ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಬ್ಯುದ್ಧಾನಮ ಧರ್ಮಸ್ಯ ತದಾತ್ಮನಾಮ್ ಸೃಜಾಮ್ಯಹಮ್॥
ಪರಿತ್ರಾಣಾಯ ಸಾಧುನಾ ವಿನಾಶಾಯ ಚ ದುಷ್ಕೃತಮ್
ಧರ್ಮಸಂಸ್ಥಾಪನಾಯಾರ್ಥ ಸಂಭವಾಮಿ ಯುಗೇ ಯುಗೇ॥
ಇದು ಜಗನ್ನಿಯಾಮಕ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದಲ್ಲಿನ ಉವಾಚ… ಸೃಷ್ಠಿಯಲ್ಲಿ ಯಾವಾಗ ಅನ್ಯಾಯ, ಅಧರ್ಮಗಳು ಮೇರೆ ಮೀರಿ ಹಿಂಸೆ ಹೆಚ್ಚಾಗುವುದೋ ಆಗ ನಾನು ಧರ್ಮ ರಕ್ಷಣೆಗೆ, ಶಿಷ್ಟರ ಉಳಿವಿಗೆ ಮತ್ತೆ ಅವತಾರ ಎತ್ತಿ ಬರುತ್ತೇನೆಂದು ಅಭಯ ನೀಡಿದ್ದಾನೆ.
ದ್ವಾಪರಯುಗದಲ್ಲಿ ಕಂಸ ರಾಜನ ಸ್ವಾರ್ಥ ಪ್ರವೃತ್ತಿಯ ಆಳ್ವಿಕೆ ಹಾಗೂ ಅಧರ್ಮದ ನೀತಿಯಿಂದ ಇಡಿಯ ಕಂಗೆಟ್ಟಯ ದಿಕ್ಕೆಟ್ಟ ವೇಳೆ ಶ್ರೀಹರಿ ಅವತಾರವೆತ್ತುತ್ತಾನೆ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ 8ನೆಯ ಅವತಾರವಾಗಿ ಶ್ರೀಕೃಷ್ಣನಾಗಿ ವಸುದೇವ ಪುತ್ರನಾಗಿ, ದೇವಕಿಯ ಗರ್ಭಾಂಶ ಸಂಭೂತನಾಗಿ ಅಳಿವಿನಂಚಿನಲ್ಲಿದ್ದ ಧರ್ಮ ರಕ್ಷಣೆಗಾಗಿ ಜೀವ ಸಂಕುಲದ ಒಳಿತಿಗಾಗಿ ಭುವಿಯಲ್ಲಿ ಆವಿರ್ಭವಿಸುತ್ತಾನೆ. ಅದೂ ಎಲ್ಲಿ? ಕಂಸ ಕೂಡಿಟ್ಟ ಮಥುರಾದ ಜೈಲಿನಲ್ಲಿ…
ವಸುದೇವ ದೇವಕಿಯ ಕಂದನಿಂದ ತನ್ನ ಅಂತ್ಯವೆಂಬ ಅಶರೀರ ವಾಣಿಯಿಂದ ಮಾಹಿತಿ ಪಡೆದ ಕಂಸ ಮಗುವನ್ನು ಕೊಲ್ಲಲು ಅಣಿಯಾಗುತ್ತಾನೆ. ಕಂಸನ ಮನಃಸ್ಥಿತಿ ಅರಿತ ವಸುದೇವ ಮಧ್ಯರಾತ್ರಿಯಲ್ಲಿ ಜನಿಸಿದ ತನ್ನ ಮಗುವನ್ನು ಎತ್ತಿಕೊಂಡು ಉಕ್ಕಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ದ್ವಾರಕ ನಗರ ತಲುಪಿ ಯಶೋಧೆಯ ಮಡಿಲಿಗೆ ಕಂದನನ್ನು ನೀಡುತ್ತಾನೆ. ಅಲ್ಲಿಂದ ಶ್ರೀಕೃಷ್ಣನ ಬಾಲಲೀಲೆ ಜಗತ್ತಿಗೆ ತೋರಲಾರಂಭಿಸುತ್ತದೆ.
