ಸುಳ್ಯ: ಹಿಂದೂ ಪರ ಯುವ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಗುರುಪ್ರಸಾದ್ ಪಂಜ ಅವರಿನ್ನು ನವೆಂಬರ್ 13ರವರೆಗೂ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.
ಚೈತ್ರಾ ಕುಂದಾಪುರ ಮೇಲೆ ಫೇಸ್ ಬುಕ್‌ಗಳಲ್ಲಿ ಅನುಚಿತ ಕಾಮೆಂಟ್‌ಗಳನ್ನು ಹಾಕಿದ ವಿಚಾರವನ್ನು ಪ್ರಶ್ನಿಸಲು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಚೈತ್ರಾ ಕುಂದಾಪುರ ಹಾಗೂ ಸಂಘಟಕರ ಜೊತೆಗೆ ಹೊಡೆದಾಟ ಸಂಭವಿಸಿದ್ದು, ಈ ವೇಳೆ ಮಾನಭಂಗ ಹಾಗೂ ದರೋಡೆಗೆ ಯತ್ನಿಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ.
ಗಲಾಟೆಯಲ್ಲಿ ತಮ್ಮ ತಲೆಗೆ ಮಾರಣಾಂತಿಕ ಪೆಟ್ಟಾಗಿದೆ ಎಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಂಜ ಅವರನ್ನು ಪೊಲೀಸರು ಬಂಧಿಸಿ, ಸುಳ್ಯಕ್ಕೆ ಕರೆತಂದಿದ್ದರು.
ಮಧ್ಯಾಹ್ನ ನ್ಯಾಯಾಲಯಕ್ಕೆ ಪಂಜ ಅವರನ್ನು ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇನ್ನು, ಪಂಜ ಅವರ ಪರ ವಾದ ಮಂಡಿಸಿದ ವಕೀಲ ವೆಂಕಪ್ಪ ಗೌಡ, ಗುರುಪ್ರಸಾದ್ ಅವರ ತಲೆಗೆ ಪೆಟ್ಟಾಗಿದೆ. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಬೇಕು ಎಂದು ವಿನಂತಿಸಿದರು. ಆದರೆ ಇದಕ್ಕೆ ಒಪ್ಪದೇ ಕಠಿಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು ಕಸ್ಟಡಿಗೆ ಹೋಗಬೇಕಾದ ಆರೋಪಿಗಳನ್ನು ಆಸ್ಪತ್ರೆಗೆ ಕಳುಹಿಸುವ ಸಂಪ್ರದಾಯ ಅನುಸರಿಸಿದರು ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದಂತೆ ಆಗುತ್ತದೆ. ಇವರಿಗೆ ಏನೂ ಆಗಿಲ್ಲ. ನಾಟಕ ಆಡುವುದು ಸರಿಯಲ್ಲ ಎಂದು ಚಾಟಿ ಬೀಸಿದರು.
ಆದರೆ, ಆಸ್ಪತ್ರೆಗೆ ದಾಖಲಿಸಲು ಆದೇಶ ನೀಡಬೇಕು ಎಂದು ಮತ್ತೆ ವಕೀಲರು ವಿನಂತಿಸಿದಾಗ, ನಿನಗೆ ಏನಾಗುತ್ತದೆ ಎಂದು ಪಂಜ ಅವರನ್ನು ಪ್ರಶ್ನಿಸಿದ್ದಾರೆ. ನನಗೆ ತಲೆ ತಿರುಗುತ್ತದೆ ಎಂದು ಪ್ರತಿಕ್ರಿಯಿಸಿದ ಪಂಜ ಅವರಿಗೆ ನ್ಯಾಯಾಲಯದ ಹಾಲ್ ನಲ್ಲಿ ಕೆಲವು ದೂರ ನಡೆಸಿದರು. ಆನಂತರ ಇವರಿಗೆ ತಲೆ ತಿರುಗುವುದಿಲ್ಲ. ಹಾಗೆ ತಿರುಗಿದ್ದರೆ ಈಗ ಬೀಳಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಆದರೆ, ಪಟ್ಟು ಬಿಡದ ವಕೀಲು ಮತ್ತೆ ಮನವಿ ಮಾಡಿದರು. ಇದಕ್ಕೆ ಕೊಂಚ ಮಣಿದ ನ್ಯಾಯಾಧೀಶರು ಅಗತ್ಯ ಬಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲಿಸುವಂತೆ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದರು.
Discussion about this post