ಬೆಂಗಳೂರು: ನಿನ್ನೆ ನಿಧನರಾದ ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ತಮ್ಮ ಕರ್ಮಭೂಮಿಯಿಂದಲೇ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯಂತೆ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಅವರ ಸಹೋದರ ನಂದಕುಮಾರ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದ ನ್ಯಾಶನಲ್ ಕಾಲೇಜು ಮೈದಾನದಿಂದ ಸಾವಿರಾರು ಅಭಿಮಾನಿ ಹಾಗೂ ಕಾರ್ಯತರ್ಕರೊಂದಿಗೆ ಮೆರವಣಿಗೆಯಲ್ಲಿ ಚಾಮರಾಜಪೇಟೆ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ಮಧ್ಯಾಹ್ನ 1.10ರ ವೇಳೆಗೆ ತರಲಾಯಿತು.
ಮಾರ್ಗದುದ್ದಕ್ಕೂ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ನೆರೆದು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಅಗಲಿದ ಕೇಂದ್ರ ಸಚಿವರಿಗೆ ಭಾರತೀಯ ರಕ್ಷಣಾ ಪಡೆಗಳಾದ ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ವತಿಯಿಂದ ಸಕಲ ಸೇನೆ ಹಾಗೂ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಶಿಷ್ಟಾಚಾರದಂತೆ ಸೇನೆಯಿಂದ ಶೋಕಶಾಸ್ತ್ರ ಹಾಗೂ ಸಲಾಮಿ ಶಾಸ್ತ್ರದ ಸೆಲ್ಯೂಟ್ ಗೌರವ ಸಲ್ಲಿಸಲಾಯಿತು.
ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ರವಿಶಂಕರ್ ಪ್ರಸಾದ್, ಹರ್ಷವರ್ಧನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ರಾಮದಾಸ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ರಾಜ್ಯ ಸರ್ಕಾರದ ಪರವಾಗಿ ಸಚಿವ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಅನಂತಕುಮಾರ್ ಅತ್ಯಾಪ್ತ ಗೆಳೆಯ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಏರ್ ಮಾರ್ಷಲ್ ಎ.ಕೆ. ಬಡೋರಿಯಾ, ಮೇಜರ್ ಜನರಲ್ ಕಮಾಂಡೆಂಟ್ ಮಾಧವ್ ಅವರುಗಳು ಅಂತಿಮವಾಗಿ ಪುಷ್ಪ ನಮನ ಸಲ್ಲಿಸಿದರು.




ಆನಂತರ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಶಿಷ್ಟಾಚಾರದಂತೆ ಅನಂತಕುಮಾರ್ ಅವರ ಕುಟುಂಬಸ್ತರಿಗೆ ನೀಡಲಾಯಿತು. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ರಾಷ್ಟ್ರಧ್ವಜವನ್ನು ಸ್ವೀಕರಿಸಿದರು. ಧ್ವಜ ಹಸ್ತಾಂತರಿಸಿದ ಮೇಜರ್, ತೇಜಸ್ವಿನಿ ಅವರಿಗೆ ಗೌರವಪೂರ್ವಕವಾಗಿ ಸೆಲ್ಯೂಟ್ ಮಾಡಿದರು.
ಅಲ್ಲಿಯವರೆಗೂ ಸೇನೆಯ ವಶದಲ್ಲಿದ್ದ ಪಾರ್ಥಿವ ಶರೀರವನ್ನು ಕುಟುಂಬಸ್ತರಿಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಯಿತು.
ಆನಂತರ ಧಾರ್ಮಿಕ ವಿಧಿವಿಧಾನಗಳನ್ನು ಹಿರಿಯ ಪುರೋಹಿರಾದ ಭಾನುಪ್ರಕಾಶ್ ಶರ್ಮಾ ಹಾಗೂ ಶ್ರೀನಾಥ್ ಶರ್ಮಾ ಅವರ ನೇತೃತ್ವದಲ್ಲಿ ಸ್ಮಾರ್ಥ ಸಂಪ್ರದಾಯದ ಪ್ರಕಾರ ನೆರವೇರಿಸಲಾಯಿತು.
ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯಂತೆ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಅವರ ಸಹೋದರ ನಂದಕುಮಾರ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಆ ಮೂಲಕ ಜನಾನುರಾಗಿಯಾಗಿದ್ದ ಕೇಂದ್ರ ಸಚಿವ ಪಂಚಭೂತಗಳಲ್ಲಿ ಲೀನವಾದರು.
ಅಗ್ನಿಸ್ಪರ್ಶವಾದಾಕ್ಷಣ ರಕ್ಷಣಾ ಪಡೆಗಳು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದವು.
ಅಂತಿಮ ಸಂಸ್ಕಾರಕ್ಕೆ 35 ಕೆಜಿ ತುಪ್ಪ, 1 ಟನ್ ಸರ್ವೆ ಮರದ ಕಟ್ಟಿಗೆ, 5 ಕೆಜಿ ಕರ್ಫೂರ ಬಳಕೆ ಮಾಡಲಾಯಿತು.
ಅಂತ್ಯಕ್ರಿಯೆ ವೇಳೆ 50 ಜನ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸೇರಿದಂತೆ ರಾಜ್ಯ ಮಟ್ಟದ ಕೆಲವು ನಾಯಕರಿಗೆ ಮಾತ್ರ ಒಳಗಡೆ ಅವಕಾಶ ಕಲ್ಪಿಸಲಾಗಿತ್ತು.
ರುದ್ರಭೂಮಿ ಸುತ್ತಲಿನ ಕಟ್ಟಡ, ಮರಗಳ ಮೇಲೆ ನಿಂತುಕೊಂಡು ಅಂತ್ಯಸಂಸ್ಕಾರ ವೀಕ್ಷಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಿದರು.
ನೆರೆದಿದ್ದ ಅಭಿಮಾನಿಗಳು ಅನಂತಕುಮಾರ್ ಅಮರ್ ರಹೇ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದು ಮುಗಿಲು ಮುಟ್ಟಿತ್ತು.
LinkedIn shares Bengaluru’s Top Companies for career growth in 2026
Kalpa Media House | India | LinkedIn, the world's largest professional network, today unveiled its 2026 Top Companies list for...
Read moreDetails