ಶ್ರೀಕೃಷ್ಣನ ಇರುವಿಕೆಯನ್ನರಿತ ಕಂಸ ಆತನನ್ನು ಕೊಲ್ಲಲು ಅನೇಕ ವಾಮಮಾರ್ಗಗಳನ್ನು ಬಳಸಿ ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಕೊನೆಗೆ ವಿಫಲನಾಗುತ್ತಾನೆ. ನಂತರದ ಬೆಳವಣಿಗೆಗಳಲ್ಲಿ ಶ್ರೀಕೃಷ್ಣ ಸಂಬಂಧದಲ್ಲಿ ತನಗೆ ಸೋದರ ಮಾವನಾದರೂ ಧರ್ಮದ ಉಳಿವಿಗಾಗಿ ಕಂಸನನ್ನು ವಧಿಸುತ್ತಾನೆ.
ಮುಂದೆ ನಡೆದ ಪಾಂಡವ-ಕೌರವರ 18 ದಿನಗಳ ಮಹಾ ಯುದ್ಧದಲ್ಲೂ ಪಾಂಡವರ ಗೆಲುವಿಗೆ ಪ್ರಮುಖ ಕಾರಣನಾಗಿ ಧರ್ಮವನ್ನು ಎತ್ತಿ ಹಿಡಿಯುತ್ತಾನೆ ಈ ಜಗನ್ನಿಯಾಮಕ. ಇದಿಷ್ಟೂ ನೀವು ನಾವುಗಳು ಚಿಕ್ಕಂದಿನಿಂದಲೂ ಕೇಳಿಕೊಂಡು ಬಂದಿರುವ ಶ್ರೀಕೃಷ್ಣನ ಮಹಿಮೆ.
ಈ ಲೇಖನದ ಮೂಲಕ ನಿಮ್ಮ ಮುಂದೆ ಇಡಲಾಗುತ್ತಿರುವ ವಿಚಾರವೆಂದರೆ ಸಹಸ್ರಾರು ವರ್ಷಗಳ ಹಿಂದೆ ಇದ್ದ ಕಂಸ. ದುರ್ಯೋಧನ, ದುಶ್ಯಾಸನರಂತಹ ಮಾನವ ಸ್ವರೂಪಿ ದುಷ್ಟರು ಇಂದಿಗೂ ನಮ್ಮ ನಡುವೆ ಇದ್ದಾರೆಯೇ…?
ಏಕಿಲ್ಲ.. ಒಮ್ಮೆ ಯೋಚಿಸಿ ನೋಡಿ… ಮಾನವ ಜೀವಿಯಾಗಿ ನಿಮ್ಮ ನಮ್ಮ ನಡುವೆ ಅಂತಹ ದುರುಳರ ಗುಣಗಳನ್ನು ಪಡೆದು ಹಾಗೂ ಮೈಗೂಡಿಸಿಕೊಂಡು ಹಲವಾರು ನರರು ಬದುಕುತ್ತಿದ್ದಾರೆ. ದುರಾಸೆ, ಸ್ವಾರ್ಥ, ವಂಚನೆ, ಹಿಂಸೆ, ಮೋಸಗಳ ಗುಣಗಳನ್ನು ಹೊತ್ತು ಮೆರೆಯುತ್ತಿರುವುದಕ್ಕೆ ಈ ಮಣ್ಣು ಪ್ರತಿನಿತ್ಯ ಸಾಕ್ಷಿಯಾಗುತ್ತಲೇ ಇದೆ. ಆದರೆ, ಇದು ಕಲಿಯ ಮಹಿಮೆ ಎನ್ನುವುದೂ ಸಹ ಸತ್ಯವೇ.
