ಭಾದ್ರಪದ ಮಾಸದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆಯವರೆಗಿನ ಕಾಲಾವಧಿಯನ್ನು ಸಾಮಾನ್ಯವಾಗಿ ಪಿತೃಪಕ್ಷ ಎಂದು ಆಚರಿಸುತ್ತಾರೆ. (ಈ ವರ್ಷ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 8 ರವರೆಗೆ ಪಿತೃಪಕ್ಷ ಇದೆ)
ಪಿತೃಪಕ್ಷದಲ್ಲಿ ವಾತಾವರಣದಲ್ಲಿನ ತಿರ್ಯಕ್ ಲಹರಿಗಳ ಅಂದರೆ ರಜ-ತಮಾತ್ಮಕ ಲಹರಿಗಳ ಮತ್ತು ಯಮಲಹರಿಗಳ ಪ್ರಭಾವವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಿದರೆ ರಜ-ತಮಾತ್ಮಕ ಕೋಶಗಳಿರುವ ಪಿತೃಗಳಿಗೆ ಪೃಥ್ವಿಯ ವಾತಾವರಣ ಕಕ್ಷೆಯಲ್ಲಿ ಬರಲು ಸುಲಭವಾಗುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ಹೇಳಲಾದ ವಿಧಿಗಳನ್ನು ಆಯಾ ಕಾಲದಲ್ಲಿ ಮಾಡುವುದು ಹೆಚ್ಚು ಶ್ರೇಯಸ್ಕರವಾಗಿದೆ.
‘ಶ್ರಾದ್ಧ’ ಎಂದು ಹೇಳಿದೊಡನೆ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವ ಕರ್ಮಕಾಂಡದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತದೆ. ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಧರ್ಮದ್ರೋಹಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮವಾಗಿದೆ. ಶ್ರಾದ್ಧದ ವಿಷಯದಲ್ಲಿ ಮುಂದಿನ ವಿಚಾರಸರಣಿಯು ಸಮಾಜದಲ್ಲಿ ಕಂಡುಬರುತ್ತದೆ. ಪೂಜೆ ಅರ್ಚನೆ, ಶ್ರಾದ್ಧಪಕ್ಷ ಮುಂತಾದವುಗಳ ಮೇಲೆ ವಿಶ್ವಾಸವನ್ನಿಡದ ಅಥವಾ ಸಮಾಜಕಾರ್ಯವೇ ಸರ್ವ ಶ್ರೇಷ್ಠವಾಗಿದೆ ಎಂದು ಹೇಳುವವರು ಪಿತೃಗಳಿಗಾಗಿ ಶ್ರಾದ್ಧವಿಧಿಗಳನ್ನು ಮಾಡದೇ ಅದರ ಬದಲು, ‘ಬಡವರಿಗೆ ಅನ್ನದಾನ ಮಾಡುವೆವು ಅಥವಾ ಶಾಲೆಗಳಿಗೆ ಸಹಾಯ ಮಾಡುವೆವು’ ಎಂದು ಹೇಳುತ್ತಾರೆ! ಅನೇಕ ಜನರು ಇದೇ ರೀತಿ ಮಾಡುತ್ತಾರೆ! ಹೀಗೆ ಮಾಡುವುದೆಂದರೆ, ‘ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡದೇ, ಅದರ ಬದಲು ನಾವು ಬಡವರಿಗೆ ಅನ್ನದಾನ ಮಾಡುವೆವು, ಶಾಲೆಗೆ ಸಹಾಯ ಮಾಡುವೆವು’ ಎಂದು ಹೇಳಿದಂತೆಯೇ ಆಗಿದೆ.
ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ. ಹಾಗಾಗಿ ಮೇಲಿನ ಹೇಳಿಕೆಗಳು ಹಾಸ್ಯಾಸ್ಪದವೆನಿಸಿಕೊಳ್ಳುತ್ತವೆ.
ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. ತಂದೆತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ’ ಎನ್ನುತ್ತಾರೆ. ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವ ಸೂಕ್ಷ್ಮಶಕ್ತಿ ಇದೆ. ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ. ಶ್ರಾದ್ಧವನ್ನು ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿಯುತ್ತವೆ ಮತ್ತು ಈ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ಕುಟುಂಬದವರಿಗೆ ತೊಂದರೆಗಳನ್ನು ಕೊಡುವ ಸಂಭವವೂ ಇರುತ್ತದೆ. ಶ್ರಾದ್ಧವನ್ನು ಮಾಡುವುದರಿಂದ ಪಿತೃಗಳು ಆ ತೊಂದರೆಗಳಿಂದ ಮುಕ್ತರಾಗುವುದಲ್ಲದೇ ನಮ್ಮ ಜೀವನವೂ ಸುಖಮಯವಾಗುತ್ತದೆ.
