ನೀವು ಯಾವುದೇ ಭಾರತೀಯ ಪುರಾಣಗಳನ್ನು ನೋಡಿ. ಅದೆಲ್ಲವೂ ಋಷಿ ಛಂದಸ್ಸು ಕೂಡಿಯೇ ಇರುವಂತಹ ಶ್ಲೋಕಗಳೇ. ಗದ್ಯದಲ್ಲಿ ಯಾವ ಪುರಾಣಗಳನ್ನೂ ರಚಿಸಲಿಲ್ಲ. ಮಹಾಭಾರತ, ರಾಮಾಯಣಾದಿ ಸಹಿತ ಅಷ್ಟಾದಶ ಪುರಾಣಗಳೆಲ್ಲವೂ ಶ್ಲೋಕ ರೂಪದಲ್ಲೇ ಇರುವುದು. ಇದರಲ್ಲಿ ಮಹಾಪುರಾಣ, ಉಪಪುರಾಣಗಳೆಂಬ ಎರಡು ವಿಧ…
ಪುರಾಣಗಳು-
ಬ್ರಾಹ್ಮ- 10 ಸಾವಿರ ಶ್ಲೋಕ
ಪದ್ಮ- 55 ಸಾವಿರ ಶ್ಲೋಕ
ವೈಷ್ಣವ- 23 ಸಾವಿರ ಶ್ಲೋಕ
ಶೈವ- 24 ಸಾವಿರ ಶ್ಲೋಕ
ಭಾಗವತ- 18 ಸಾವಿರ ಶ್ಲೋಕ
ಮಾರ್ಕಂಡೇಯ- 9 ಸಾವಿರ ಶ್ಲೋಕ
ಬ್ರಹ್ಮ ವೈವರ್ತ- 17 ಸಾವಿರ ಶ್ಲೋಕ
ಲೈಂಗ(ಲಿಂಗ ಪುರಾಣ)-11 ಸಾವಿರ ಶ್ಲೋಕ
ವರಾಹ-24 ಸಾವಿರ ಶ್ಲೋಕ
ಸ್ಕಾಂದ- 80 ಸಾವಿರದ ನೂರು ಶ್ಲೋಕ
ವಾಮನ- 10 ಸಾವಿರ ಶ್ಲೋಕ
ಕೂರ್ಮ- 17 ಸಾವಿರ ಶ್ಲೋಕ
ಮತ್ಸ್ಯ- 14 ಸಾವಿರ ಶ್ಲೋಕ
ಆಗ್ನೇಯ- 15400 ಶ್ಲೋಕ
ಭವಿಷ್ಯ- 14500 ಶ್ಲೋಕ
ಗಾರುಡ- 980ಸಾವಿರ ಶ್ಲೋಕ
ಬ್ರಹ್ಮಾಂಡ- 12 ಸಾವಿರ ಶ್ಲೋಕ
ಒಟ್ಟು 39 ಲಕ್ಷದ, 99 ಸಾವಿರ ಶ್ಲೋಕಗಳು ಈ ಅಷ್ಟಾದಶ ಪುರಾಣಗಳೊಳಗಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಇದರಲ್ಲಿ ಬರುವುದಿಲ್ಲ.
ಇದು ಉಪಪುರಾಣದಲ್ಲಿ ಸೇರಿದೆ. ಯಾಕೆಂದರೆ ಮಹಾ ಪುರಾಣಗಳಿಗೆ ನಿಯಮಗಳಿವೆ.ಅದು ಯಾವುದೆಂದರೆ- ಸರ್ಗ, ವಿಸರ್ಗ, ವೃತ್ತಿ, ರಕ್ಷಾ, ಅಂತರ, ವಂಶ, ವಂಶಾನು ಚರಿತ, ಸಂಸ್ಥಾ, ಹೇತು, ಅಪಾಶ್ರಯಗಳೆಂಬ 10 ಲಕ್ಷಣಗಳಿರಬೇಕು.

ಉಪಪುರಾಣಗಳಲ್ಲಿ- ಸರ್ಗ, ಪ್ರತಿಸರ್ಗ, ವಂಶ, ಮನ್ವಂತರ ವರ್ಣನೆ, ವಂಶಾನುಚರಿತಗಳೆಂಬ ಐದು ಲಕ್ಷಣಗಳು ಮಾತ್ರ ಇರುತ್ತದೆ.
