ ಇಂದಿಗೂ ಮಹಿಳೆಯರನ್ನೂ ಶೋಷಿಸಲಾಗುತ್ತಿದೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ವೈಚಾರಿಕತೆ ಬೆಳೆಸಿಕೊಂಡಲ್ಲಿ ಮೌಢ್ಯ ನಿಷೇಧ ಕಾನೂನಿನ ಅವಶ್ಯಕತೆ ಇಲ್ಲ. ಮಹಿಳೆಯ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ. ಗ್ರಾಮೀಣ ಮಹಿಳೆಯರ ಬದುಕಿಗೆ ಕಂಟಕವಾಗಿರುವ ಮದ್ಯದಂಗಡಿಗಳ ತೆರವಿಗೆ ಸರ್ಕಾರ ಮುಂದಾಗಬೇಕು ಎಂದರು.
ಮಾವಲಿ ವಲಯ ಮೇಲ್ವಿಚಾರಕ ಭಾಸ್ಕರ್ ಮಾತನಾಡಿ, ಗ್ರಾಮದಲ್ಲಿರುವ ಶ್ರದ್ಧಾ ಕೇಂದ್ರಗಳ ಹಾಗೂ ಮನೆಯ ಸುತ್ತಲಿನ ಪರಿಸರ ಸ್ವಚ್ಚತೆ ಮುಖ್ಯ. ಸಾರ್ವಜನಿಕ ಹಾಗೂ ಪವಿತ್ರ ಸ್ಥಳಗಳ ಸ್ವಚ್ಚತೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರನ್ನು ಆಡಳಿತ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಮುಕ್ತ ಅವಕಾಶ ಕಲ್ಪಿಸಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ರೇಣುಕಾ ಪ್ರಾಸ್ತಾವಿಕ ಮಾತನಾಡಿದರು.
ಅಂಗನವಾಡಿ ಶಿಕ್ಷಕಿ ರೇಖಾ ಪ್ರಾರ್ಥಿಸಿದರು. ರೂಪಾ ಸ್ವಾಗತಿಸಿದರು, ಮಾಲ ವಂದಿಸಿದರು. ಸೇವಾ ಪ್ರತಿನಿಧಿ ವಿಕ್ರಮ್, ಶಿಕ್ಷಕಿ ರೇಖಾ, ಈರಮ್ಮ, ಅಕ್ಕಮ್ಮ,
ಇತರರಿದ್ದರು.
ವಿವಿಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಯೋಜನೆಯ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
