ಶ್ರಾದ್ಧಕ್ಕೆ ಇಷ್ಟೊಂದು ಮಹತ್ವವಿದ್ದರೂ ಇಂದು ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮಶಾಸ್ತ್ರದ ಮೇಲಿನ ಅವಿಶ್ವಾಸ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಇತ್ಯಾದಿಗಳಿಂದ ಶ್ರಾದ್ಧವಿಧಿಯು ಅಲಕ್ಷಿಸಲ್ಪಟ್ಟಿದೆ. ಶ್ರಾದ್ಧಕರ್ಮವನ್ನು ವಾಸ್ತವವಿಲ್ಲದ ಅಯೋಗ್ಯ ಕರ್ಮಕಾಂಡವೆಂದು ಪರಿಗಣಿಸಲ್ಪಡುತ್ತ್ತಿದೆ. ಆದುದರಿಂದ ಶ್ರಾದ್ಧ ಸಂಸ್ಕಾರವೂ ಇತರ ಸಂಸ್ಕಾರಗಳಷ್ಟೇ ಆವಶ್ಯಕವಾಗಿದೆ ಎಂಬುದನ್ನು ಹೇಳುವುದು ಆವಶ್ಯಕವಾಗಿದೆ.
ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ತೊಂದರೆಗಳಿಂದ ನಮ್ಮ ರಕ್ಷಣೆ ಹೇಗಾಗುತ್ತದೆ? :
‘ಶ್ರಾದ್ಧದಿಂದ ನಿರ್ಮಾಣವಾದ ಇಂಧನವು ಮೃತವ್ಯಕ್ತಿಯ ಲಿಂಗದೇಹದಲ್ಲಿನ ತ್ರಿಗುಣಗಳ ಇಂಧನಗಳೊಂದಿಗೆ ಹೋಲುತ್ತದೆ; ಆದುದರಿಂದ ಶ್ರಾದ್ಧದಿಂದ ನಿರ್ಮಾಣವಾದ ಇಂಧನವು ಲಿಂಗದೇಹಕ್ಕೆ ದೊರಕಿ ಅದು ಕಡಿಮೆ ಕಾಲಾವಧಿಯಲ್ಲಿ ಮರ್ತ್ಯಲೋಕವನ್ನು ದಾಟುತ್ತದೆ. (ಮರ್ತ್ಯಲೋಕವು ಭೂಲೋಕ ಮತ್ತು ಭುವರ್ಲೋಕಗಳ ಮಧ್ಯದಲ್ಲಿರುತ್ತದೆ.) ಮೃತ್ಯುಲೋಕವನ್ನು ದಾಟಿದ ಲಿಂಗದೇಹಗಳಿಗೆ ಪುನಃ ಪೃಥ್ವಿಯ ವಾತಾವರಣ ಕಕ್ಷೆಯಲ್ಲಿ ಬಂದು ಪೃಥ್ವಿಯ ಮೇಲಿನ ಜನರಿಗೆ ತೊಂದರೆ ಕೊಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಶ್ರಾದ್ಧವನ್ನು ಮಾಡುವುದಕ್ಕೆ ಬಹಳ ಮಹತ್ವವಿದೆ.
ಶ್ರಾದ್ಧದಿಂದ ಆಗುವ ಲಾಭಗಳು :
ಶ್ರಾದ್ಧವನ್ನು ಮಾಡುವುದರಿಂದ ಯಾವ ಫಲಪ್ರಾಪ್ತಿಯಾಗುತ್ತದೆ ಎಂಬುದರ ಬಗ್ಗೆ ಗರುಡಪುರಾಣದ ಒಂದು ಶ್ಲೋಕವು ಮುಂದಿನಂತಿದೆ :
ಆಯುಃ ಪುತ್ರಾನ್ ಯಶಃ ಸ್ವರ್ಗಂ ಕೀರ್ತಿಂ ಪುಷ್ಟಿಂ ಬಲಂ ಶ್ರಿಯಮ್ |
ಪಶುನ್ ಸೌಖ್ಯಂ ಧನಂ ಧಾನ್ಯಂ ಪ್ರಾಪ್ನುಯಾತ್ ಪಿತೃಪೂಜನಾತ್ |
(-ಗರುಡಪುರಾಣ, ಅಂಶ 2, ಅಧ್ಯಾಯ 10, ಶ್ಲೋಕ 57)
ಅರ್ಥ: ಆಯುಷ್ಯ, ಪುತ್ರ, ಯಶಸ್ಸು, ಸ್ವರ್ಗ, ಕೀರ್ತಿ, ಪುಷ್ಠಿ, ಬಲ, ಲಕ್ಷ್ಮೀ, ಪಶು, ಸೌಖ್ಯ, ಧನ, ಧಾನ್ಯ ಇವು ಪಿತೃಪೂಜೆಯಿಂದ, ಅಂದರೆ ಶ್ರಾದ್ಧದಿಂದ ಸಿಗುತ್ತವೆ.
ಗ್ರಹಣಕಾಲದಲ್ಲಿ ಶ್ರಾದ್ಧವನ್ನು ಮಾಡುವುದರಿಂದ ಶ್ರಾದ್ಧ ಮಾಡಿದವನಿಗೆ ಭೂದಾನದ ಫಲ ಸಿಗುತ್ತದೆ.