ಈ ಹದಿನೆಂಟು ಪುರಾಣಗಳನ್ನು ಭಗವಾನ್ ವೇದವ್ಯಾಸರೇ(ಕೃಷ್ಣ ದ್ವೈಪಾಯನರು) ಬರೆದಿಲ್ಲ. ಅವರ ಅಂಕಿತದಲ್ಲಿ ಅನೇಕ ಋಷಿಮುನಿಗಳು, ವಚನಾನುಸಾರ ವೇದದಲ್ಲಿ ಪ್ರತಿಪಾದಿತವಾಗಿರುವ ರಹಸ್ಯಾರ್ಥಗಳನ್ನು ವಿವರಿಸುವ ಸಲುವಾಗಿ ಪುರಾಣಗಳನ್ನು ಬರೆದುದಾಗಿದೆ. ಬ್ರಹ್ಮನ ವಾಣಿಗಿಂತ ಮೊದಲೇ ಹೊರಬಿದ್ದಂತಹ ಇದಕ್ಕೆ ಪುರಾಣ ಎಂದು ಹೆಸರಾಗಿದೆ. ಪುರಾ+ನೀಯತೇ ಇತಿ ಪುರಾಣಂ ಎಂದು ಹೇಳುತ್ತದೆ. ಇಷ್ಟೇ ಅಲ್ಲದೆ ಈ ಪ್ರತೀ ಶ್ಲೋಕಗಳಗೂ ಛಂಧಸ್ಸುಗಳಿವೆ. ಅವುಗಳಿಗೆ ನಿರ್ಧಿಷ್ಟ ಅಕ್ಷರ ಸಂಖ್ಯೆಗಳೂ ಇವೆ. ಸ್ಥಾಯೀ ಶೃತಿಗಳೂ, ಅದರ ಅಭಿಮಾನಿ ದೇವತೆಗಳೂ ಇದ್ದಾರೆ. ಈಗಿನ ನವ್ಯ ಸಾಹಿತ್ಯಕ್ಕೆ ಯಾವ ಆಯಾಮದಲ್ಲೂ ಹೋಲಿಕೆಯಾಗದು. ಅದು ಬಿಡಿ ಪಂಪಾದಿ ಮಹಾ ಕವಿಗಳು ಬರೆದುದಕ್ಕೂ ಹೋಲಿಕೆಯಾಗದು. ಪ್ರಧಾನ ಛಂದಸ್ಸುಗಳು ಏಳು. ಅವುಗಳೆಂದರೆ-
ಗಾಯತ್ರಿ-24 ಅಕ್ಷರ; ಉಷ್ಣಿಕ್-28; ಅನುಷ್ಟುಪ್-32; ಬೃಹತೀ-36; ಪಂಕ್ತೀ- 40; ತ್ರಿಷ್ಟುಪ್-44; ಜಗತೀ-48.
ಇವುಗಳಿಗೆ ಸ್ಥಾಯೀ ಶೃತಿ ಕ್ರಮವಾಗಿ-ಶಡ್ಜ, ಋಷಭ, ಗಾಂಧಾರ, ಮದ್ಯಮ, ಪಂಚಮ, ದೈವತ, ನಿಷಾದ. ದೇವತೆಗಳೂ ಕ್ರಮವಾಗಿ-ಅಗ್ನಿ ಪತ್ನಿ ಸ್ವಾಹಾದೇವಿ, ಸೂರ್ಯ ಪತ್ನಿ ಸಂಜ್ಞಾ ದೇವಿ, ಚಂದ್ರ ಪತ್ನಿ ರೋಹಿಣೀ ದೇವಿ, ಬೃಹಸ್ಪತಿ ಪತ್ನಿ ತಾರಾ ದೇವಿ, ಮಿತ್ರಾವರುಣರ ಪತ್ನಿಯರು, ಇಂದ್ರ ಪತ್ನಿ ಶಚೀ ದೇವಿ, ಸರ್ವ ದೇವತಾ ಸ್ತ್ರೀಯರು ಆಗುತ್ತಾರೆ.

ಯಾಕೆ ಇಂತಹ ನಿಯಮ?
ಲೇಖಕರ ಭಾವನೆಯನ್ನು ಈ ಛಂದೋಬದ್ದವಾಗಿ, ಶೃತಿಯಲ್ಲಿ ಪಠಿಸಿದಾಗ ಮಾತ್ರ ಭಾವಾರ್ಥ ತಿಳಿಯಬಹುದು. ಈಗಿನ ವಿಚಾರವಾದಿಗಳಿಗೆ ರಾಮ ಗೋಮಾಂಸ ತಿಂದ, ಕೃಷ್ಣ ಹುಡುಗಿ ಹುಚ್ಚ, ದೇವತೆಗಳು ಕುಡುಕರು ಇತ್ಯಾದಿ ಅಸಬದ್ದವಾಗಿ ಕಂಡದ್ದು ನಿಯಮ ಇಲ್ಲದೆ ಅಧ್ಯಯನ ಮಾಡಿದುದರಿಂದಾಗಿ.
ನೀವು ಒಂದೊಂದು ಋಷಿಗಳ ಶ್ಲೋಕ ಓದಿದರೆ ಅವರವರ ಶೈಲಿ ಭಾವನೆಗಳನ್ನು ಸ್ವಲ್ಪ ಮಟ್ಟಿಗಾದರೂ ಅರ್ಥ ಮಾಡೊಕೊಳ್ಳಬಹುದು.. ಅತ್ಯಂತ tough ವ್ಯಾಕರಣ, ಶಬ್ದ ಸಂಯೋಜನೆಗಳಲ್ಲಿ ಇರುವುದರಿಂದ ಗುರು ಉಪದೇಶ ಇಲ್ಲದೆ ಹೇಳಿದರೆ ಅರ್ಥ ಅಪಾರ್ಥವಾದೀತು. ಒಟ್ಟಾರೆ ಓದಿದರೆ ಏನಾಗುತ್ತದೆ ಎಂದರೆ ಒಬ್ಬ ಆಳಿನಲ್ಲಿ ಎರಡೇ ವಸ್ತು ತರಲು ಹೇಳಿದರಂತೆ. ಅದು ಮೆಣಸು ಮತ್ತು ಜೀರಿಗೆ. ಆಳು ಇದನ್ನು ಬಾಯಿಯಲ್ಲಿ ಹೇಳುತ್ತಾ ಅಂಗಡಿಗೆ ತಲುಪಿದಾಗ ಮೇಣ- ಸೂಜಿ-ರಿಗೆ ಆಯ್ತಂತೆ. ರಿಗೆ ಎಂಬುದಿಲ್ಲಪ್ಪ. ಮೇಣ ಮತ್ತು ಸೂಜಿ ಇದೆ ಎಂದು ಕೊಟ್ಟು ಕಳುಹಿಸಿದರಂತೆ.
-ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ

