ಅಂದು ಕಂಸ ತಾನು ಸರ್ವಶಕ್ತ, ಅಂತ್ಯವನ್ನು ಕಾಣದವ, ಸಮಸ್ತ ಸೃಷ್ಠಿಯೇ ತನ್ನಿಂದ/ತನ್ನ ಅಧೀನ ಎಂಬ ಅಹಂಕಾರದಿಂದ ಮನುಕುಲ ಹಾಗೂ ಧರ್ಮ ಪೀಡಕನಾಗಿ ಬದುಕಿದ್ದ. ಆದರೆ ಇಂದು ಕಂಸನಿಲ್ಲ ಆದರೂ ಸಹ ಆತನ ಗುಣಗಳು ನಮ್ಮ ನಡುವೆ ಆಗಾಗ ಬೆಳಕಿಗೆ ಬರುತ್ತಿರುತ್ತವೆ.
ಮಾನವ ಜನ್ಮ ಅನಿಶ್ಚಿತ. ಯಾವ ಸಮಯದಲ್ಲಿ ಕಾಲನ ಕರೆ ಬರುವುದೋ ಆ ದೇವರೊಬ್ಬನೇ ಬಲ್ಲನೇ ಹೊರತು ಈ ಗುಟ್ಟನ್ನು ಮಾತ್ರ ಸೃಷ್ಠಿಕರ್ತ ಬಿಟ್ಟುಕೊಟ್ಟಿಲ್ಲ. ವೇಗವಾಗಿ ಬೆಳೆಯುತ್ತಿರುವ ಇತ್ತೀಚಿನ ಜೀವನ ಪದ್ದತಿಯಲ್ಲಿ ಸ್ಮಶಾನವನ್ನು ಪ್ರತಿದಿನ ನೋಡಿಕೊಂಡು ತಿರುಗಾಡುತ್ತೇವೆ. ಆದರೂ ಮನುಷ್ಯನಲ್ಲಿ ಹಿಂಸಾ ಅಹಂಕಾರ ಮನೋಭಾವ…!
ಇನ್ನು ದುರ್ಯೋಧನ ಈತ ಸಾಮ್ರಾಜ್ಯಕ್ಕಾಗಿ ತನ್ನ ಸೋದರರ ಜೊತೆ ಮೋಸ, ವಂಚನೆ, ಕುತಂತ್ರ ಬುದ್ದಿಯಿಂದ ಬದುಕಿದಾತ ಇಂದಿಗೆ ಇವನೂ ಸಹ ಇಲ್ಲ ಆಸರೂ ಸಹ ನಮ್ಮ ನಡುವೆ ಇನ್ನೂ ಜೀವಂತ, ಮನುಷ್ಯ ತನ್ನ ಸಹೋದರರೊಂದಿಗೆ ಒಂದು ತಾಯಿ ಗರ್ಭ ಹಂಚಿಕೊಂಡು ಬಂದಿದ್ದನ್ನೂ ಸಹ ಮರೆತು ಅಡಿ ಅಂಗುಲ ಆಸ್ತಿಯ ದುರಾಸೆಗೆ ಬಿದ್ದು ದಾಯಾದಿಗಳಾಗಿ ಅತೃಪ್ತ ಜೀವನವನ್ನು ನಡೆಸುತ್ತಿರುವುದು ನಮ್ಮ ನಡುವೆ ಎಷ್ಟೋ ಉದಾಹರಣೆಗಳಿವೆ ಇಂತಹ ದರ್ಯೋಧನ ಗುಣಗಳಿಗೆ ಅಂತ್ಯವಿಲ್ಲವೇ….?