ಒಂದು ವರ್ಷದವರೆಗೆ ಮಾಡುವ ಶ್ರಾದ್ಧದಿಂದ ‘101 ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು ? :
‘ಶ್ರಾದ್ಧದಿಂದ ‘101 ಕುಲಗಳಿಗೆ ಗತಿ ಸಿಗುವುದು’ ಎಂದರೆ ಮರಣ ಹೊಂದಿರುವ ಜೀವದೊಂದಿಗೆ ಕೊಡುಕೊಳ್ಳುವಿಕೆಯ ಸಂಬಂಧವಿರುವ ಇತರ ಸಜೀವಿಗಳಿಗೂ ಗತಿ ಸಿಗುವುದು :
‘ಕುಲ’ ಈ ಶಬ್ದವನ್ನು ‘ಆಯಾ ಜೀವಗಳ ಜೀವನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಕೊಡುಕೊಳ್ಳುವಿಕೆಯ ರೂಪದಲ್ಲಿ ಸಂಪರ್ಕಕ್ಕೆ ಬಂದಿರುವ ಇತರ ಜೀವಿಗಳು’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆಯೇ ಹೊರತು ‘ಪೀಳಿಗೆ’ ಎಂಬರ್ಥದಲ್ಲಿ ಉಪಯೋಗಿಸಲಾಗಿಲ್ಲ. ಶ್ರಾದ್ಧಾದಿ ಕರ್ಮಗಳನ್ನು ಮಾಡುವುದರಿಂದ ಆಯಾ ಲಿಂಗದೇಹಗಳ ಮೇಲೆ ಪರಿಣಾಮವಾಗಿ ಅವುಗಳ ಕೋಶಗಳಲ್ಲಿನ ಆಸಕ್ತಿಯುಕ್ತ ರಜ-ತಮ ದಾರಗಳ ವಿಘಟನೆಯಾಗುತ್ತದೆ. ಇದರಿಂದ ಆ ಜೀವಕ್ಕೆ ಗತಿ ಸಿಗುತ್ತದೆ; ಅಲ್ಲದೆ ಅದರೊಂದಿಗೆ ಅನೇಕ ಕಾರಣಗಳಿಂದ ಸಂಪರ್ಕಕ್ಕೆ ಬಂದಿರುವ ಇತರ ಸುಮಾರು 101 ಜೀವಗಳೂ ಸಹ ಆಯಾ ಕೊಡುಕೊಳ್ಳುವಿಕೆಯ ಸಂಪರ್ಕದಿಂದ ಮುಕ್ತವಾಗಿ ಸ್ವಲ್ಪಮಟ್ಟಿಗಾದರೂ ಗತಿಯನ್ನು ಪಡೆಯುತ್ತವೆ. ‘ಶ್ರಾದ್ಧವನ್ನು ಮಾಡುವುದರಿಂದ 101 ಕುಲಗಳಿಗೆ ಗತಿ ಸಿಗುತ್ತದೆ’, ಅಂದರೆ ಮೃತಪಟ್ಟ ಜೀವ ದೊಂದಿಗೆ ಕೊಡುಕೊಳ್ಳುವಿಕೆಯ ಸಂಬಂಧವಿರುವ ಇತರ ಸಜೀವಿಗಳಿಗೂ ಗತಿಯು ಸಿಗುತ್ತದೆ ಎಂಬುದು ಇದರ ಅರ್ಥವಾಗಿದೆ’.
ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧ ಇವರೆಡನ್ನೂ ಮಾಡುವುದು ಆವಶ್ಯಕವಾಗಿದೆ.
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡುವುದರ ಜೊತೆಗೆ ಪಿತೃಗಳ ತೊಂದರೆಗಳಿಂದ ಮುಕ್ತಿಯನ್ನು ನೀಡುವ ದತ್ತಾತ್ರೇಯ ದೇವರ ನಾಮಸ್ಮರಣೆಯನ್ನು ಮಾಡಬೇಕು. ಪ್ರತಿದಿನ ಶ್ರೀ ಗುರುದೇವ ದತ್ತ ಎಂದು 1-2 ಗಂಟೆಗಳ ಕಾಲ ಒಂದೆಡೆ ಕುಳಿತುಕೊಂಡು ನಾಮಸ್ಮರಣೆಯನ್ನು ಮಾಡಬೇಕು. ಪ್ರತಿ ದಿನ ದತ್ತನ ನಾಮಜಪ ಮಾಡುವುದರಿಂದ ಅತೃಪ್ತ ಪೂರ್ವಜರ ತೊಂದರೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ.
-ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥಗಳು : ‘ಶ್ರಾದ್ಧ , ಶ್ರಾದ್ಧದಲ್ಲಿನ ಕೃತಿಗಳ ಹಿನ್ನೆಲೆಯ ಶಾಸ್ತ್ರ
Discussion about this post