ನೆಲ, ಜಲ, ಭಾಷೆ, ಆಹಾರಗಳನ್ನು ತಾಯಿಗೆ ಹೋಲಿಸಿ ಧನ್ಯತಾ ಭಾವದಿಂದ ಬದುಕುತ್ತಿರುವವರು ನಾವು ಯತ್ರ ನಾರ್ಯೇಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ ಪದ್ದತಿಯನ್ನು ನಂಬಿರುವವರು ನಾವು. ಆದರೂ ನಮ್ಮ ನಡುವೆ ದುಶ್ಯಾಸನ ಗುಣಗಳು ಇನ್ನೂ ಜೀವಂತ, ಕಾಮಾಂಧರ ಕಣ್ಣನ್ನು ಮೆಚ್ಚಿಸಲು ದ್ರೌಪದಿಯ ವಸ್ತ್ರಾಪಹರಣದಂತಹ ನೀಚ ಕೃತ್ಯಕ್ಕೆ ಕೈ ಹಾಕಿದಾತ. ಈಗಲೂ ಕೆಲವು ನೀಚ ಪುರುಷರು ಸ್ತ್ರೀಯ ಮೇಲೆ ಬಲಾತ್ಕಾರ ಅತ್ಯಾಚಾರಗಳ ಮೂಲಕ ಕೀಳಾಗಿ ನಡೆಸಿಕೊಂಡು ದುಶ್ಯಾಸನನನ್ನು ನೆನಪಿಸುತ್ತಿರುವುದು ಶೋಚನೀಯ.. ಏಕೆ ಹೀಗೆ…?
ಕುರುವಂಶದ ದೊರೆ ಧೃತರಾಷ್ಟ್ರ ಸಜ್ಜನ. ದೊರೆಯಾದರು ಸಹ ತನ್ನ ಮಗ ದುರ್ಯೋಧನ ತುಳಿದಿದ್ದ ಅಧರ್ಮದ ಮಾರ್ಗ ಅರಿಯದಾದ. ಅದರ ಪರಿಣಾಮ ಏನಾಯಿತು ಎನ್ನುವನ್ನು ಇತಿಹಾಸದ ಪುಟಗಳು ಹೇಳಿವೆ. ಹಾಗೆಯೇ, ಇಂದಿನ ಪೋಷಕರು ತಮ್ಮ ಮಕ್ಕಳ ಪ್ರತಿ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ಹೊಂದಿರಬೇಕು. ಮಕ್ಕಳ ಮೇಲಿನ ಪ್ರೀತಿ ವಾತ್ಸಲ್ಯ ಅವರ ಮುಂದಿನ ಬದುಕಿಗೆ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು. ಆದರೂ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಯಾರದೋ ಪೋಷಕರ ಮಕ್ಕಳು ಅಪರಾಧಿಗಳಾಗಿ ನಿಂತು ಸಮಾಜದ ಮುಂದೆ ಪೊಷಕರನ್ನು ತಲೆ ತಗ್ಗಿಸುವಂತೆ ಮಾಡುತ್ತಾರೆ ಇಂತಹ ಬೆಳವಣಿಗಗೆ ಇತಿಶ್ರೀ ಹೇಳಲಾಗದೇ….?
ಇಲ್ಲಿ ಪ್ರಸ್ತಾಪಿಸಲಾಗಿರುವ ಯಾವ ವಿಷಯವೂ ಅಲ್ಲಗೆಳೆಯಲಾಗದು. ಏಕೆಂದರೆ ಪ್ರತಿ ನಿತ್ಯ ನಾವು ವಿವಿಧ ಮಾಧ್ಯಮಗಳ ಮೂಲಕ ಇಂತಹ ಘಟನೆಗಳ ಬಗ್ಗೆ ತಿಳಿದುಕೊಂಡಿರುತ್ತೇವೆ.
ಮನುಷ್ಯ ತನ್ನ ಬುದ್ಧಿ ಶಕ್ತಿಯಲ್ಲಿ ಕಂಸ, ದುರ್ಯೋಧನ, ದುಶ್ಯಾಸನ, ಧೃತರಾಷ್ಟ್ರ ಗುಣಗಳಿಗೆ ಇರಲು ಅವಕಾಶ ಮಾಡಿಕೊಟ್ಟ ಆದರೆ ಶ್ರೀಕೃಷ್ಣನಿಗೆ, ಅವನ ವಿಚಾರಗಳಿಗೆ, ತತ್ವಕ್ಕೆ ಸಮಯ ತನ್ನ ಬುದ್ಧಿಯಲ್ಲಿ ಜಾಗ ಕೊಡುವ ವಿಚಾರದಲ್ಲಿ ಬಹುಪಾಲು ಎಡವಿದ.
ಬಸವಣ್ಣನವರ ವಚನದಂತೆ ಉಳ್ಳವರು ಶಿವಾಲಯವ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯ…ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವಎಂಬಂತೆ ಹಿರಿಯರು ಮನುಷ್ಯರ ದೇಹವನ್ನು ದೇವಾಲಯಕ್ಕೆ ಹೋಲಿಕೆ ಮಾಡಿಯೂ ಆಗಿದೆ.
ನೀವು ನಾವುಗಳು ಹೃದಯವೆಂಬ ಗರ್ಭಗುಡಿಯಲ್ಲಿ ಶ್ರೀಕೃಷ್ಣನನ್ನು ನೆಲೆ ಮಾಡಿಕೊಳ್ಳಬೇಕಾಗಿದೆ. ಒಮ್ಮೆ ಹೃದಯದಿ ಶ್ರೀಕೃಷ್ಣ ನೆಲೆಯಾದನೆಂದರೆ ಬುದ್ಧಿಯನ್ನಾವರಿಸಿರುವ ಕಂಸ, ದುರ್ಯೋಧನ, ದುಶ್ಯಾಸನ, ರಾಕ್ಷಸಿ ಗುಣಗಳ ಜೊತೆಗೆ ಧೃತರಾಷ್ಟ್ರ ಕುರುಡು ಗುಣಗಳು ಸಂಹಾರವಾಗುವುದು ಖಂಡಿತ.
ಪ್ರತಿಯೊಬ್ಬರೂ ತಮ್ಮಲ್ಲಿ ಶ್ರೀಕೃಷ್ಣನನ್ನು ನೆಲೆ ಮಾಡಿಕೊಂಡು ಧರ್ಮವನ್ನು ಗೌರವಿಸಿ ಪಾಲಿಸಿದರೆ ನಮಗರಿವಿಲ್ಲದೆ ನಮ್ಮ ನಡುವೆ ಧರ್ಮದ ಉಳಿವಿಗೆ ಭಗವಂತ ನಮ್ಮ ಜೊತೆ ಕೈ ಜೋಡಿಸಲು ಅವತರಿಸಿರುತ್ತಾನೆ.
ಹಾಗೆಯೇ, ಇಡಿಯ ಜಗತ್ತು ಹೇಗೆ ನಡೆಯಬೇಕು, ಪ್ರತಿ ಮನುಷ್ಯ ತನ್ನ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು, ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಹೇಗಿದ್ದರೆ ಚೆಂದ ಎಂಬ ಕುರಿತಾಗಿನ ಸಮಸ್ತವನ್ನೂ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇದೊಂದನ್ನು ಪ್ರತಿಯೊಬ್ಬರೂ ಸರಿಯಾಗಿ ಪಠಣ ಮಾಡಿ, ಅರ್ಥೈಸಿಕೊಂಡು, ಅಳವಡಿಸಿಕೊಂಡರೆ ಜೀವನ, ಸಮಾಜವೇ ಪಾವನವಾಗುವುದು ನಿಶ್ಚಿತ..
॥ ಕೃಷ್ಣಂ ವಂದೇ ಜಗದ್ಗುರುಂ ॥
ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಲೇಖನ: ಅರ್ಪಿತ ರಾವ್ ಅಜ್ಜಂಪುರ
Discussion about this post